ಬಾಲಿವುಡ್ನ ಖ್ಯಾತ ನಟಿ ಕಾಜೋಲ್ (Kajol) ಅವರು ಸಿನಿಮಾಗಳ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾಗಳನ್ನು ಮಾತ್ರ ಅವರು ಒಪ್ಪಿಕೊಳ್ಳುತ್ತಾರೆ. ಈ ನಡುವೆ ಅವರಿಗೆ ವೆಬ್ ಸಿರೀಸ್ ಲೋಕದಲ್ಲೂ ಬೇಡಿಕೆ ಸೃಷ್ಟಿ ಆಗಿದೆ. ಅವರು ನಟಿಸಿರುವ ‘ದಿ ಟ್ರಯಲ್’ ವೆಬ್ ಸಿರೀಸ್ (The Trial Web Series) ಬಿಡುಗಡೆಗೆ ಸಜ್ಜಾಗಿದೆ. ಶೀಘ್ರದಲ್ಲೇ ಇದರ ಟ್ರೇಲರ್ ರಿಲೀಸ್ ಆಗಲಿದೆ. ಅದರ ಪ್ರಚಾರಕ್ಕಾಗಿ ಕಾಜೋಲ್ ಅವರು ಒಂದು ಗಿಮಿಕ್ ಮಾಡಿದ್ದಾರೆ. ಅವರ ಈ ಕೆಲಸದ ಬಗ್ಗೆ ನೆಟ್ಟಿಗರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಜೀವನದ ದೊಡ್ಡ ವಿಚಾರಣೆ ಎದುರಿಸುತ್ತಿದ್ದೇನೆ. ಹಾಗಾಗಿ ಸೋಶಿಯಲ್ ಮೀಡಿಯಾದಿಂದ ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ’ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಅದು ಪ್ರಚಾರದ ಗಿಮಿಕ್ (Gimmick) ಎಂಬುದು ಈಗ ಬಯಲಾಗಿದೆ.
ಅಮೆರಿಕದ ‘ದಿ ಗುಡ್ ವೈಫ್’ ಸರಣಿಯ ಇಂಡಿಯನ್ ವರ್ಷನ್ಗೆ ‘ದಿ ಟ್ರಯಲ್’ ಎಂದು ಶೀರ್ಷಿಕೆ ಇಡಲಾಗಿದೆ. ಇದರಲ್ಲಿ ಕಾಜೋಲ್ ಅವರು ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಅದರ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ. ಜೂನ್ 12ರಂದು ‘ದಿ ಟ್ರಯಲ್’ ಟ್ರೇಲರ್ ಅನಾವರಣ ಆಗಲಿದೆ. ಈ ಶೀರ್ಷಿಕೆಯ ಜೊತೆ ‘ಪ್ರೀತಿ, ಕಾನೂನು ಮತ್ತು ಮೋಸ’ ಎಂಬ ಟ್ಯಾಗ್ ಲೈನ್ ಇದೆ. ಹಾಗಾಗಿ ಈ ವೆಬ್ ಸರಣಿ ಬಗ್ಗೆ ಹೆಚ್ಚಿನ ಕುತೂಹಲ ನಿರ್ಮಾಣ ಆಗಿದೆ. ಇದು ಕೋರ್ಟ್ ರೂಮ್ ಡ್ರಾಮಾ ಶೈಲಿಯಲ್ಲಿ ಮೂಡಿಬಂದಿದ್ದು, ಟ್ರೇಲರ್ ನೋಡಲು ಫ್ಯಾನ್ಸ್ ಕಾದಿದ್ದಾರೆ.
‘ಜೀವನದ ದೊಡ್ಡ ವಿಚಾರಣೆ ಎದುರಿಸುತ್ತಿದ್ದೇನೆ. ಹಾಗಾಗಿ ಸೋಶಿಯಲ್ ಮೀಡಿಯಾದಿಂದ ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ’ ಎಂದು ಕಾಜೋಲ್ ಅವರು ಪೋಸ್ಟ್ ಮಾಡಿದಾಗ ಅಪ್ಪಟ ಅಭಿಮಾನಿಗಳಿಗೆ ಅಚ್ಚರಿ ಆಗಿದ್ದು ನಿಜ. ಇದು ಡಿವೋರ್ಸ್ನ ಮುನ್ಸೂಚನೆ ಇರಬಹುದೇ? ಕಾಜೋಲ್ ಅವರ ಸಂಸಾರದಲ್ಲಿ ಬಿರುಕು ಮೂಡಿರಬಹುದೇ ಎಂಬಿತ್ಯಾದಿ ಅನುಮಾನಗಳು ಕೂಡ ಮೂಡಿದವು. ಆದರೆ ಅದರ ಹಿಂದಿನ ಉದ್ದೇಶ ಕೇವಲ ಗಿಮಿಕ್ ಎಂಬುದು ಗೊತ್ತಾದಾಗ ಕೆಲವರು ನೆಗೆಟಿವ್ ಆಗಿ ಕಮೆಂಟ್ ಮಾಡಿದರು. ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ಮಾಡುವ ಟ್ರೆಂಡ್ ಹೆಚ್ಚಾಗಿದೆ. ಇತ್ತೀಚೆಗೆ ತಮ್ಮ ಜಾಹೀರಾತಿನ ಪ್ರಚಾರಕ್ಕಾಗಿ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ ಮುಂತಾದ ಸೆಲೆಬ್ರಿಟಿಗಳು ಇಂಥ ಗಿಮಿಕ್ ಮಾಡಿದ್ದರು.
ಇದನ್ನೂ ಓದಿ: Kajol: ‘ಕಪ್ಪಗಿದ್ದಾಳೆ, ದಪ್ಪಗಿದ್ದಾಳೆ’ ಎಂದು ಬಾಡಿ ಶೇಮಿಂಗ್ ಮಾಡಿದ್ದ ಜನರ ಬಾಯಿ ಮುಚ್ಚಿಸಿದ್ದ ಕಾಜೋಲ್
ಕಾಜೋಲ್ ನಟನೆಯ ‘ಸಲಾಂ ವೆಂಕಿ’ ಸಿನಿಮಾ ಕಳೆದ ವರ್ಷ ತೆರೆಕಂಡಿತು. ಈಗ ಅವರು ‘ಲಸ್ಟ್ ಸ್ಟೋರೀಸ್ 2’ ಸಿನಿಮಾದಲ್ಲಿ ನಟಿಸಿದ್ದು, ಅದರ ಪ್ರಚಾರ ಕೂಡ ಆರಂಭ ಆಗಿದೆ. ಜೂನ್ 29ರಂದು ನೆಟ್ಫ್ಲಿಕ್ಸ್ ಮೂಲಕ ‘ಲಸ್ಟ್ ಸ್ಟೋರೀಸ್ 2’ ರಿಲೀಸ್ ಆಗಲಿದೆ. ಆ ಬಳಿಕ ‘ಡಿಸ್ನಿ ಪ್ಲಸ್ ಹಾಟ್ ಸ್ಟಾರ್’ ಒಟಿಟಿ ಮೂಲಕ ‘ದಿ ಟ್ರಯಲ್’ ಪ್ರಸಾರ ಆಗಲಿದೆ. ಇನ್ನು, ಕಾಜೋಲ್ ಅವರ ಪುತ್ರಿ ನಿಸಾ ದೇವಗನ್ ಅವರು ಆಗಾಗ ಸುದ್ದಿ ಆಗುತ್ತಿದ್ದಾರೆ. ಅವರು ಚಿತ್ರರಂಗಕ್ಕೆ ಎಂಟ್ರಿ ನೀಡಲಿ ಎಂದು ಫ್ಯಾನ್ಸ್ ಬಯಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.