ಫೆ.9ಕ್ಕೆ ಒಟಿಟಿಗೆ ಬರಲಿದೆ ‘ಗುಂಟೂರು ಖಾರಂ’; ಸಿಹಿ ಸುದ್ದಿ ನೀಡಿದ ನೆಟ್ಫ್ಲಿಕ್ಸ್
‘ಗುಂಟೂರು ಖಾರಂ’ ಚಿತ್ರದ ಒಟಿಟಿ ರಿಲೀಸ್ಗೆ ದಿನಾಂಕ ನಿಗದಿ ಆಗಿದೆ. ‘ನೆಟ್ಫ್ಲಿಕ್ಸ್’ ಮೂಲಕ ಈ ಚಿತ್ರ ಒಟಿಟಿ ಅಂಗಳಕ್ಕೆ ಕಾಲಿಡಲಿದೆ. ತೆಲುಗು ಮಾತ್ರವಲ್ಲದೇ ಕನ್ನಡ, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲೂ ಈ ಚಿತ್ರ ವೀಕ್ಷಣೆಗೆ ಲಭ್ಯವಾಗಲಿದೆ. ಚಿತ್ರಮಂದಿರದಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಈ ಚಿತ್ರಕ್ಕೆ ಪ್ರೇಕ್ಷಕರು ಒಟಿಟಿಯಲ್ಲಿ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಸೃಷ್ಟಿಯಾಗಿದೆ.
ಟಾಲಿವುಡ್ ‘ಪ್ರಿನ್ಸ್’ ಮಹೇಶ್ ಬಾಬು (Mahesh Babu) ನಟನೆಯ ‘ಗುಂಟೂರು ಖಾರಂ’ ಸಿನಿಮಾಗೆ ಥಿಯೇಟರ್ನಲ್ಲಿ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಅದೇ ಸಂದರ್ಭದಲ್ಲಿ ಬಿಡುಗಡೆಯಾದ ಬೇರೆ ಸಿನಿಮಾಗಳು ಸಿಕ್ಕಾಪಟ್ಟೆ ಪೈಪೋಟಿ ನೀಡಿದ್ದವು. ಹಾಗಾಗಿ ಚಿತ್ರಮಂದಿರಕ್ಕೆ ಹೋಗಿ ಸಿನಿಮಾವನ್ನು ನೋಡಲು ಕೆಲವರು ಹಿಂದೇಟು ಹಾಕಿದ್ದರು. ಹೇಗೂ ಒಟಿಟಿಗೆ ಬಂದಮೇಲೆ ನೋಡಿದರೆ ಆಯ್ತು ಎಂಬ ಮನಸ್ಥಿತಿಯಲ್ಲಿ ಬಹುತೇಕರು ಇದ್ದರು. ಆ ಕಾರಣದಿಂದ ಈ ಚಿತ್ರದ ಕಲೆಕ್ಷನ್ ಕುಂಠಿತ ಆಗಿತ್ತು. ಅಂದುಕೊಂಡಂತೆಯೇ ಈಗ ‘ಗುಂಟೂರು ಖಾರಂ’ (Guntur Kaaram) ಸಿನಿಮಾ ಒಟಿಟಿಗೆ ಎಂಟ್ರಿ ನೀಡಲು ಸಜ್ಜಾಗಿದೆ. ಫೆಬ್ರವರಿ 9ರಂದು ನೆಟ್ಫ್ಲಿಕ್ಸ್ (Netflix) ಮೂಲಕ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ.
ಈ ವರ್ಷ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 12ರಂದು ‘ಗುಂಟೂರು ಖಾರಂ’ ಸಿನಿಮಾ ಬಿಡುಗಡೆ ಆಗಿತ್ತು. ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್ ಆಗಿಲ್ಲ. ಆದ್ದರಿಂದ ಆದಷ್ಟು ಬೇಗ ಇದನ್ನು ಒಟಿಟಿಯಲ್ಲಿ ರಿಲೀಸ್ ಮಾಡಲು ತೀರ್ಮಾನಿಸಲಾಯಿತು. ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಒಂದು ತಿಂಗಳು ಕಳೆಯುವುದರೊಳಗೆ ‘ಗುಂಟೂರು ಖಾರಂ’ ಸಿನಿಮಾ ಒಟಿಟಿ ಅಂಗಳಕ್ಕೆ ಕಾಲಿಡುತ್ತಿದೆ. ಮನೆಯಲ್ಲೇ ಕುಳಿತು ಈ ಸಿನಿಮಾ ನೋಡಬೇಕು ಎಂದುಕೊಂಡಿದ್ದ ಎಲ್ಲರಿಗೂ ಈ ಸುದ್ದಿ ಕೇಳಿ ಖುಷಿಯಾಗಿದೆ.
View this post on Instagram
‘ಗುಂಟೂರು ಖಾರಂ’ ಸಿನಿಮಾದ ಒಟಿಟಿ ರಿಲೀಸ್ ದಿನಾಂಕವನ್ನು ‘ನೆಟ್ಫ್ಲಿಕ್ಸ್’ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ತಿಳಿಸಲಾಗಿದೆ. ತೆಲುಗಿನ ಈ ಸಿನಿಮಾ ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲೂ ವೀಕ್ಷಣೆಗೆ ಲಭ್ಯವಾಗಲಿದೆ. ಥಿಯೇಟರ್ನಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದ ಈ ಸಿನಿಮಾಗೆ ಜನರು ಒಟಿಟಿಯಲ್ಲಿ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಮಾಸ್ ಶೈಲಿಯಲ್ಲಿ ಮೂಡಿಬಂದ ‘ಗುಂಟೂರು ಖಾರಂ’ ಸಿನಿಮಾದಲ್ಲಿ ಮಹೇಶ್ ಬಾಬು ಜೊತೆ ಮೀನಾಕ್ಷಿ ಚೌದರಿ, ಶ್ರೀಲೀಲಾ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನ ಮಾಡಿದ್ದಾರೆ. ಥಮನ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಮಹೇಶ್ ಬಾಬು ಮನೆಯಲ್ಲಿ ಪಾರ್ಟಿ ಮಾಡಿದ ನಟಿ ಶ್ರೀಲೀಲಾ
ಮಹೇಶ್ ಬಾಬು ಅವರು ಮುಂದಿನ ಸಿನಿಮಾಗಾಗಿ ರಾಜಮೌಳಿ ಜೊತೆ ಕೈ ಜೋಡಿಸಿದ್ದಾರೆ. ಶೀಘ್ರದಲ್ಲೇ ಅವರ ಹೊಸ ಸಿನಿಮಾ ಸೆಟ್ಟೇರಲಿದೆ. ಆ ಚಿತ್ರದ ಸಲುವಾಗಿ ಟ್ರೇನಿಂಗ್ ಪಡೆಯಲು ಅವರು ಇತ್ತೀಚೆಗೆ ಜರ್ಮನಿಗೆ ತೆರಳಿದ್ದರು. ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ಮಹೇಶ್ ಬಾಬು ನಟಿಸುವುದರ ಜೊತೆಗೆ ನಿರ್ಮಾಣದಲ್ಲೂ ಪಾಲುದಾರಿಕೆ ಹೊಂದಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ