ಮಲಯಾಳಂನ ಸೂಪರ್ ಹಿಟ್ ಸಿನಿಮಾ ‘ಪ್ರೇಮಲು’ ಒಟಿಟಿ ರಿಲೀಸ್ ಮತ್ತಷ್ಟು ವಿಳಂಬ

| Updated By: ಮಂಜುನಾಥ ಸಿ.

Updated on: Mar 31, 2024 | 9:38 AM

Premalu OTT: ಮಲಯಾಳಂನ ಈ ವರ್ಷದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾದ ‘ಪ್ರೇಮಲು’ ಒಟಿಟಿಗೆ ಬರುತ್ತಿದೆ. ಯಾವ ಒಟಿಟಿ? ಎಂದು ಬಿಡುಗಡೆ? ಇಲ್ಲಿದೆ ಮಾಹಿತಿ.

ಮಲಯಾಳಂನ ಸೂಪರ್ ಹಿಟ್ ಸಿನಿಮಾ ‘ಪ್ರೇಮಲು’ ಒಟಿಟಿ ರಿಲೀಸ್ ಮತ್ತಷ್ಟು ವಿಳಂಬ
Follow us on

2024ರ ವರ್ಷ ಮಲಯಾಳಂ (Malayalam) ಚಿತ್ರರಂಗಕ್ಕೆ ಸಾಕಷ್ಟು ವಿಶೇಷ ಎನಿಸಿಕೊಂಡಿದೆ. ಈ ವರ್ಷ ಮಲಯಾಳಂನಲ್ಲಿ ರಿಲೀಸ್ ಆದ ‘ಪ್ರೇಮಲು’, ‘ಭ್ರಮಾಯುಗಂ’, ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾಗಳು ಯಶಸ್ಸು ಕಂಡವು. ಮಾರ್ಚ್ 28ರಂದು ಬಿಡುಗಡೆ ಆದ ಪೃಥ್ವಿರಾಜ್ ನಟನೆಯ ‘ಆಡುಜೀವಿತಂ’ (Aadujeevitham) ಸಿನಿಮಾ ಕೂಡ ಮೆಚ್ಚುಗೆ ಪಡೆದಿದ್ದು, ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿದೆ. ಕರ್ನಾಟಕದ ಹಲವು ಕಡೆಗಳಲ್ಲಿ ಮಲಯಾಳಂ ಸಿನಿಮಾ ವೀಕ್ಷಣೆಗೆ ಲಭ್ಯ ಇಲ್ಲ. ಅಂಥವರು ಈ ಸಿನಿಮಾಗಳ ಒಟಿಟಿ ರಿಲೀಸ್​ಗಾಗಿ ಕಾದಿದ್ದಾರೆ. ಈ ಸಿನಿಮಾಗಳ ಪೈಕಿ ‘ಪ್ರೇಮಲು’ ಸಿನಿಮಾದ ಒಟಿಟಿ ರಿಲೀಸ್ ಬಗ್ಗೆ ಹೊಸ ಸುದ್ದಿ ಹರಿದಾಡಿದೆ.

ಫೆಬ್ರವರಿ ಪ್ರೇಮಿಗಳಿಗೆ ಸಖತ್ ವಿಶೇಷ ಎನಿಸಿಕೊಂಡಿದೆ. ಈ ಅವಧಿಯಲ್ಲಿ ಪ್ರೇಮ ಕಥೆಯುಳ್ಳ ಚಿತ್ರಗಳು ರಿಲೀಸ್ ಆಗುತ್ತವೆ. ಅದೇ ರೀತಿ ಮಲಯಾಳಂನಲ್ಲಿ ‘ಪ್ರೇಮಲು’ ಸಿನಿಮಾ ರಿಲೀಸ್ ಆಯಿತು. ಗಿರೀಶ್ ಎಡಿ ನಿರ್ದೇಶನದ ಈ ಸಿನಿಮಾನ ಫಹಾದ್ ಫಾಸಿಲ್ ಮೊದಲಾದವರು ನಿರ್ಮಿಸಿದ್ದಾರೆ. 9 ಕೋಟಿ ಬಜೆಟ್​ನಲ್ಲಿ ನಿರ್ಮಾಣ ಆದ ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ 130 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಈ ಚಿತ್ರದಲ್ಲಿ ನಸ್ಲೆನ್, ಮಮಿತಾ ಬೈಜು ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ಪ್ರೇಕ್ಷಕರಿಗೆ ಸಖತ್ ಇಷ್ಟ ಆಗಿದೆ.

ಇದನ್ನೂ ಓದಿ:ತಮಿಳಿನ ಬಳಿಕ ತೆಲುಗಿನಲ್ಲಿಯೂ ಬಿಡುಗಡೆ ಆಗುತ್ತಿದೆ ಮಲಯಾಳಂ ಬ್ಲಾಕ್​ಬಸ್ಟರ್ ‘ಮಂಜ್ಞುಮ್ಮೆಲ್ ಬಾಯ್ಸ್’

ಈ ಸಿನಿಮಾ ಥಿಯೇಟರ್​ನಲ್ಲಿ ರಿಲೀಸ್ ಆಗಿದ್ದು ಫೆಬ್ರವರಿ 9ರಂದು. ಈ ಚಿತ್ರ ಮಾರ್ಚ್ 29ರಂದು ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎನ್ನಲಾಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಯಾವುದೇ ಒಟಿಟಿಯಲ್ಲೂ ಸಿನಿಮಾ ರಿಲೀಸ್ ಆಗಿಲ್ಲ. ಈಗ ಸಿನಿಮಾ ಏಪ್ರಿಲ್ 12ರಂದು ಒಟಿಟಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.

‘ಪ್ರೇಮಲು’ ಚಿತ್ರ ತಡವಾಗಿ ತೆಲುಗು ಹಾಗೂ ತಮಿಳು ಭಾಷೆಗೆ ಡಬ್ ಆಗಿ ರಿಲೀಸ್ ಆಗಿದೆ. ಥಿಯೇಟರ್​ನಲ್ಲಿ ಜನರು ಇನ್ನೂ ಸಿನಿಮಾ ವೀಕ್ಷಣೆ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಸಿನಿಮಾದ ಒಟಿಟಿ ರಿಲೀಸ್​ನ ತಂಡ ಮುಂದೂಡಿಕೊಳ್ಳುತ್ತಿದೆ. ಈ ಚಿತ್ರವನ್ನು ತೆಲುಗಿನಲ್ಲಿ ರಾಜಮೌಳಿ ಮಗ ಕಾರ್ತಿಕೇಯ ಅವರು ಡಬ್ಬಿಂಗ್ ಹಕ್ಕು ಪಡೆದು ರಿಲೀಸ್ ಮಾಡಿದ್ದಾರೆ.

‘ಪ್ರೇಮಲು’ ಚಿತ್ರವನ್ನು ಕೇವಲ ಮಲಯಾಳಂ ಮಂದಿ ಮಾತ್ರವಲ್ಲದೆ ನಿರ್ದೇಶಕ ರಾಜಮೌಳಿ, ನಟ ಮಹೇಶ್ ಬಾಬು ಸೇರಿ ಅನೇಕರು ಸ್ಟಾರ್​ಗಳು ಹೊಗಳಿದ್ದರು. ಹೀಗಾಗಿ, ಸಿನಿಮಾಗೆ ಭರ್ಜರಿ ಮೈಲೇಜ್ ಸಿಕ್ಕಿದೆ. ಸಿನಿಮಾದಲ್ಲಿ ಫನ್ ಅಂಶಗಳು ಹೆಚ್ಚಿವೆ. ‘ಪ್ರೇಮಲು’ ರೀತಿ ‘ಮಂಜುಮ್ಮೇಲ್ ಬಾಯ್ಸ್’ ಚಿತ್ರದ ಒಟಿಟಿ ರಿಲೀಸ್​ಗೂ ಫ್ಯಾನ್ಸ್ ಕಾದಿದ್ದಾರೆ. ಈ ಸಿನಿಮಾ ಏಪ್ರಿಲ್ 5ರಂದು ಡಿಸ್ನಿ ಪ್ಲಸ್ ಹಾಟ್​ಸ್ಟಾರ್ ಮೂಲಕ ಪ್ರಸಾರ ಕಾಣಲಿದೆ ಎಂದು ಹೇಳಲಾಗಿತ್ತು. ಆದರೆ, ಅದು ನಿಜವಾಗುತ್ತಿಲ್ಲ ಎನ್ನಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:52 am, Sun, 31 March 24