
ಬಾಲಿವುಡ್ ನಟ ಅಜಯ್ ದೇವಗನ್ ಅವರು ಈ ವರ್ಷ ಸೋಲು ಮತ್ತು ಗೆಲುವು ಎರಡನ್ನೂ ಕಂಡಿದ್ದಾರೆ. ‘ಶೈತಾನ್’ ಸಿನಿಮಾದಿಂದ ಅವರಿಗೆ ಗೆಲುವು ಸಿಕ್ಕಿತು. ಆದರೆ ‘ಮೈದಾನ್’ ಮತ್ತು ‘ಔರೋ ಮೆ ಕಹಾ ಧಮ್ ಥಾ’ ಸಿನಿಮಾದಿಂದ ಸೋಲು ಅನುಭವಿಸುವಂತಾಯಿತು. ಈಗ ಎರಡು ಸಿನಿಮಾಗಳ ಸತತ ಸೋಲಿನಿಂದ ಅವರಿಗೆ ಬೇಸರ ಆಗಿದೆ. ಚಿತ್ರಮಂದಿರದಲ್ಲಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ‘ಔರೋ ಮೆ ಕಹಾ ಧಮ್ ಥಾ’ ಚಿತ್ರವನ್ನು ನೋಡಿಲ್ಲ. ಈಗ ಈ ಸಿನಿಮಾ ಒಟಿಟಿಗೆ ಬಂದಿದೆ. ‘ಅಮೇಜಾನ್ ಪ್ರೈಂ ವಿಡಿಯೋ’ದಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಿದೆ.
ಲವ್ ಸ್ಟೋರಿ ಇರುವ ‘ಔರೋ ಮೆ ಕಹಾ ಧಮ್ ಥಾ’ ಸಿನಿಮಾದಲ್ಲಿ ಅಜಯ್ ದೇವಗನ್ ಮತ್ತು ಟಬು ಅವರು ಜೋಡಿಯಾಗಿ ನಟಿಸಿದ್ದಾರೆ. ಚಿತ್ರಮಂದಿರದಲ್ಲಿ ಈ ಸಿನಿಮಾ ಆಗಸ್ಟ್ 2ರಂದು ಬಿಡುಗಡೆ ಆಗಿತ್ತು. ಪ್ರೇಕ್ಷಕರನ್ನು ಸೆಳೆದುಕೊಳ್ಳುವಲ್ಲಿ ಸಿನಿಮಾ ವಿಫಲವಾಯಿತು. ನೂರಾರು ಕೋಟಿ ರೂಪಾಯಿ ಬಜೆಟ್ನಲ್ಲಿ ಈ ಚಿತ್ರ ನಿರ್ಮಾಣ ಆಗಿತ್ತು. ಆದರೆ ಕಲೆಕ್ಷನ್ ಆಗಿದ್ದು ಕೇವಲ 8.5 ಕೋಟಿ ರೂಪಾಯಿ. ಅಜಯ್ ದೇವಗನ್ ಅವರಂತಹ ಸ್ಟಾರ್ ಹೀರೋ ಸಿನಿಮಾಗೆ ಇದು ತುಂಬ ಕಳಪೆ ಕಲೆಕ್ಷನ್.
ಸ್ಟಾರ್ ನಟರ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಸೋತರೂ ಕೂಡ ಒಟಿಟಿಯಲ್ಲಿ ಹೇಗೋ ಡೀಲ್ ಕುದುರಿಸುತ್ತವೆ. ಚಿತ್ರಮಂದಿರಕ್ಕೆ ಬಾರದೇ ಇರುವ ಅಭಿಮಾನಿಗಳು ಕೊನೇಪಕ್ಷ ಒಟಿಟಿಯಲ್ಲಾದರೂ ನೋಡುತ್ತಾರೆ ಎಂಬ ಅಭಿಪ್ರಾಯ ಅನೇಕರಿಗೆ ಇದೆ. ಹಾಗಾಗಿ ಈಗ ‘ಔರೋ ಮೆ ಕಹಾ ಧಮ್ ಥಾ’ ಸಿನಿಮಾವನ್ನು ಒಟಿಟಿಯಲ್ಲಿ ರಿಲೀಸ್ ಮಾಡಲಾಗಿದೆ. ಆದರೆ ಜನರು ಈ ಸಿನಿಮಾ ಬಗ್ಗೆ ಅಷ್ಟೇನೂ ಆಸಕ್ತಿ ತೋರಿಸಿದಂತೆ ಕಾಣುತ್ತಿಲ್ಲ.
ಇದನ್ನೂ ಓದಿ: ಕನ್ನಡದ ನಿರ್ದೇಶಕನ ಜೊತೆ ಅಜಯ್ ದೇವಗನ್ ಸಿನಿಮಾ? ನಡೆಯುತ್ತಿದೆ ಮಾತುಕಥೆ
‘ಅಮೇಜಾನ್ ಪ್ರೈಂ ವಿಡಿಯೋ’ದ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ‘ಔರೋ ಮೆ ಕಹಾ ಧಮ್ ಥಾ’ ಸಿನಿಮಾದ ಒಟಿಟಿ ರಿಲೀಸ್ ಬಗ್ಗೆ ಪೋಸ್ಟ್ ಮಾಡಲಾಗಿದೆ. ಇದಕ್ಕೆ ಕಮೆಂಟ್ ಮಾಡಿದ ಜನರು ಬೇರೊಂದು ಬೇಡಿಕೆ ಇಟ್ಟಿದ್ದಾರೆ. ‘ಮೊದಲು ಸ್ತ್ರೀ 2 ಚಿತ್ರದ ಪ್ರಸಾರ ಆರಂಭಿಸಿ’ ಎಂದು ಸಿನಿಪ್ರಿಯರು ಕಮೆಂಟ್ ಮಾಡುತ್ತಿದ್ದಾರೆ. ಆ ಸಿನಿಮಾಗೆ ಸಖತ್ ಬೇಡಿಕೆ ಇದೆ. ಸದ್ಯಕ್ಕೆ ‘ಅಮೇಜಾನ್ ಪ್ರೈಂ ವಿಡಿಯೋ’ದಲ್ಲಿ ಹೆಚ್ಚುವರಿ ಹಣ ನೀಡಿ ‘ಸ್ತ್ರೀ 2’ ನೋಡುವ ಆಯ್ಕೆಯನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಚಂದದಾರರು ಈ ಸಿನಿಮಾವನ್ನು ಹೆಚ್ಚುವರಿ ಹಣ ಪಾವತಿಸದೇ ವೀಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.