ಬಾಲಿವುಡ್ನಲ್ಲಿ ನಟ ಅಕ್ಷಯ್ ಕುಮಾರ್ (Akshay Kumar) ಅವರ ಕೆಲಸದ ಶೈಲಿಗೆ ಬೇರೆ ಯಾವ ನಟರೂ ಸಾಟಿ ಇಲ್ಲ. ತುಂಬ ವೇಗವಾಗಿ ಸಿನಿಮಾ ಕೆಲಸಗಳನ್ನು ಮುಗಿಸುವುದು ಅವರ ಸ್ಟೈಲ್. ಸರಿಯಾದ ಸಮಯಕ್ಕೆ ಶೂಟಿಂಗ್ ಶುರುವಾಗಬೇಕು, ಸರಿಯಾದ ಸಮಯಕ್ಕೆ ಮುಗಿಯಬೇಕು. ಆ ರೀತಿ ಕಟ್ಟುನಿಟ್ಟಿನ ವೇಳಾಪಟ್ಟಿ ಹಾಕಿಕೊಂಡು ಅಕ್ಷಯ್ ಕುಮಾರ್ ಕೆಲಸ ಮಾಡುತ್ತಾರೆ. ಆ ಕಾರಣದಿಂದ ಅವರನ್ನು ಕಂಡರೆ ಎಲ್ಲ ನಿರ್ಮಾಪಕರಿಗೂ ಅಚ್ಚುಮೆಚ್ಚು. ವರ್ಷಕ್ಕೆ ಮೂರು ಅಥವಾ ನಾಲ್ಕು ಸಿನಿಮಾ ಮಾಡಬೇಕು ಎಂಬುದು ಅಕ್ಷಯ್ ಕುಮಾರ್ ಟಾರ್ಗೆಟ್. ಆದರೆ ಕೊರೊನಾ ಕಾರಣಗಳಿಂದ ಆ ವೇಗಕ್ಕೆ ಕೊಂಚ ಪೆಟ್ಟು ಬಿದ್ದಿದೆ. ಆದರೂ ಸಹ, ಅಕ್ಷಯ್ ಕುಮಾರ್ ಅವರ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗುತ್ತಿವೆ. ಇತ್ತೀಚೆಗೆ ಅವರ ‘ಅತರಂಗಿ ರೇ’ ಸಿನಿಮಾ ಒಟಿಟಿ ಮೂಲಕ ಬಿಡುಗಡೆ ಆಯಿತು. ಈಗ ‘ಬಚ್ಚನ್ ಪಾಂಡೆ’ (Bachchan Pandey Movie) ಚಿತ್ರ ರಿಲೀಸ್ಗೆ ಸಿದ್ಧವಾಗಿದೆ. ಚಿತ್ರಮಂದಿರದಲ್ಲಿಯೇ ಈ ಸಿನಿಮಾವನ್ನು ತೆರೆಕಾಣಿಸಲು ನಿರ್ಮಾಪಕರು ಸಜ್ಜಾಗಿದ್ದಾರೆ. ಅದಕ್ಕೂ ಮುನ್ನ ಪ್ರತಿಷ್ಠಿತ ಒಟಿಟಿ (OTT Platform) ಸಂಸ್ಥೆಯೊಂದರಿಂದ ಬರೋಬ್ಬರಿ 175 ಕೋಟಿ ರೂ. ಆಫರ್ ನೀಡಲಾಗಿತ್ತು. ಆದರೆ ಅದನ್ನು ಅಕ್ಷಯ್ ಕುಮಾರ್ ಮತ್ತು ಚಿತ್ರತಂಡದವರು ನೇರವಾಗಿ ತಿರಸ್ಕರಿಸಿದರು ಎಂಬ ಸುದ್ದಿ ಈಗ ಕೇಳಿಬಂದಿದೆ.
‘ಬಚ್ಚನ್ ಪಾಂಡೆ’ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರಿಗೆ ಡಿಫರೆಂಟ್ ಗೆಟಪ್ ಇದೆ. ಅವರ ಜೊತೆ ಕೃತಿ ಸನೋನ್, ಜಾಕ್ವೆಲಿನ್ ಫರ್ನಾಂಡಿಸ್ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಫರ್ಹಾದ್ ಸಮ್ಜಿ ನಿರ್ದೇಶನ ಮಾಡಿದ್ದು, ಸಾಜಿದ್ ನಾಡಿಯದ್ವಾಲಾ ನಿರ್ಮಾಣ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮಾ.18ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.
ದೇಶಾದ್ಯಂತ ಕೊರೊನಾ ವೈರಸ್ ಕಣ್ಣಾಮುಚ್ಚಾಲೆ ಆಡುತ್ತಿದೆ. ಹಾಗಾಗಿ ಅನೇಕ ರಾಜ್ಯಗಳ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಸನ ಮಿತಿ ನಿರ್ಬಂಧ ಹೇರಲಾಗಿದೆ. ಈ ಸಂದರ್ಭದಲ್ಲಿ ಅನೇಕ ಸಿನಿಮಾಗಳು ನೇರವಾಗಿ ಒಟಿಟಿ ಮೂಲಕ ಬಿಡುಗಡೆ ಆಗುತ್ತಿವೆ. ಹಾಗಾಗಿ ಸ್ಟಾರ್ ನಟರ ಸಿನಿಮಾದ ಪ್ರಸಾರ ಹಕ್ಕುಗಳನ್ನು ಕೊಂಡುಕೊಳ್ಳಲು ಅನೇಕ ಒಟಿಟಿ ಸಂಸ್ಥೆಗಳು ನಾಮುಂದು ತಾಮುಂದು ಅಂತ ಉತ್ಸಾಹ ತೋರಿಸುತ್ತಿವೆ. ಅಕ್ಷಯ್ ಕುಮಾರ್ ಅಭಿನಯದ ‘ಬಚ್ಚನ್ ಪಾಂಡೆ’ ಚಿತ್ರದ ವಿಚಾರದಲ್ಲೂ ಹಾಗೆಯೇ ಆಯಿತು ಎನ್ನುತ್ತಿವೆ ಮೂಲಗಳು.
ಬರೋಬ್ಬರಿ 175 ಕೋಟಿ ರೂಪಾಯಿ ಕೊಟ್ಟು ‘ಬಚ್ಚನ್ ಪಾಂಡೆ’ ಸಿನಿಮಾವನ್ನು ಕೊಂಡುಕೊಳ್ಳಲು ಒಟಿಟಿ ಸಂಸ್ಥೆಯೊಂದು ಮುಂದೆ ಬಂದಿತ್ತು. ಇನ್ನೇನು ಆ ಡೀಲ್ ಒಪ್ಪಿಕೊಳ್ಳಬೇಕು ಅಂತ ನಿರ್ಮಾಪಕರು ರೆಡಿ ಆಗಿದ್ದರು. ಆದರೆ ಚಿತ್ರದ ಟೀಸರ್ ಅನ್ನು ಒಮ್ಮೆ ದೊಡ್ಡ ಪರದೆಯಲ್ಲಿ ನೋಡಿದ ಬಳಿಕ ನಿರ್ಮಾಪಕರ ಮನಸ್ಸು ಬದಲಾಯಿತು. ಇದು ಥಿಯೇಟರ್ನಲ್ಲಿಯೇ ನೋಡಿ ಸವಿಯಬೇಕಾದ ಸಿನಿಮಾ ಎಂಬ ನಿರ್ಧಾರಕ್ಕೆ ಬಂದರು. ಕೂಡಲೇ ಅಕ್ಷಯ್ ಕುಮಾರ್ ಜೊತೆ ಅವರು ಚರ್ಚೆ ಮಾಡಿದರು. ಚಿತ್ರಮಂದಿರದಲ್ಲಿಯೇ ರಿಲೀಸ್ ಮಾಡಿದರೆ ಉತ್ತಮ ಎಂಬುದು ಅಕ್ಷಯ್ ಕುಮಾರ್ ಅವರ ಅಭಿಪ್ರಾಯ ಕೂಡ ಆಗಿತ್ತು. ಹಾಗಾಗಿ ಒಟಿಟಿ ಸಂಸ್ಥೆಯ 175 ಕೋಟಿ ಆಫರ್ ಅನ್ನು ಅಲ್ಲೇ ಕೈ ಬಿಡಲಾಯಿತು ಎನ್ನುತ್ತಿವೆ ಚಿತ್ರತಂಡದ ಆಪ್ತ ಮೂಲಗಳು.
ಸದ್ಯ ಅಕ್ಷಯ್ ಕುಮಾರ್ ಅವರು ರಜೆಯ ಮಜಾ ಸವಿಯುತ್ತಿದ್ದಾರೆ. ಮಗಳ ಜೊತೆ ರಣಥಂಬೋರ್ ರಾಷ್ಟ್ರೀಯ ಉದ್ಯಾನಕ್ಕೆ ಅವರು ಭೇಟಿ ನೀಡಿದ್ದು, ಅಲ್ಲಿನ ಪ್ರಾಣಿಗಳನ್ನು ಮುದ್ದಿಸಿದ್ದಾರೆ. ಮಗಳು ನಿತಾರಾ ಜೊತೆ ಸೇರಿಕೊಂಡು ಪ್ರಾಣಿಗಳಿಗೆ ಆಹಾರ ತಿನಿಸುತ್ತಿರುವ ವಿಡಿಯೋವನ್ನು ಅವರು ಇತ್ತೀಚೆಗೆ ಶೇರ್ ಮಾಡಿಕೊಂಡಿದ್ದರು. ‘ಈ ಮಣ್ಣಿನ ವಾಸನೆ, ಗೋವುಗಳಿಗೆ ಆಹಾರ ನೀಡೋದು, ಮರಗಳಿಂದ ಬೀಸುವ ತಂಗಾಳಿ.. ಇವುಗಳ ಅನುಭವನ್ನು ಮಕ್ಕಳಿಗೆ ನೀಡುವುದರಲ್ಲಿ ಏನೋ ಒಂಥರಾ ಖುಷಿ ಇದೆ. ನಾಳೆ ಆಕೆಗೆ ಕಾಡಿನಲ್ಲಿ ಹುಲಿ ಕಾಣಿಸಿದರೆ ಇನ್ನೂ ಸಂತೋಷವಾಗಲಿದೆ. ಸುಂದರವಾದ ರಣಥಂಬೋರ್ ಉದ್ಯಾನಕ್ಕೆ ಭೇಟಿ ನೀಡಿದ್ದೇವೆ. ಈ ರೀತಿಯ ಅದ್ಭುತವಾದ ಸ್ಥಳಗಳನ್ನು ನೀಡಿದ್ದಕ್ಕಾಗಿ ದೇವರಿಗೆ ಧನ್ಯವಾದಗಳು’ ಎಂದು ಅಕ್ಷಯ್ ಕುಮಾರ್ ಬರೆದುಕೊಂಡಿದ್ದರು.
ಇದನ್ನೂ ಓದಿ:
ಅಕ್ಷಯ್ ಕುಮಾರ್ ಮೇಲೆ ಕಣ್ಣಿಟ್ಟ ‘ಪುಷ್ಪ’ ನಿರ್ದೇಶಕ ಸುಕುಮಾರ್; ಅಭಿಮಾನಿಗಳಲ್ಲಿ ಹೆಚ್ಚಿತು ನಿರೀಕ್ಷೆ
ಅಕ್ಷಯ್ ಕುಮಾರ್ಗೆ 170 ಕೋಟಿ ರೂ. ಸಂಭಾವನೆ; ಹೊಸ ಸಿನಿಮಾ ಬಗ್ಗೆ ಹರಿದಾಡುತ್ತಿದೆ ಬಿಗ್ ನ್ಯೂಸ್
Published On - 9:23 am, Mon, 24 January 22