ನಟಿ ಕಂಗನಾ ರಣಾವತ್ (Kangana Ranaut ) ವಿವಾದಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಈಗ ಅವರ ಹೆಗಲಿಗೆ ಒಟಿಟಿ ಶೋನ ನಿರೂಪಣೆಯ ಜವಾಬ್ದಾರಿ ಸಿಕ್ಕಿದೆ. ಆಲ್ಟ್ಬಾಲಾಜಿ (ALTBalaji ) ಹಾಗೂ ಎಂಕ್ಸ್ ಪ್ಲೇಯರ್ನಲ್ಲಿ ಪ್ರಸಾರವಾಗುತ್ತಿರುವ ‘ಲಾಕಪ್’ (Lock Upp) ಶೋಅನ್ನು ಕಂಗನಾ ನಡೆಸಿಕೊಡುತ್ತಿದ್ದಾರೆ. ಮೊದಲ ದಿನವೇ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು ಕಂಗನಾ. ಈ ಶೋ ಬಿಗ್ ಬಾಸ್ನ ಪಡಿಅಚ್ಚು ಎನ್ನುವ ಟೀಕೆಗಳು ಕೂಡ ಕೇಳಿ ಬಂದಿದ್ದವು. ಆದರೆ, ಈ ಟೀಕೆಗಳನ್ನೆಲ್ಲವನ್ನೂ ಈ ಶೋ ಮೆಟ್ಟಿ ನಿಂತಿದೆ. ಮೊದಲ ದಿನವೇ ಈ ಕಾರ್ಯಕ್ರಮ ದಾಖಲೆಯ ವೀಕ್ಷಣೆ ಕಂಡಿದೆ. ಇದು ಕಂಗನಾ ಖುಷಿಯನ್ನು ಹೆಚ್ಚಿಸಿದೆ. ಅಷ್ಟಕ್ಕೂ ಈ ಶೋ ಎಷ್ಟು ವೀಕ್ಷಣೆ ಕಂಡಿದೆ ಎಂಬುದಕ್ಕೆ ಇಲ್ಲಿದೆ ವಿವರ.
ಹಿಂದಿಯಲ್ಲಿ ‘ಬಿಗ್ ಬಾಸ್’ ಶೋ 15 ಸೀಸನ್ಗಳನ್ನು ಪೂರ್ಣಗೊಳಿಸಿದೆ. ವರ್ಷ ಕಳೆದಂತೆ ಈ ಶೋ ತನ್ನ ಚಾರ್ಮ್ ಕಳೆದುಕೊಳ್ಳುತ್ತಿದೆಯಾದರೂ ಒಂದು ವರ್ಗದ ಜನರು ಈ ಶೋಅನ್ನು ಇಷ್ಟಪಡುತ್ತಾರೆ. ಅದರಲ್ಲೂ ಸಲ್ಮಾನ್ ಖಾನ್ ಅವರ ನಿರೂಪಣೆ ಅನೇಕರಿಗೆ ಇಷ್ಟವಾಗುತ್ತದೆ. ಈ ಶೋನಿಂದ ಅನೇಕರ ಬದುಕು ಬದಲಾಗಿದೆ. ಇದರಲ್ಲಿ ಪಾಲ್ಗೊಂಡಿದ್ದ ಅನೇಕ ಸ್ಪರ್ಧಿಗಳು ಈಗ ‘ಲಾಕ್ ಅಪ್’ನಲ್ಲೂ ಇದ್ದಾರೆ. ಬಿಗ್ ಬಾಸ್ನಂತೆ ಇಲ್ಲೂ ಕೆಲವರ ಡ್ರಾಮಾಗಳು ಶುರುವಾಗಿದೆ. ಕೆಲವರಿಗೆ ಇದು ಇಷ್ಟವಾಗಿಲ್ಲ. ಆದರೆ, ಒಂದು ವರ್ಗದವರಿಗೆ ಇದು ಇಷ್ಟವಾಗಿದೆ.
‘ಲಾಕಪ್’ ಶೋ 48 ಗಂಟೆಗಳಲ್ಲಿ ಅಂದರೆ, ಎರಡು ದಿನಗಳಲ್ಲಿ 15 ಮಿಲಿಯನ್ (1.5 ಕೋಟಿ) ವೀಕ್ಷಣೆ ಕಂಡಿದೆ. ಒಟಿಟಿಯಲ್ಲಿ ನೇರವಾಗಿ ಪ್ರಸಾರವಾದ ಯಾವ ಶೋ ಕೂಡ ಇಷ್ಟು ದೊಡ್ಡ ಮಟ್ಟದಲ್ಲಿ ವೀಕ್ಷಣೆ ಕಂಡಿಲ್ಲ ಎಂದು ವರದಿಯಾಗಿದೆ. ಇದು ಕಂಗನಾ ಖುಷಿಯನ್ನು ಹೆಚ್ಚಿಸಿದೆ.
ಈ ಬಗ್ಗೆ ಬರೆದುಕೊಂಡಿರುವ ಕಂಗನಾ, ‘ನನ್ನ ಶೋಗೆ ಸಿಕ್ಕಿರುವ ಪ್ರತಿಕ್ರಿಯೆಯಿಂದ ನಾನು ಖುಷಿಯಾಗಿದ್ದೇನೆ. ಇದೊಂದು ವಿಶಿಷ್ಟ ಪರಿಕಲ್ಪನೆಯ ವಿಭಿನ್ನ ಕಾರ್ಯಕ್ರಮ. ವೀಕ್ಷಕರು ನೀಡಿದ ಪ್ರೀತಿಯನ್ನು ನೋಡಿ ನನಗೆ ತುಂಬಾ ಖುಷಿಯಾಗಿದೆ’ ಎಂದು ಕಂಗನಾ ಹೇಳಿದ್ದಾರೆ. ಈ ಶೋ ಬಿಗ್ ಬಾಸ್ಗಿಂತಲೂ ಚೆನ್ನಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ.
ಟೀಕೆಗೆ ಒಳಗಾಗಿದ್ದ ಕಂಗನಾ..
‘ಲಾಕಪ್’ ಶೋನ ಆರಂಭದಲ್ಲೇ ಅಭಿಮಾನಿಗಳಿಂದ ಹಾಗೂ ನೆಟ್ಟಿಗರಿಂದ ಕಂಗನಾ ರಣಾವತ್ ತೀವ್ರ ಅವಮಾನ ಎದುರಿಸಿದ್ದರು. ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗಿತ್ತು. ‘ಕಂಗನಾ ನಿರೂಪಕಿ ಅಲ್ಲ, ಸ್ಪರ್ಧಿಯಂತೆ ಕಾಣಿಸುತ್ತಿದ್ದಾರೆ. ಅವರೇ ಇಲ್ಲಿ ಡ್ರಾಮಾ ಹುಟ್ಟು ಹಾಕುತ್ತಿದ್ದಾರೆ. ನಿಜಕ್ಕೂ ಬೋರಿಂಗ್ ಶೋ’ ಎಂದು ಅಭಿಮಾನಿಯೋರ್ವ ಬರೆದುಕೊಂಡಿದ್ದರು. ‘ಇದು ಬಿಗ್ ಬಾಸ್ನ ಸಸ್ತಾ ಕಾಪಿ’ ಎಂದು ಬರೆದುಕೊಳ್ಳಲಾಗಿತ್ತು. ‘ನೆಟ್ಫ್ಲಿಕ್ಸ್ನ ಸ್ಕ್ವಿಡ್ ಗೇಮ್+ಬಿಗ್ ಬಾಸ್= ಲಾಕ್ಅಪ್’ ಎಂದು ಕೆಲವರು ಟೀಕೆ ಮಾಡಿದ್ದರು.
ಇದನ್ನೂ ಓದಿ: ಬಾಲಿವುಡ್ನ ಈ ಹೀರೋ ಈಗಲೂ ನನ್ನನ್ನು ಮಗುವಿನಂತೆ ಕಾಣುತ್ತಾರೆ ಎಂದ ಆಲಿಯಾ ಭಟ್
ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ಸಂಜಯ್ ಮಗಳು; ಕರಣ್ ಹೆಗಲಿದೆ ಹೊಸ ಜವಾಬ್ದಾರಿ