ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt) ಕಳೆದ ಕೆಲ ವರ್ಷಗಳಿಂದ ವೃತ್ತಿ ಜೀವನದಲ್ಲಿ ಭಾರಿ ಪ್ರಗತಿ ಕಂಡಿದ್ದಾರೆ. ಆಲಿಯಾ ನಟಿಸಿದ ‘ಆರ್ಆರ್ಆರ್’ ಸಿನಿಮಾ ಆಸ್ಕರ್ ಕದ ತಟ್ಟಿತು, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ನಟಿಸಿದ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಧಕ್ಕಿತು. ಸ್ವತಃ ಅವರ ನಟನೆಗೂ ರಾಷ್ಟ್ರಪ್ರಶಸ್ತಿ ಸಿಕ್ಕಿತು. ಬಬ್ಲಿ ಗರ್ಲ್ ಎಂಬಂತೆ ಗುರುತಿಸುತ್ತಿದ್ದ ಬಾಲಿವುಡ್ ಆಲಿಯಾರನ್ನು ಪ್ರಬುದ್ಧ ನಟಿಯಾಗಿ ಗುರುತಿಸಲು ಆರಂಭಿಸಿತು. ಈ ನಡುವೆ ಹಾಲಿವುಡ್ ಪದಾರ್ಪಣೆಯನ್ನು ಮಾಡಿದರು. ತಾಯಿಯಾದರು ಅದರ ಬಳಿಕವೂ ಹಲವು ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆ ನಿರ್ಮಾಪಕಿಯಾಗಿ ಹೊಸ ಪ್ರಯತ್ನವೊಂದಕ್ಕೆ ಆಲಿಯಾ ಕೈ ಹಾಕಿದ್ದಾರೆ.
ಪ್ರತಿಷ್ಠಿತ ಎಮ್ಮಿ ಅವಾರ್ಡ್ಸ್ ಬಾಚಿಕೋಂಡ ‘ಡೆಲ್ಲಿ ಕ್ರೈಂ’ ವೆಬ್ ಸರಣಿ ನಿರ್ದೇಶನ ಮಾಡಿದ್ದ ರಿಚ್ಚಿ ಮೆಹ್ತಾ ನಿರ್ದೇಶನ ಮಾಡಲಿರುವ ಹೊಸ ಕ್ರೈಂ ಡ್ರಾಮಾಕ್ಕೆ ಆಲಿಯಾ ಭಟ್ ಬಂಡವಾಳ ಹೂಡುತ್ತಿದ್ದಾರೆ. ತಮ್ಮ ಎಟರ್ನಲ್ ಸನ್ಶೈನ್ ನಿರ್ಮಾಣ ಸಂಸ್ಥೆಯ ಮೂಲಕ ಆಲಿಯಾ ನಿರ್ಮಾಣ ಮಾಡಲಿರುವ ಕ್ರೈಂ ಡ್ರಾಮಾಕ್ಕೆ ‘ಪೋಚರ್’ ಎಂದು ಹೆಸರಿಡಲಾಗಿದ್ದು, ನಿಜ ಘಟನೆಗಳನ್ನು ಆಧರಿಸಿ ಈ ವೆಬ್ ಸರಣಿಯನ್ನು ನಿರ್ಮಾಣ ಮಾಡಲಾಗುತ್ತಿದೆ. ಕೆಲವು ಜನಪ್ರಿಯ ಹಾಗೂ ಪ್ರತಿಭಾವಂತ ಕಲಾವಿದರು ಈ ವೆಬ್ ಸರಣಿಯಲ್ಲಿ ನಟಿಸಲಿದ್ದಾರೆ. ಆನೆ ದಂತ ಕಳ್ಳಸಾಗಣೆ ಕುರಿತಾದ ಕತೆಯನ್ನು ‘ಪ್ರೋಚಿಂಗ್’ ಒಳಗೊಂಡಿದ್ದು, ಭಾರತದ ಬೃಹತ್ ಆನೆ ದಂತ ಕಳ್ಳಸಾಗಣೆ ಜಾಲದ ಒಳ-ಹೊರಗನ್ನು ಈ ವೆಬ್ ಸರಣಿ ತೆರೆದಿಡಲಿದೆ.
ಇದನ್ನೂ ಓದಿ:ಅಲ್ಲು ಅರ್ಜುನ್ ಹಾಗೂ ಆಲಿಯಾ ಭಟ್ನ ಅನ್ಫಾಲೋ ಮಾಡಿದ ಇನ್ಸ್ಟಾಗ್ರಾಮ್
ಈ ವೆಬ್ ಸರಣಿಯಲ್ಲಿ ಮಲಯಾಳಂನ ಜನಪ್ರಿಯ ನಟಿ ನಿಮಿಷಾ ಸಜಯನ್, ನಟ ರೋಷನ್ ಮ್ಯಾಥ್ಯು, ದಿಬ್ಯೇಂದು ಭಟ್ಟಾಚಾರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವೆಬ್ ಸರಣಿಯು ಮಲಯಾಳಂ, ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಾಗಲಿದ್ದು, ಇದೇ ಫೆಬ್ರವರಿ 23ಕ್ಕೆ ವೆಬ್ ಸರಣಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ. ‘ಪೋಚರ್’ ವೆಬ್ ಸರಣಿಯ ಪೋಸ್ಟರ್ ಹಂಚಿಕೊಂಡಿರುವ ಆಲಿಯಾ ಭಟ್, ‘ಕಾಡಿನ ಭೀಕರ ಮೌನ ಮಾರಣಾಂತಿಕ ಪಿತೂರಿಯೊಂದನ್ನು ಬಹಿರಂಗಪಡಿಸುತ್ತದೆ ಮತ್ತು ಬೇಟೆಗಾರನ ಬೇಟೆ ಪ್ರಾರಂಭವಾಗುತ್ತದೆ’ ಎಂಬ ಸಾಲುಗಳನ್ನು ಬರೆದಿದ್ದಾರೆ.
ಆಲಿಯಾ ಭಟ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪತಿ ರಣ್ಬೀರ್ ಕಪೂರ್ ಜೊತೆಗೆ ಸಂಜಯ್ ಲೀಲಾ ಬನ್ಸಾಲಿಯ ‘ಲವ್ ಆಂಡ್ ವಾರ್’ ಸಿನಿಮಾದಲ್ಲಿ ಆಲಿಯಾ ನಟಿಸಲಿದ್ದಾರೆ. ಮತ್ತೊಂದು ಹಾಲಿವುಡ್ ಸಿನಿಮಾದಲ್ಲಿಯೂ ಸಹ ಆಲಿಯಾ ಭಟ್ ನಟಿಸುವ ಸಾಧ್ಯತೆ ಇದೆ. ಸದ್ಯಕ್ಕೆ ‘ಜಿಗ್ರಾ’ ಹೆಸರಿನ ಸಿನಿಮಾದಲ್ಲಿ ಆಲಿಯಾ ಭಟ್ ನಟಿಸುತ್ತಿದ್ದು ಸಿನಿಮಾದ ನಿರ್ಮಾಣವನ್ನು ಅವರೇ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ