ಕೋವಿಡ್ ಬಳಿಕ ಒಟಿಟಿ ಭೂಮ್ ಸಂಭವಿಸಿದೆ. ಕೋವಿಡ್ ಬಳಿಕ ಒಟಿಟಿ ಮಾರುಕಟ್ಟೆ ನೂರಾರು ಪಟ್ಟು ಹೆಚ್ಚಾಗಿದೆ. ಯಾವ ಮಟ್ಟಿಗೆಂದರೆ ಸ್ಟಾರ್ ನಟ, ನಟಿಯರು ಸಹ ಒಟಿಟಿಗಾಗಿ ಪ್ರತ್ಯೇಕವಾಗಿ ಸಿನಿಮಾ ಮಾಡುತ್ತಿದ್ದಾರೆ. ಒಟಿಟಿ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡೇ ಸಿನಿಮಾದ ಕತೆಗಳನ್ನು ಹೆಣೆಯಲಾಗುತ್ತಿದೆ. ಸಿನಿಮಾ ಮಂದಿಗೆ ಒಟಿಟಿ ಹೊಸ ಮಾರುಕಟ್ಟೆ ಅವಕಾಶವಾಗಿದೆ. ಸ್ಯಾಟಲೈಟ್ ರೈಟ್ಸ್, ಆಡಿಯೋ ರೈಟ್ಸ್ ಅನ್ನು ಮಾತ್ರವೇ ನಂಬಿಕೊಂಡಿದ್ದ ನಿರ್ಮಾಪಕರಿಗೆ ಒಟಿಟಿ ರೈಟ್ಸ್ ಅಥವಾ ಡಿಜಿಟಲ್ ರೈಟ್ಸ್ ಭರವಸೆ ನೀಡಿದೆ. ಆದರೆ ಒಟಿಟಿಗಳು ಬೆಳೆದಷ್ಟೂ, ಚಿತ್ರರಂಗಕ್ಕೆ ಅಪಾಯಕಾರಿ ಎಂದು ಹಿರಿಯ ಮತ್ತು ಯಶಸ್ವಿ ನಿರ್ಮಾಪಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ದೇಶದ ಯಶಸ್ವಿ ನಿರ್ಮಾಪಕರಲ್ಲಿ ಒಬ್ಬರು. ಕಳೆದ ಕೆಲ ವರ್ಷಗಳಿಂದ ಅಂತೂ ಅಲ್ಲು ಅರವಿಂದ್ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ‘ತಂಡೇಲ್’ ಸಿನಿಮಾದ ಮೇಲೆ ಅಲ್ಲು ಅರವಿಂದ್ ಬಂಡವಾಳ ತೊಡಗಿಸಿದ್ದರು. ಆ ಸಿನಿಮಾ ಸಹ ಬ್ಲಾಕ್ ಬಸ್ಟರ್ ಆಗಿದೆ. ಇತ್ತೀಚೆಗಿನ ಕಾರ್ಯಕ್ರಮದಲ್ಲಿ ಒಟಿಟಿಗಳ ಬಗ್ಗೆ ಮಾತನಾಡಿರುವ ಅಲ್ಲು ಅರವಿಂದ್, ಒಟಿಟಿಗಳು ಹೇಗೆ ಚಿತ್ರರಂಗವನ್ನು ಕಂಟ್ರೋಲ್ ಮಾಡುತ್ತಿವೆ ಎಂದು ವಿವರಿಸಿದ್ದಾರೆ.
ಕೆಲ ನಿರ್ಮಾಪಕರು ಇತ್ತೀಚೆಗೆ ಒಟಿಟಿಗಳನ್ನು ನಂಬಿಕೊಂಡು ಸಿನಿಮಾಗಳ ಮೇಲೆ ಬಂಡವಾಳ ಹೂಡುತ್ತಿದ್ದಾರೆ. ಇದು ಬಹಳ ಅಪಾಯಕಾರಿ. ಸಿನಿಮಾ ಸ್ವಲ್ಪ ಚೆನ್ನಾಗಿ ಓಡಿದರೆ ಸಾಕು ಒಟಿಟಿಗಳು ಖರೀದಿ ಮಾಡುತ್ತವೆ ಎಂಬ ಭ್ರಮೆಯಲ್ಲಿದ್ದಾರೆ. ಸಿನಿಮಾ ಓಡಿದರೆ ಒಟಿಟಿಗಳು ಖರೀದಿ ಮಾಡುತ್ತವೆ ಸರಿ ಒಂದೊಮ್ಮೆ ಸಿನಿಮಾಗಳು ಓಡದೇ ಇದ್ದರೆ ಏನು ಮಾಡುವುದು? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ:ಏಕಕಾಲಕ್ಕೆ ಟಿವಿ, ಒಟಿಟಿಗೆ ಮ್ಯಾಕ್ಸ್ ಸಿನಿಮಾ ಎಂಟ್ರಿ; ದಿನಾಂಕ, ಸಮಯದ ಮಾಹಿತಿ ಇಲ್ಲಿದೆ..
ಒಟಿಟಿಗಳು ಕ್ಯಾಲೆಂಡರ್ ಇಯರ್ ತಯಾರಿ ಮಾಡಿಕೊಂಡಿವೆ. ಇಂಥಹಾ ತಿಂಗಳು ಇಂಥಹಾ ಸಿನಿಮಾಗಳನ್ನು ಬಿಡುಗಡೆ ಮಾಡಬೇಕು ಎಂದು ಪಟ್ಟಿ ತಯಾರು ಮಾಡಿಕೊಂಡಿದ್ದು, ಅದರ ಪ್ರಕಾರವೇ ಒಟಿಟಿಗಳು ಸಿನಿಮಾಗಳನ್ನು ಖರೀದಿ ಮಾಡುತ್ತಿವೆ. ಸಿನಿಮಾಕ್ಕೆ ಟಾಕ್ ಚೆನ್ನಾಗಿದ್ದು, ಚಿತ್ರಮಂದಿರದಲ್ಲಿ ಚೆನ್ನಾಗಿ ಪ್ರದರ್ಶನ ಆಗುತ್ತಿದೆಯೆಂದರೆ ಆ ಟ್ರೆಂಡ್ ಅನ್ನು ಎನ್ಕ್ಯಾಶ್ ಮಾಡಿಕೊಳ್ಳಲು ಒಟಿಟಿಗಳು ಮೇಲೆ ಬಿದ್ದು ಖರೀದಿ ಮಾಡುತ್ತವೆ. ಆದೇ ಸಿನಿಮಾ ತುಸು ಹಿನ್ನಡೆ ಕಂಡರೆ, ಸ್ಟಾರ್ಗಳ ಸಿನಿಮಾಗಳಾದರೂ ಸಹ ಮೂಸಿ ನೋಡುವುದಿಲ್ಲ’ ಎಂದಿದ್ದಾರೆ ಅವರು.
ಕೋವಿಡ್ ಸಮಯದಲ್ಲಿ ಒಟಿಟಿಗಳು ಸಿನಿಮಾ ಖರೀದಿ ಬಗ್ಗೆ ಧಾರಾಳವಾಗಿದ್ದವು. ಅದಾದ ಬಳಿಕ ಈಗ ಲೆಕ್ಕಾಚಾರ ಹಾಕಿ, ಚಿತ್ರಮಂದಿರದಲ್ಲಿ ಹಿಟ್ ಆದ ಸಿನಿಮಾಗಳನ್ನು ಮಾತ್ರವೇ ಖರೀದಿ ಮಾಡುತ್ತಿವೆ. ಸಿನಿಮಾ ಚೆನ್ನಾಗಿದ್ದು, ಯಾವುದೋ ಕಾರಣಕ್ಕೆ ಚಿತ್ರಮಂದಿರದಲ್ಲಿ ಓಡಲಿಲ್ಲವೆಂದರೂ ಸಹ ಸಿನಿಮಾಗಳನ್ನು ಖರೀದಿ ಮಾಡುತ್ತಿಲ್ಲ. ಕನ್ನಡ ಸಿನಿಮಾಗಳ ಬಗ್ಗೆ ಅಂತೂ ಒಟಿಟಿಗಳು ದೊಡ್ಡ ತಾತ್ಸಾರ ಭಾವವನ್ನು ಹೊಂದಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ