ಕಿರುತೆರೆ, ಒಟಿಟಿ ಮತ್ತು ಸಿನಿಮಾ ಜಗತ್ತಿನಲ್ಲಿ ನಿರ್ಮಾಪಕಿ ಏಕ್ತಾ ಕಪೂರ್ (Ekta Kapoor) ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಹಲವಾರು ಶೋಗಳ ಮೂಲಕ ಅವರು ಮನೆಮಾತಾಗಿದ್ದಾರೆ. ಎಷ್ಟೋ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಅವರು ಅವಕಾಶ ನೀಡಿದ್ದಾರೆ. ಏಕ್ತಾ ಕಪೂರ್ ಒಡೆತನದ ‘ಆಲ್ಟ್ ಬಾಲಾಜಿ’ ಒಟಿಟಿ ಮೂಲಕ ಹಲವಾರು ವೆಬ್ ಸಿರೀಸ್ಗಳು ನಿರ್ಮಾಣ ಆಗಿವೆ. ಈ ವೆಬ್ ಸರಣಿಗಳು (Web Series) ತುಂಬ ಬೋಲ್ಡ್ ಆಗಿರುತ್ತವೆ ಎಂಬ ಆರೋಪ ಮೊದಲಿನಿಂದಲೂ ಇದೆ. ಈಗ ಇದೇ ವಿಚಾರವಾಗಿ ಏಕ್ತಾ ಕಪೂರ್ ಮತ್ತು ಅವರ ತಾಯಿ ಶೋಭಾ ಕಪೂರ್ ಮೇಲೆ ಅರೆಸ್ಟ್ ವಾರೆಂಟ್ (Arrest Warrant) ಜಾರಿ ಮಾಡಲಾಗಿದೆ. ‘ಎಕ್ಸ್ಎಕ್ಸ್ಎಕ್ಸ್’ ವೆಬ್ ಸರಣಿಯಲ್ಲಿ ಸೈನಿಕರ ಪತ್ನಿಯರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪದಡಿ ಕೇಸ್ ದಾಖಲಾಗಿದೆ.
‘ಎಕ್ಸ್ ಎಕ್ಸ್ ಎಕ್ಸ್’ ವೆಬ್ ಸೀರಿಸ್ನ ಮೊದಲ ಸೀಸನ್ 2018ರಲ್ಲಿ ಪ್ರಸಾರವಾಗಿತ್ತು. 2020ರ ಜನವರಿಯಲ್ಲಿ ಎರಡನೇ ಸೀಸನ್ ಬಿಡುಗಡೆ ಆಯಿತು. ಇದರ ಪ್ರತಿ ಎಪಿಸೋಡ್ನಲ್ಲಿ ಎಪಿಸೋಡ್ಗಳಲ್ಲಿ ಬೇರೆ ಬೇರೆ ಕಥೆ ಇದೆ. ಲೈಂಗಿಕ ಸಂಬಂಧಗಳ ವಿವಿಧ ಆಯಾಮಗಳನ್ನು ಇಟ್ಟುಕೊಂಡು ಈ ಸಂಚಿಕೆಗಳು ಮೂಡಿಬಂದಿವೆ. ಇದರಲ್ಲಿ ಸೈನಿಕರ ಕುಟುಂಬಕ್ಕೆ ಹಾಗೂ ಪತ್ನಿಯರಿಗೆ ಅವಮಾನ ಮಾಡಲಾಗಿದೆ ಎಂದು ಮಾಜಿ ಸೈನಿಕರೊಬ್ಬರು ಕೇಸ್ ದಾಖಲಿಸಿದ್ದಾರೆ.
ಸೈನಿಕನ ಪತ್ನಿ ಬಗ್ಗೆ ಆಕ್ಷೇಪಾರ್ಹ ರೀತಿಯ ದೃಶ್ಯಗಳನ್ನು ಈ ವೆಬ್ ಸರಣಿ ಹೊಂದಿದೆ ಎಂದು ಮಾಜಿ ಸೈನಿಕ ಶಂಭು ಕುಮಾರ್ ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಕ್ತಾ ಕಪೂರ್ ಮತ್ತು ಶೋಭಾ ಕಪೂರ್ಗೆ ಸಮನ್ಸ್ ಜಾರಿ ಮಾಡಲಾಗಿದೆ. ‘ವಿರೋಧ ವ್ಯಕ್ತವಾದ ಬಳಿಕ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದು ಹಾಕಲಾಗಿದೆ ಎಂದು ಏಕ್ತಾ ಕಪೂರ್ ಹಾಗೂ ಶೋಭಾ ಕಪೂರ್ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ವಿಚಾರಣೆಗೆ ಹಾಜರಾಗದೇ ಇರುವುದಕ್ಕೆ ಅರೆಸ್ಟ್ ವಾರೆಂಟ್ ನೀಡಲಾಗಿದೆ’ ಎಂದು ದೂರುದಾರರ ಪರ ವಕೀಲರಾದ ರಿಷಿಕೇಶ್ ಪಾಠಕ್ ತಿಳಿಸಿದ್ದಾರೆ.
ಲಾಕ್ಡೌನ್ ಬಳಿಕ ಒಟಿಟಿ ಪ್ರಾಬಲ್ಯ ಹೆಚ್ಚಾಯಿತು. ಸೆನ್ಸಾರ್ನ ಹಂಗಿಲ್ಲ ಎಂಬ ಕಾರಣಕ್ಕೆ ತುಂಬ ಬೋಲ್ಡ್ ಆದಂತಹ ಕಂಟೆಂಟ್ಗಳನ್ನು ಕೆಲವು ಒಟಿಟಿಗಳು ಬಿತ್ತರಿಸುತ್ತಿವೆ. ಕಳೆದ ವರ್ಷ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅರೆಸ್ಟ್ ಆಗಲು ಇದೇ ಕಾರಣ. ಅವರು ಅಶ್ಲೀಲ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದ್ದರು ಎಂಬ ಆರೋಪ ಇದೆ. ಆದರೆ ಅವರು ಮಾಡಿದ್ದು ಅಶ್ಲೀಲ ಸಿನಿಮಾ ಅಲ್ಲ, ಬರೀ ಬೋಲ್ಡ್ ಸಿನಿಮಾಗಳು ಎಂದು ಕೆಲವರು ವಾದಿಸಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:47 am, Thu, 29 September 22