ಒಟಿಟಿ ಹಕ್ಕಿನಲ್ಲೂ ಪಾಲು ಬೇಕು: ತಮಿಳುನಾಡು ಚಿತ್ರಪ್ರದರ್ಶಕರ ಹೊಸ ಬೇಡಿಕೆ

|

Updated on: Jul 11, 2023 | 10:29 PM

OTT: ತಮಿಳುನಾಡು ಚಿತ್ರ ಪ್ರದರ್ಶಕರ ಸಂಘವು ಒಟಿಟಿಗಳಿಗೆ ಸಂಬಂಧಿಸಿದಂತೆ ಸಿನಿಮಾ ನಿರ್ಮಾಪಕರ ಬಳಿ ಕೆಲ ಬೇಡಿಕೆಗಳನ್ನಿರಿಸಿದೆ.

ಒಟಿಟಿ ಹಕ್ಕಿನಲ್ಲೂ ಪಾಲು ಬೇಕು: ತಮಿಳುನಾಡು ಚಿತ್ರಪ್ರದರ್ಶಕರ ಹೊಸ ಬೇಡಿಕೆ
ಥಿಯೇಟರ್-ಒಟಿಟಿ
Follow us on

ಒಟಿಟಿಗಳ (OTT) ಜನಪ್ರಿಯತೆ, ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಸಿನಿಮಾ (Cinema) ಮಾರುಕಟ್ಟೆಯ ಲೆಕ್ಕಾಚಾರ ಬದಲಾಗಿದೆ. ಥೀಯೇಟರ್, ಆಡಿಯೋ, ಸ್ಯಾಟಲೈಟ್​ಗೆ ಸೀಮಿತವಾಗಿದ್ದ ಸಿನಿಮಾದ ಲಾಭ ಈಗ ಒಟಿಟಿಯಿಂದ ಇನ್ನೊಂದಿಷ್ಟು ವಿಸ್ತರಿಸಿದೆ. ಆದರೆ ಈ ಒಟಿಟಿಗಳಿಂದ ತಮಗೆ ನಷ್ಟವಾಗುತ್ತಿದೆ ಎಂದು ಸಿನಿಮಾ ಪ್ರದರ್ಶಕರು ಆರೋಪ ಮಾಡುತ್ತಲೇ ಬಂದಿದ್ದು, ಇದೀಗ ತಮಿಳುನಾಡಿನ ಚಿತ್ರಪ್ರದರ್ಶಕರು ತಮಗೆ ಒಟಿಟಿ ಹಕ್ಕಿನಲ್ಲೂ ಪಾಲು ಬೇಕು ಎಂದಿದ್ದಾರೆ. ಅಲ್ಲದೆ ಇನ್ನೂ ಕೆಲವು ಬೇಡಿಕೆಗಳನ್ನು ನಿರ್ಮಾಪಕರ (Producer) ಮುಂದಿಟ್ಟಿದ್ದಾರೆ.

ಇತ್ತೀಚೆಗಷ್ಟೆ ಸಭೆ ನಡೆಸಿದ ತಮಿಳುನಾಡು ಸಿನಿಮಾ ಪ್ರದರ್ಶಕರ ಅಸೋಸಿಯೇಷನ್, ಯಾವುದೇ ತಮಿಳು ಸಿನಿಮಾ ಬಿಡುಗಡೆ ಆದ ಎಂಟು ವಾರಗಳ ಬಳಿಕವಷ್ಟೆ ಒಟಿಟಿಯಲ್ಲಿ ಬಿಡುಗಡೆ ಆಗಬೇಕು. ಎಲ್ಲ ನಿರ್ಮಾಪಕರು ಸಹ ತಮ್ಮ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಎಂಟು ವಾರದ ಬಳಿಕವಷ್ಟೆ ಒಟಿಟಿಗಳಿಗೆ ಮಾರಾಟ ಮಾಡಬೇಕು ಎಂದು ತಮಿಳುನಾಡು ಚಿತ್ರಪ್ರದರ್ಶಕರ ಸಂಘ ಒತ್ತಾಯ ಮಾಡಿದೆ. ಅಲ್ಲದೆ, ಯಾವುದೇ ಸಿನಿಮಾವನ್ನು ಒಟಿಟಿಗೆ ಮಾರಾಟ ಮಾಡುವುದರಿಂದ ಬರುವ ಹಣದಲ್ಲಿ 1% ಅನ್ನು ಚಿತ್ರಪ್ರದರ್ಶಕರಿಗೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಇವು ಮಾತ್ರವೇ ಅಲ್ಲದೆ ತಮಿಳುನಾಡಿನ ಸೂಪರ್​ಸ್ಟಾರ್​ಗಳು ವರ್ಷಕ್ಕೆ ಎರಡು ಸಿನಿಮಾ ಮಾಡಲೇ ಬೇಕು ಎಂದು ಸಹ ಚಿತ್ರಪ್ರದರ್ಶಕರ ಸಂಘ ಒತ್ತಾಯಿಸಿದೆ. ರಜನೀಕಾಂತ್, ವಿಜಯ್, ಅಜಿತ್ ಕುಮಾರ್ ಅವರುಗಳು ಕಡ್ಡಾಯವಾಗಿ ವರ್ಷಕ್ಕೆ ಎರಡು ಸಿನಿಮಾ ಮಾಡಬೇಕು ಎಂದು ಚಿತ್ರಪ್ರದರ್ಶಕರು ಹೇಳಿದ್ದಾರೆ. ಇದರ ಜೊತೆಗೆ ತಮಿಳುನಾಡು ಸರ್ಕಾರಕ್ಕೂ ಮನವಿ ಸಲ್ಲಿಸಿರುವ ಚಿತ್ರಪ್ರದರ್ಶಕರು, ಚಿತ್ರಮಂದಿರಗಳಲ್ಲಿ ಐಪಿಎಲ್ ಪ್ರದರ್ಶನಕ್ಕೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ:Dunki OTT: ‘ಡಂಕಿ’ ಒಟಿಟಿ ಹಕ್ಕುಗಳಿಗೆ ಭರ್ಜರಿ ಬೇಡಿಕೆ; 155 ಕೋಟಿಗೆ ಶಾರುಖ್​ ಖಾನ್​ ಸಿನಿಮಾ ಸೇಲ್​?

ಚಿತ್ರಪ್ರದರ್ಶಕರ ಮುಖ್ಯ ಬೇಡಿಕೆಗಳು ಸಿನಿಮಾ ನಿರ್ಮಾಪಕರನ್ನು ಗುರಿಯಾಗಿಸಿಕೊಂಡೇ ಇವೆ. ಹಾಗಾಗಿ ತಮಿಳುನಾಡು ಸಿನಿಮಾ ನಿರ್ಮಾಪಕರ ಸಂಘವು ಪ್ರದರ್ಶಕರ ಈ ಬೇಡಿಕೆಗೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದು ಕಾದು ನೋಡಬೇಕಿದೆ. ಸಿನಿಮಾಗಳು ಎಷ್ಟು ದಿನಗಳ ಬಳಿಕ ಚಿತ್ರಮಂದಿರದಲ್ಲಿ ಬಿಡುಗಡೆ ಆಗಬೇಕು ಎಂಬ ಬಗ್ಗೆ ಕೆಲವು ಚಿತ್ರರಂಗಗಳಲ್ಲಿ ಅದರದ್ದೇ ಆದ ನಿಯಮಗಳಿವೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಎಂಟು ವಾರಗಳ ಬಳಿಕವಷ್ಟೆ ಹಿಂದಿ ಸಿನಿಮಾಗಳು ಒಟಿಟಿಗೆ ಬರುತ್ತವೆ. ಅದೇ ಮಾದರಿಯನ್ನು ಇಲ್ಲಿಯೂ ತರಬೇಕೆಂದು ಈಗ ತಮಿಳುನಾಡು ಚಿತ್ರಪ್ರದರ್ಶಕರು ಒತ್ತಾಯಿಸಿದ್ದಾರೆ.

ತೆಲುಗು ಚಿತ್ರರಂಗದಲ್ಲಿಯೂ ಈ ಬಗ್ಗೆ ನಿಯಮವನ್ನು ಮಾಡಿಕೊಳ್ಳಲಾಗಿದೆ. ಆದರೆ ಅಲ್ಲಿ ವಾರಗಳ ಅಂತರ ಹಿಂದಿಗೆ ಹೋಲಿಸಿದರೆ ತುಸು ಕಡಿಮೆ ಇದೆ. ಆದರೆ ಕನ್ನಡದಲ್ಲಿ ಈ ಬಗ್ಗೆ ಸ್ಪಷ್ಟ ನಿಯಮವಿಲ್ಲ. ಅಲ್ಲದೆ ಕನ್ನಡ ಸಿನಿಮಾಗಳಿಗೆ ಒಟಿಟಿ ಬೇಡಿಕೆ ಕಡಿಮೆ ಇರುವುದರಿಂದಲೋ ಏನೋ ಈ ಬಗ್ಗೆ ಗಂಭೀರ ಚರ್ಚೆ ಕನ್ನಡ ಚಿತ್ರರಂಗದಲ್ಲಿ ಈ ವರೆಗೆ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ