ಬಾಲಿವುಡ್ನಲ್ಲಿ ದೊಡ್ಡ ಸ್ಟಾರ್ ಹೀರೋಗಳೆಲ್ಲ ವೆಬ್ ಸಿರೀಸ್ನತ್ತ ಗಮನ ಹರಿಸುತ್ತಿದ್ದಾರೆ. ಸೈಫ್ ಅಲಿ ಖಾನ್, ಅಭಿಷೇಕ್ ಬಚ್ಚನ್, ಮನೋಜ್ ಭಾಜಪೇಯ್ ಮುಂತಾದವರು ಈಗಾಗಲೇ ವೆಬ್ ಸರಣಿಗಳ (Web Series) ಮೂಲಕ ಯಶಸ್ಸು ಕಂಡಿದ್ದಾರೆ. ಈಗ ನಟ ಹೃತಿಕ್ ರೋಷನ್ (Hrithik Roshan) ಕೂಡ ಈ ಪ್ಲಾಟ್ಫಾರ್ಮ್ನಲ್ಲಿ ಅದೃಷ್ಟ ಪರೀಕ್ಷೆ ಮಾಡೋಕೆ ಮುಂದಾಗುತ್ತಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಅಪಾರ ಅನುಭವ ಹೊಂದಿರುವ ಅವರಿಗೆ ಜೋಡಿಯಾಗಿ ಕನ್ನಡದ ಬೆಡಗಿ ನಭಾ ನಟೇಶ್ (Nabha Natesh) ಅಭಿನಯಿಸುವ ಸಾಧ್ಯತೆ ಇದೆ ಎಂಬ ಸುದ್ದಿ ದಟ್ಟವಾಗಿ ಕೇಳಿಬರುತ್ತಿದೆ.
ನಭಾ ನಟೇಶ್ ಮೂಲತಃ ಚಿಕ್ಕಮಗಳೂರಿನವರು. ಈಗ ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ. ನಟನೆ ಮತ್ತು ಮಾಡೆಲಿಂಗ್ನಲ್ಲಿ ಅವರು ಭದ್ರವಾಗಿ ನೆಲೆಕಂಡುಕೊಳ್ಳುತ್ತಿದ್ದಾರೆ. ನಭಾ ಜೊತೆ ವೆಬ್ ಸಿರೀಸ್ ತಂಡದವರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇದು ನಿಜವೇ ಹೌದಾಗಿದ್ದರೆ ಕನ್ನಡದ ಈ ಕುವರಿಗೆ ಹೃತಿಕ್ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಸಿಕ್ಕಂತಾಗುತ್ತದೆ. ಈಗಾಗಲೇ ಕರುನಾಡಿನ ಅನೇಕ ನಟಿಯರು ಬಾಲಿವುಡ್ನಲ್ಲಿ ಮಿಂಚಿದ್ದಾರೆ. ಆ ಸಾಲಿಗೆ ನಭಾ ಕೂಡ ಸೇರ್ಪಡೆ ಆಗಲಿದ್ದಾರೆ.
ಹರಿದಾಡುತ್ತಿರುವ ಈ ಸುದ್ದಿಯ ಬಗ್ಗೆ ನಭಾ ಆಗಲಿ, ವೆಬ್ ಸರಣಿ ತಂಡದವರಾಗಲಿ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಅದಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಹೃತಿಕ್ ರೋಷನ್ ಅವರಿಗೆ ಇದು ಮೊದಲ ವೆಬ್ ಸಿರೀಸ್ ಆಗಿರುವುದರಿಂದ ನಿರೀಕ್ಷೆ ದೊಡ್ಡ ಮಟ್ಟದಲ್ಲಿದೆ. ಸದ್ಯ ಅವರು ತಮ್ಮ ಮುಂದಿನ ಸಿನಿಮಾ ‘ಫೈಟರ್’ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ಆ ಚಿತ್ರಕ್ಕೆ ದೀಪಿಕಾ ಪಡುಕೋಣೆ ಹೀರೋಯಿನ್.
ನಭಾ ಸಿನಿಕರಿಯರ್ ಮೇಲೆ ಕಣ್ಣು ಹಾಯಿಸುವುದಾದರೆ, ಅವರು ಕನ್ನಡದಲ್ಲಿ ಸಿನಿಮಾ ಮಾಡಿದ್ದು ಕಡಿಮೆ. ಅವರು ನಟಿಸಿದ ಮೊದಲ ಸಿನಿಮಾ ‘ವಜ್ರಕಾಯ’. ಬಳಿಕ ‘ಲೀ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದರು. ‘ಸಾಹೇಬ’ ಸಿನಿಮಾದ ವಿಶೇಷ ಹಾಡಿನಲ್ಲಿ ಹೆಜ್ಜೆ ಹಾಕಿದರು. ಆನಂತರ ಅವರು ಹಾರಿದ್ದು ಟಾಲಿವುಡ್ಗೆ. 2019ರಲ್ಲಿ ಬಂದ ‘ಇಸ್ಮಾರ್ಟ್ ಶಂಕರ್’ ತೆಲುಗು ಚಿತ್ರದಲ್ಲಿ ನಭಾಗೆ ಭರ್ಜರಿ ಗೆಲುವು ಸಿಕ್ಕಿತು. ಸದ್ಯ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಈ ನಡುವೆ ಹೃತಿಕ್ಗೆ ಜೋಡಿಯಾಗಬಹುದು ಎಂಬ ಸುದ್ದಿ ಕೇಳಿ ಅವರ ಫ್ಯಾನ್ಸ್ ಖುಷಿ ಆಗಿದ್ದಾರೆ.
ಇದನ್ನೂ ಓದಿ:
ಹೃತಿಕ್ ಜತೆ ಕೈ ಜೋಡಿಸಲಿದ್ದಾರೆ ದಕ್ಷಿಣ ಭಾರತದ ಹೀರೋ: 150 ಕೋಟಿ ದಾಟಲಿದೆ ಸಿನಿಮಾ ಬಜೆಟ್!
ಹೃತಿಕ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ದೀಪಿಕಾ ಪಡುಕೋಣೆ: ಈ ಚಿತ್ರಕ್ಕೆ ನಿರ್ದೇಶಕರಾರು ಗೊತ್ತಾ?