ಮಿತಿ ಮೀರಿದ ಬಜೆಟ್; ‘ಬ್ರಹ್ಮಾಸ್ತ್ರ’ ಚಿತ್ರಕ್ಕಾಗಿ ಸಂಭಾವನೆಯನ್ನೇ ಪಡೆದಿಲ್ಲ ರಣಬೀರ್ ಕಪೂರ್
‘ನಿಜ ಏನೆಂದರೆ ಈ ಚಿತ್ರ ಅನೇಕರ ತ್ಯಾಗದಿಂದ ನಿರ್ಮಾಣ ಆಗಿದೆ. ಬ್ರಹ್ಮಾಸ್ತ್ರ ಸಿನಿಮಾಗಾಗಿ ಅವರು ಹಣ ಪಡೆದಿಲ್ಲ. ಇದು ನಿಜಕ್ಕೂ ದೊಡ್ಡ ವಿಚಾರ. ಈ ಕಾರಣದಿಂದಲೇ ಸಿನಿಮಾ ಹೀಗೆ ಮೂಡಿ ಬಂದಿದೆ’ ಎಂದಿದ್ದಾರೆ ಅಯಾನ್.
ಸ್ಟಾರ್ ನಟರ ಕಾಲ್ಶೀಟ್ ಪಡೆಯೋಕೆ ನಿರ್ಮಾಪಕರು ಕೋಟಿ ಕೋಟಿ ಹಣ ನೀಡೋಕೆ ರೆಡಿ ಇರುತ್ತಾರೆ. ಬಾಲಿವುಡ್ನಲ್ಲಿ 100 ಕೋಟಿ ರೂಪಾಯಿ ಸಂಭಾವನೆ ಪಡೆಯುವ ಹೀರೋಗಳೂ ಇದ್ದಾರೆ. ಅಯಾನ್ ಮುಖರ್ಜಿ ನಿರ್ದೇಶನದ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ((Brahmastra Movie) ರಣಬೀರ್ ಕಪೂರ್ ನಟಿಸಿದ್ದು, ಅವರ ಸಂಭಾವನೆ ಎಷ್ಟಿರಬಹುದು ಎಂದು ಅನೇಕರು ಊಹಿಸಿದ್ದರು. ಈಗ ರಣಬೀರ್ ಕಪೂರ್ (Ranbir Kapoor) ಅವರೇ ಸ್ವತಃ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಅವರು ಈ ಚಿತ್ರಕ್ಕಾಗಿ ಸಂಭಾವನೆಯನ್ನೇ ಪಡೆದಿಲ್ಲ! ಇಷ್ಟು ದೊಡ್ಡ ಬಜೆಟ್ನ ಸಿನಿಮಾ ಮಾಡಿ, ಹಲವು ವರ್ಷಗಳನ್ನು ಈ ಚಿತ್ರಕ್ಕಾಗಿ ಮುಡಿಪಿಟ್ಟ ರಣಬೀರ್ ಕಪೂರ್ ಅವರು ಈ ಚಿತ್ರಕ್ಕಾಗಿ ಹಣ ಪಡೆಯದೆ ಇರಲೂ ಒಂದು ಕಾರಣ ಇದೆ.
‘ಬ್ರಹ್ಮಾಸ್ತ್ರ’ ಸಿನಿಮಾದ ಮೊದಲ ಪಾರ್ಟ್ ಮಾತ್ರ ಈಗ ರಿಲೀಸ್ ಆಗಿದೆ. ಇನ್ನೂ ಎರಡು ಪಾರ್ಟ್ಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಈ ಚಿತ್ರದ ಬಜೆಟ್ ಕೇಳಿ ಎಲ್ಲರೂ ಕಣ್ಣರಳಿಸಿದ್ದರು. ಈ ಟ್ರಿಲಜಿಗಾಗಿ ನಿರ್ಮಾಪಕರು 650 ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದಾರೆ ಎನ್ನಲಾಗಿದೆ. ಸಿನಿಮಾದಲ್ಲಿ ವಿಎಫ್ಎಕ್ಸ್ ಕೆಲಸಗಳು ಹೆಚ್ಚಿರುವುದರಿಂದ ರಣಬೀರ್ ಹಾಗೂ ಆಲಿಯಾ ಸಂಭಾವನೆಯನ್ನೇ ಪಡೆದಿಲ್ಲ ಎನ್ನಲಾಗಿತ್ತು. ಇದಕ್ಕೆ ಅಯಾನ್ ಮುಖರ್ಜಿ ಪ್ರತಿಕ್ರಿಯೆ ನೀಡಿದ್ದಾರೆ.
‘ನಿಜ ಏನೆಂದರೆ ಈ ಚಿತ್ರ ಅನೇಕರ ತ್ಯಾಗದಿಂದ ನಿರ್ಮಾಣ ಆಗಿದೆ. ಬ್ರಹ್ಮಾಸ್ತ್ರ ಸಿನಿಮಾಗಾಗಿ ಅವರು ಹಣ ಪಡೆದಿಲ್ಲ. ಇದು ನಿಜಕ್ಕೂ ದೊಡ್ಡ ವಿಚಾರ. ಈ ಕಾರಣದಿಂದಲೇ ಸಿನಿಮಾ ಹೀಗೆ ಮೂಡಿ ಬಂದಿದೆ’ ಎಂದಿದ್ದಾರೆ ಅಯಾನ್.
ಆಲಿಯಾ ಸಂಭಾವನೆ ಬಗ್ಗೆಯೂ ಅಯಾನ್ ಮಾತನಾಡಿದ್ದಾರೆ. ‘ಆಲಿಯಾ ನಮ್ಮ ಚಿತ್ರವನ್ನು ಒಪ್ಪಿಕೊಂಡಿದ್ದು 2014ರಲ್ಲಿ. ಅವರು ಆಗತಾನೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದರು. ಅವರು ಆಗ ಸ್ಟಾರ್ ನಟಿ ಆಗಿರಲಿಲ್ಲ. ಆಲಿಯಾಗೆ ದೊಡ್ಡ ಸಂಭಾವನೆ ನಿಗದಿ ಆಗಿರಲಿಲ್ಲ. ಆದರೂ ಅವರು ಸಂಭಾವನೆ ಬಿಡಲು ರೆಡಿ ಇದ್ದರು’ ಎಂದಿದ್ದಾರೆ ಅಯಾನ್.
ಹಾಗಾದರೆ ರಣಬೀರ್ ಸಂಭಾವನೆ ಬಿಟ್ಟಿದ್ದೇಕೆ? ಸಂಭಾವನೆ ಮೊತ್ತವನ್ನು ಹೂಡಿಕೆ ರೀತಿಯಲ್ಲಿ ಪರಿಗಣಿಸಿದ್ದಾರೆ. ತಾವು ಸಂಭಾವನೆ ಪಡೆಯದೆ ಅದನ್ನು ಸಿನಿಮಾ ನಿರ್ಮಾಣಕ್ಕೆ ಬಳಕೆ ಮಾಡಲು ಸೂಚಿಸಿದ್ದಾರೆ. ‘ನಾನು ಈ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬನಾಗಿದ್ದೇನೆ. ನಾನು ಲಾಂಗ್ಟರ್ಮ್ ಬಗ್ಗೆ ಯೋಚಿಸುತ್ತಿದ್ದೇನೆ. ನಾನು ಪಾರ್ಟ್-1ಗೆ ಯಾವುದೇ ಹಣ ಪಡೆದಿಲ್ಲ. ಆದರೆ, ಮೂರು ಪಾರ್ಟ್ಗಳಲ್ಲಿ ಈ ಸಿನಿಮಾ ಮಾಡುವ ಹಣ ಎಲ್ಲಕ್ಕಿಂತ ಹೆಚ್ಚು ಎಂಬ ನಂಬಿಕೆ ಇದೆ’ ಎಂದಿದ್ದಾರೆ ರಣಬೀರ್.
ಇದನ್ನೂ ಓದಿ: ಆಲಿಯಾ ಎಲ್ಲಿದ್ದಾಳೆ ಎಂದು ತಿಳಿಯದೆ ಊಟ ಮಾಡಲ್ಲ, ಬಾತ್ರೂಮ್ ಹೋಗಲ್ಲ ಎಂದ ರಣಬೀರ್ ಕಪೂರ್
ಈ ಪದ್ಧತಿ ಈ ಮೊದಲಿನಿಂದಲೂ ಚಿತ್ರರಂಗದಲ್ಲಿ ಜಾರಿಯಲ್ಲಿದೆ. ಸಂಭಾವನೆ ತೆಗೆದುಕೊಳ್ಳದೆ ಅದನ್ನು ಹೂಡಿಕೆ ರೀತಿಯಲ್ಲಿ ಪರಿಗಣಿಸಲಾಗುತ್ತದೆ. ನಂತರ ಲಾಭದಲ್ಲಿ ಒಂದಷ್ಟು ಪರ್ಸೆಂಟೇಜ್ ಅನ್ನು ಹೀರೋಗಳು ಪಡೆಯುತ್ತಾರೆ.