Brahmastra: ಸೂಪರ್ ಹಿಟ್ ಆದ ‘ಬ್ರಹ್ಮಾಸ್ತ್ರ’ ಚಿತ್ರ ಒಟಿಟಿಯಲ್ಲಿ ಪ್ರಸಾರ ಆಗೋದು ಯಾವಾಗ?
Brahmastra OTT Release Date: ‘ಬ್ರಹ್ಮಾಸ್ತ್ರ’ ಚಿತ್ರದ ಒಟಿಟಿ ಸ್ಟ್ರೀಮಿಂಗ್ ಯಾವಾಗ ಎಂದು ಪ್ರೇಕ್ಷಕರು ಕೇಳುತ್ತಿದ್ದಾರೆ. ದಸರಾ ಹಬ್ಬದ ಈ ಸಮಯದಲ್ಲಿ ನಿರ್ಮಾಪಕರ ಪ್ಲ್ಯಾನ್ ಬೇರೆಯೇ ಇದೆ.
ಬಾಲಿವುಡ್ ಸಿನಿಮಾಗಳು ಸತತ ಸೋಲು ಕಾಣುತ್ತಿರುವಾಗ ‘ಬ್ರಹ್ಮಾಸ್ತ್ರ’ (Brahmastra) ಚಿತ್ರ ಮ್ಯಾಜಿಕ್ ಮಾಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾಗೆ ಭರ್ಜರಿ ಕಲೆಕ್ಷನ್ ಆಗಿದೆ. ರಣಬೀರ್ ಕಪೂರ್ (Ranbir Kapoor) ಅವರ ವೃತ್ತಿಜೀವನಕ್ಕೆ ಮತ್ತೊಂದು ಸೂಪರ್ ಹಿಟ್ ಚಿತ್ರ ಸೇರ್ಪಡೆ ಆದಂತೆ ಆಗಿದೆ. ಈ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ಆಲಿಯಾ ಭಟ್ (Alia Bhatt) ನಟಿಸಿದ್ದಾರೆ. ರಿಯಲ್ ಲೈಫ್ನಲ್ಲಿ ಪತಿ-ಪತ್ನಿ ಆಗಿರುವ ಅವರು ಜೊತೆಯಾಗಿ ನಟಿಸಿದ ಮೊದಲ ಸಿನಿಮಾ ಎಂಬ ಕಾರಣಕ್ಕೂ ಅಭಿಮಾನಿಗಳು ‘ಬ್ರಹ್ಮಾಸ್ತ್ರ’ ಚಿತ್ರಕ್ಕೆ ಪ್ರೀತಿ ತೋರಿಸಿದ್ದಾರೆ. ಥಿಯೇಟರ್ನಲ್ಲಿ ಭಾರಿ ಯಶಸ್ಸು ಕಂಡು ಈ ಸಿನಿಮಾ ಒಟಿಟಿಯಲ್ಲಿ ಪ್ರಸಾರ ಆಗುವುದು ಯಾವಾಗ ಎಂದು ಸಿನಿಪ್ರಿಯರು ಕೇಳುತ್ತಿದ್ದಾರೆ. ಮೂಲಗಳ ಪ್ರಕಾರ ಅಕ್ಟೋಬರ್ 2ನೇ ವಾರದಲ್ಲಿ ‘ಬ್ರಹ್ಮಾಸ್ತ್ರ’ ಚಿತ್ರ ಒಟಿಟಿಗೆ ಕಾಲಿಡಲಿದೆ.
ಈ ಸಿನಿಮಾಗೆ ಅಯಾನ್ ಮುಖರ್ಜಿ ನಿರ್ದೇಶನ ಮಾಡಿದ್ದಾರೆ. ಫ್ಯಾಂಟಸಿ ಕಥೆ ಇರುವ ‘ಬ್ರಹ್ಮಾಸ್ತ್ರ’ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿತು. ಕಳಪೆ ಗ್ರಾಫಿಕ್ಸ್ ಇದೆ ಎಂಬ ಟೀಕೆ ಕೂಡ ಎದುರಾಯ್ತು. ಹಾಗಿದ್ದರೂ ಕೂಡ ಬಾಕ್ಸ್ ಆಫೀಸ್ ಗಳಿಕೆಯ ಮೇಲೆ ಈ ನೆಗೆಟಿವ್ ಅಂಶಗಳು ಪರಿಣಾಮ ಬೀರಲೇ ಇಲ್ಲ. ಎಲ್ಲ ಭಾಷೆಗಳಿಂದಲೂ ಸೇರಿ 300 ಕೋಟಿ ರೂಪಾಯಿಗಿಂತಲೂ ಹೆಚ್ಚು ಕಲೆಕ್ಷನ್ ಮಾಡಿದೆ.
ಒಂದು ವರ್ಗದ ಪ್ರೇಕ್ಷಕರು ಒಟಿಟಿಗೆ ಹೆಚ್ಚು ಒಗ್ಗಿಕೊಂಡಿದ್ದಾರೆ. ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವುದಕ್ಕಿಂತಲೂ ಒಟಿಟಿ ಮೂಲಕವೇ ನೋಡಿ ಎಂಜಾಯ್ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಹಾಗಾಗಿ ಥಿಯೇಟರ್ನಲ್ಲಿ ಯಾವುದೇ ಹೊಸ ಚಿತ್ರ ರಿಲೀಸ್ ಆದರೂ ಅದು ಒಟಿಟಿಗೆ ಬಂದಾಗಲೇ ನೋಡ್ತೀವಿ ಎನ್ನುವಂತಹ ಪ್ರೇಕ್ಷಕರು ಈಗ ‘ಬ್ರಹ್ಮಾಸ್ತ್ರ’ ಚಿತ್ರದ ಒಟಿಟಿ ಸ್ಟ್ರೀಮಿಂಗ್ ಯಾವಾಗ ಎಂದು ಕೇಳುತ್ತಿದ್ದಾರೆ.
ಇದು ದಸರಾ ಹಬ್ಬದ ಸೀಸನ್. ಹಬ್ಬದ ರಜೆಯಲ್ಲಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವವರು ಇದ್ದಾರೆ. ಅನೇಕ ಚಿತ್ರಮಂದಿರಗಳಲ್ಲಿ ‘ಬ್ರಹ್ಮಾಸ್ತ್ರ’ ಇನ್ನೂ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಈ ಟೈಮ್ನಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ ಕೊಂಚ ಹೆಚ್ಚಾಗುವ ನಿರೀಕ್ಷೆ ಇದೆ. ಆದ್ದರಿಂದ ಅಕ್ಟೋಬರ್ 2ನೇ ವಾರದವರೆಗೂ ಚಿತ್ರವನ್ನು ಒಟಿಟಿಯಲ್ಲಿ ರಿಲೀಸ್ ಮಾಡೋದು ಬೇಡ ಎಂದು ನಿರ್ಮಾಪಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್, ಅಕ್ಕಿನೇನಿ ನಾಗಾರ್ಜುನ ಅವರಂತಹ ಹಿರಿಯ ಕಲಾವಿದರು ನಟಿಸಿದ್ದಾರೆ. ಮೌನಿ ರಾಯ್ ಅವರು ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಶಾರುಖ್ ಖಾನ್ ಮಾಡಿರುವ ಅತಿಥಿ ಪಾತ್ರ ಕೂಡ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:32 am, Thu, 29 September 22