ಕಲೆಗೆ ಯಾವುದೇ ಗಡಿ ಇಲ್ಲ. ದೇಶ-ಭಾಷೆಗಳನ್ನೂ ಮೀರಿ ಸಿನಿಮಾ ಬೆಳೆಯುತ್ತದೆ. ಒಟಿಟಿ ಬಳಕೆ ಹೆಚ್ಚಿದ ನಂತರ ಪ್ರೇಕ್ಷಕರು ಎಲ್ಲ ದೇಶಗಳ ಸಿನಿಮಾಗಳನ್ನೂ ನೋಡಿ ಎಂಜಾಯ್ ಮಾಡುವ ಟ್ರೆಂಡ್ ಜೋರಾಗಿದೆ. ಆ ಪೈಕಿ ಕೆಲವು ಸಿನಿಮಾಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ತೆಲುಗಿನ ‘ಮೇಜರ್’ ಚಿತ್ರವನ್ನು ಪಾಕಿಸ್ತಾನದ ಜನರು ಮುಗಿಬಿದ್ದು ನೋಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅಡಿವಿ ಶೇಷ್ (Adivi Sesh) ಮತ್ತು ಸಾಯಿ ಮಂಜ್ರೇಕರ್ ಅವರು ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾ ನೆಟ್ಫ್ಲಿಕ್ಸ್ ಮೂಲಕ ಒಟಿಟಿಗೆ ಕಾಲಿಟ್ಟಿತು. ಎಲ್ಲ ಕಡೆಗಳಿಂದಲೂ ‘ಮೇಜರ್’ (Major Movie) ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪಾಕಿಸ್ತಾನದ (Pakistan) ಪ್ರೇಕ್ಷಕರು ಈ ಸಿನಿಮಾ ಬಗ್ಗೆ ವಿಶೇಷ ಆಸಕ್ತಿ ತೋರಿಸಲು ಕಾರಣ 26/11 ಮುಂಬೈ ಅಟ್ಯಾಕ್ ಘಟನೆ!
ಹೌದು, ಈ ಸಿನಿಮಾದ ಮುಖ್ಯ ಕಥಾಹಂದರವೇ 26/11 ಘಟನೆ. ಪಾಕ್ ಭಯೋತ್ಪಾದಕರು ಮುಂಬೈನ ತಾಜ್ ಹೋಟೆಲ್ ಮೇಲೆ ದಾಳಿ ಮಾಡಿದ ಕರಾಳ ದಿನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಭಯೋತ್ಪಾದಕರ ವಿರುದ್ಧ ಹೋರಾಡುತ್ತಾ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರು ಅಸುನೀಗಿದ್ದರು. ಅವರ ಬಯೋಪಿಕ್ ಮಾದರಿಯಲ್ಲಿ ‘ಮೇಜರ್’ ಸಿನಿಮಾ ಮೂಡಿಬಂದಿದೆ.
ಥಿಯೇಟರ್ನಲ್ಲಿ ಜೂನ್ 3ರಂದು ‘ಮೇಜರ್’ ಸಿನಿಮಾ ತೆರೆಕಂಡಿತು. ಉತ್ತಮ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುವುದರ ಜೊತೆಗೆ ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿದ್ದರಿಂದ ಚಿತ್ರತಂಡಕ್ಕೆ ಖುಷಿ ಆಗಿತ್ತು. ಈಗ ಒಟಿಟಿಯಲ್ಲೂ ಈ ಚಿತ್ರವನ್ನು ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಭಾರತದ ಸಿನಿಮಾದಲ್ಲಿ ಪಾಕಿಸ್ತಾನದ ಬಗ್ಗೆ ಯಾವ ರೀತಿಯ ಅಭಿಪ್ರಾಯವನ್ನು ಬಿಂಬಿಸಲಾಗಿದೆ ಎಂಬುದನ್ನು ತಿಳಿಯುವ ಕೌತುಕ ಅಲ್ಲಿನ ಪ್ರೇಕ್ಷಕರಿಗೆ ಇದೆ. ಹಾಗಾಗಿ ಪಾಕ್ ಪ್ರೇಕ್ಷಕರು ನೆಟ್ಫ್ಲಿಕ್ಸ್ನಲ್ಲಿ ‘ಮೇಜರ್’ ಚಿತ್ರವನ್ನು ಮುಗಿಬಿದ್ದು ನೋಡುತ್ತಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನ, ಅಮೆರಿಕದಲ್ಲೂ ಅನುಷ್ಕಾ ಶರ್ಮಾ ಹೋಲುವ ನಟಿಯರು; ಒಬ್ಬರಿಗೆ ಇಷ್ಟ, ಮತ್ತೊಬ್ಬರಿಗೆ ಕಷ್ಟ
ಜುಲೈ 7ರಂದು ಪಾಕಿಸ್ತಾನದಲ್ಲಿ ‘ಮೇಜರ್’ ಸಿನಿಮಾ ನೆಟ್ಫ್ಲಿಕ್ಸ್ ಟ್ರೆಂಡಿಂಗ್ನಲ್ಲಿ ನಂ.1 ಆಗಿತ್ತು. ಭಾರತದಲ್ಲೂ ಈ ಚಿತ್ರಕ್ಕೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡುತ್ತಿದ್ದಾರೆ. ಆ ಮೂಲಕ ನಟ ಅಡಿವಿ ಶೇಷ್ ಅವರ ವೃತ್ತಿ ಜೀವನಕ್ಕೆ ದೊಡ್ಡ ಮೈಲೇಜ್ ಸಿಕ್ಕಿದೆ. ಸಂದೀಪ್ ಉನ್ನಿಕೃಷ್ಣನ್ ಅವರ ಪಾತ್ರದಲ್ಲಿ ಅವರ ನಟನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾಗೆ ಶಶಿ ಕಿರಣ್ ಟಿಕ್ಕಾ ನಿರ್ದೇಶನ ಮಾಡಿದ್ದಾರೆ.