
ಸಾಮಾನ್ಯವಾಗಿ ಕೆಲವು ಸಿನಿಮಾಗಳು ಥಿಯೇಟರ್ನಲ್ಲಿ ಬಿಡುಗಡೆ ಆಗದೆ ಒಟಿಟಿಗೆ ಬಂದ ಉದಾಹರಣೆ ಇದೆ. ಥಿಯೇಟರ್ನಲ್ಲಿ ಸಿನಿಮಾಗಳು ರನ್ ಆಗುತ್ತೋ ಅಥವಾ ಇಲ್ಲವೋ ಎಂಬ ಅನುಮಾನ ಇದ್ದವರು ಈ ಮಾರ್ಗ ಅನುಸರಿಸುತ್ತಾರೆ. ಆದರೆ, ಈಗ ಸೀರಿಯಲ್ ಇತಿಹಾಸದಲ್ಲೇ ಒಂದು ಅಪರೂಪದ ಬೆಳವಣಿಗೆ ನಡೆದಿದೆ. ‘ಕರ್ಣ’ (Karna Serial) ಧಾರವಾಹಿ ಜುಲೈ 3ರಿಂದ ಟಿವಿಯಲ್ಲಿ ಪ್ರಸಾರ ಕಾಣಲಿದೆ. ಹಾಗಿರುವಾಗಲೇ ಈ ಧಾರಾವಾಹಿಯ ಮೊದಲ ಎಪಿಸೋಡ್ ಒಟಿಟಿಯಲ್ಲಿ ಪ್ರಸಾರ ಕಂಡಿದೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜೂನ್ 16ರಂದೇ ‘ಕರ್ಣ’ ಧಾರಾವಾಹಿಯ ಮೊದಲ ಎಪಿಸೋಡ್ ಪ್ರಸಾರ ಕಂಡಿರಬೇಕಿತ್ತು. ಈ ಧಾರಾವಾಹಿಯಲ್ಲಿ ಕಿರಣ್ ರಾಜ್, ನಮ್ರತಾ ಗೌಡ ಹಾಗೂ ಭವ್ಯಾ ಗೌಡ ಅವರು ನಟಿಸಿದ್ದಾರೆ. ಆದರೆ, ಈ ಧಾರಾವಾಹಿಗೆ ವಿಘ್ನ ಎದುರಾಯಿತು. ಭವ್ಯಾ ಗೌಡ ಅವರು ‘ಬಿಗ್ ಬಾಸ್’ನಲ್ಲಿ ಭಾಗವಹಿಸುವ ವೇಳೆ ಒಪ್ಪಂದ ಒಂದನ್ನು ಮಾಡಿಕೊಂಡಿದ್ದರು. ಆ ಒಪ್ಪಂದದ ಅವಧಿ ಮುಗಿಯುವ ಮೊದಲೇ ‘ಕರ್ಣ’ ಧಾರಾವಾಹಿ ಪ್ರಸಾರ ಕಂಡಿದ್ದರಿಂದ ಕೇಸ್ ಹಾಕಲಾಯಿತು.
ಇದೇ ಕಾರಣದಿಂದ ‘ಕರ್ಣ’ ಧಾರಾವಾಹಿ ಜೀ ಕನ್ನಡದಲ್ಲಿ ಪ್ರಸಾರ ಕಂಡಿರಲಿಲ್ಲ. ‘ಕರ್ಣ ಬರೋದು ತಡವಾಗಬಹುದು. ಆದರೆ, ಅವನು ಬರೋದು ಖಚಿತ’ ಎಂದು ವಾಹಿನಿಯವರು ಹೇಳಿದ್ದರು. ಈಗ ಈ ಧಾರಾವಾಹಿಯ ಮೊದಲ ಎಪಿಸೋಡ್ ಒಟಿಟಿಯಲ್ಲಿ ಪ್ರಸಾರ ಕಂಡಿದೆ. ಇದು ಅನೇಕರ ಅಚ್ಚರಿಗೆ ಕಾರಣ ಆಗಿದೆ.
ಇದನ್ನೂ ಓದಿ: ‘ಕರ್ಣ’ ಧಾರಾವಾಹಿಗೆ ವಿಘ್ನ; ಇಂದು ಪ್ರಸಾರ ಆಗಲ್ಲ ಸೀರಿಯಲ್
ಟಿವಿಯಲ್ಲಿ ಪ್ರಸಾರ ಕಂಡ ಬಳಿಕವೇ ಧಾರಾವಾಹಿಯನ್ನು ಒಟಿಟಿಯಲ್ಲಿ ಪ್ರಸಾರ ಮಾಡೋದು ವಾಡಿಕೆ. ಆದರೆ, ಜೀ ಕನ್ನಡ ಹಾಗೂ ಜೀ 5 ಈಗ ಹೊಸ ತಂತ್ರವನ್ನು ಬಳಸಿದೆ. ಈ ಧಾರಾವಾಹಿ ಸೋಮವಾರದಿಂದ ಶುಕ್ರವರಾದವರೆಗೆ ಟಿವಿಯಲ್ಲಿ ರಾತ್ರಿ 8 ಗಂಟೆಗೆ ಪ್ರಸಾರ ಕಾಣಲಿದೆ.
ಈ ಧಾರಾವಾಹಿಯಲ್ಲಿ ಕಿರಣ್ ರಾಜ್ ವೈದ್ಯನ ಪಾತ್ರ ಮಾಡಿದ್ದಾರೆ. ಭವ್ಯಾ ಗೌಡ ಹಾಗೂ ನಮ್ರತಾ ಗೌಡ ಸಹೋದರಿಯರಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರಿಗೂ ಒಬ್ಬರ ಮೇಲೆ ಲವ್ ಆಗುತ್ತದೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 4:29 pm, Wed, 2 July 25