ಏಪ್ರಿಲ್ 5ಕ್ಕೆ ಒಟಿಟಿಯಲ್ಲಿ ಬಿಡುಗಡೆ ಆಗಲ್ಲ ‘ಮಂಜ್ಞುಮ್ಮೆಲ್ ಬಾಯ್ಸ್’
Manjummel Boys: ಮಲಯಾಳಂನ ಸೂಪರ್ ಹಿಟ್ ಸಿನಿಮಾ ‘ಮಂಜ್ಞುಮ್ಮೆಲ್ ಬಾಯ್ಸ್’ ಏಪ್ರಿಲ್ 5ರಂದು ಒಟಿಟಿಗೆ ಬಿಡುಗಡೆ ಆಗಲಿದೆ ಎನ್ನಲಾಗಿದೆ. ಆದರೆ ಈ ಸುದ್ದಿ ಸುಳ್ಳೆಂದು ಚಿತ್ರತಂಡ ಹೇಳಿದೆ.
ಮಲಯಾಳಂ (Malayalam) ಚಿತ್ರರಂಗದ ಇತ್ತೀಚೆಗಿನ ಸೂಪರ್ ಹಿಟ್ ಸಿನಿಮಾ ‘ಮಂಜ್ಞುಮ್ಮೆಲ್ ಬಾಯ್ಸ್’ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆಗಳನ್ನು ಬರೆದಿದೆ. ಫೆಬ್ರವರಿ 22 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಭಾರಿ ಜನಾಧರಣೆಗೆ ಪಾತ್ರವಾಗಿದೆ. ಮಲಯಾಳಂ ಚಿತ್ರರಂಗದಲ್ಲಿಯೇ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾ ಎನಿಸಿಕೊಂಡಿರುವ ‘ಮಂಜ್ಞುಮ್ಮೆಲ್ ಬಾಯ್ಸ್’ ಈವರೆಗೆ 250 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದು, ತಮಿಳು ಭಾಷೆಯಲ್ಲಿಯೂ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿದೆ. ತೆಲುಗು ಭಾಷೆಯಲ್ಲಿಯೂ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ಇದರ ಮಧ್ಯೆ, ‘ಮಂಜ್ಞುಮ್ಮೆಲ್ ಬಾಯ್ಸ್’ ಸಿನಿಮಾ ಒಟಿಟಿಗೆ ಬಿಡುಗಡೆ ಆಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಅದು ಸುಳ್ಳು ಎನ್ನಲಾಗುತ್ತಿದೆ.
ಏಪ್ರಿಲ್ 5 ರಂದು ‘ಮಂಜ್ಞುಮ್ಮೆಲ್ ಬಾಯ್ಸ್’ ಸಿನಿಮಾ ಒಟಿಟಿಗೆ ಬಿಡುಗಡೆ ಆಗಲಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದೀಗ ಸಿನಿಮಾ ತಂಡವು ಈ ಸ್ಪಷ್ಟನೆ ನೀಡಿದ್ದು ‘ಮಂಜ್ಞುಮ್ಮೆಲ್ ಬಾಯ್ಸ್’ ಸಿನಿಮಾ ಏಪ್ರಿಲ್ 5 ರಂದು ಒಟಿಟಿಯಲ್ಲಿ ಬಿಡುಗಡೆ ಆಗಲಿದೆ ಎಂಬ ಮಾತು ಸುಳ್ಳು ಎಂದಿದೆ. ಈ ಬಗ್ಗೆ ಸಿನಿಮಾ ವಿಶ್ಲೇಷಕ ಎಬಿ ಜಾರ್ಜ್ ಟ್ವೀಟ್ ಮಾಡಿದ್ದು, ‘ಮಂಜ್ಞುಮ್ಮೆಲ್ ಬಾಯ್ಸ್’ ಸಿನಿಮಾ ಒಟಿಟಿ ಬಿಡುಗಡೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ಸುದ್ದಿಗಳು ಹರಿದಾಡುತ್ತಿವೆ. ಈ ಸಿನಿಮಾ ಏಪ್ರಿಲ್ 5 ರಂದು ಒಟಿಟಿಗೆ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ಆದರೆ ಅದು ಸುಳ್ಳೆಂದು ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ. ಬಹುಷಃ ಮೇ ತಿಂಗಳಲ್ಲಿ ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ’ ಎಂದಿದ್ದಾರೆ.
ಇದನ್ನೂ ಓದಿ:ತಮಿಳಿನ ಬಳಿಕ ತೆಲುಗಿನಲ್ಲಿಯೂ ಬಿಡುಗಡೆ ಆಗುತ್ತಿದೆ ಮಲಯಾಳಂ ಬ್ಲಾಕ್ಬಸ್ಟರ್ ‘ಮಂಜ್ಞುಮ್ಮೆಲ್ ಬಾಯ್ಸ್’
‘ಮಂಜ್ಞುಮ್ಮೆಲ್ ಬಾಯ್ಸ್’ ಸಿನಿಮಾ ಮಲಯಾಳಂ ಬಳಿಕ ತಮಿಳು ಭಾಷೆಯಲ್ಲಿ ಬಿಡುಗಡೆ ಆಗಿ ಅಲ್ಲಿಯೂ ಸೂಪರ್ ಹಿಟ್ ಆಗಿದೆ. ಇದೀಗ ಇದೇ ಸಿನಿಮಾ ತೆಲುಗಿಗೆ ಡಬ್ ಆಗಿ ಏಪ್ರಿಲ್ 4 ರಿಂದ ಆಂಧ್ರ, ತೆಲಂಗಾಣದ ಆಯ್ದ ನಗರಗಳಲ್ಲಿ ಬಿಡುಗಡೆ ಆಗುತ್ತಿದೆ. ‘ಪುಷ್ಪ’ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ಮಿಸಿರುವ ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾದ ವಿತರಣೆ ಮಾಡಲಿದ್ದಾರೆ. ಚಿತ್ರಮಂದಿರಗಳಲ್ಲಿ ಇನ್ನೂ ಚೆನ್ನಾಗಿ ಪ್ರದರ್ಶನ ಕಾಣುತ್ತಿರುವ ಕಾರಣ ಸಿನಿಮಾದ ಒಟಿಟಿ ಬಿಡುಗಡೆಯನ್ನು ಚಿತ್ರತಂಡ ತಡವಾಗಿ ಮಾಡಲಿದೆ.
‘ಮಂಜ್ಞುಮ್ಮೆಲ್ ಬಾಯ್ಸ್’ ನೈಜ ಘಟನೆಯನ್ನು ಆಧರಸಿದ ಸಿನಿಮಾ ಆಗಿದೆ. ಕೇರಳದ ಸ್ನೇಹಿತರ ಗುಂಪೊಂದು ಕೊಡೈಕೆನಾಲ್ಗೆ ಪ್ರವಾಸಕ್ಕೆಂದು ಬಂದು ಅಲ್ಲಿ, ಕಮಲ್ ಹಾಸನ್ ನಟಿಸಿರುವ ‘ಗುಣ’ ಸಿನಿಮಾದ ಚಿತ್ರೀಕರಣ ಮಾಡಿರುವ ಗುಣ ಗುಹೆ ನೋಡಲು ಹೋದಾಗ ಅಲ್ಲಿನ ದುರ್ಗಮ ಕಂದಕವೊಂದಕ್ಕೆ ಸ್ನೇಹಿತರ ಗುಂಪಿನ ಒಬ್ಬ ವ್ಯಕ್ತಿ ಬಿದ್ದು ಬಿಡುತ್ತಾನೆ. ಆ ಯುವಕನ್ನು ಆ ಗುಂಪು ಹೇಗೆ ಕಾಪಾಡುತ್ತದೆ ಅವರಿಗೆ ಎದುರಾಗುವ ಸಮಸ್ಯೆಗಳು ಎಂಥಹವು, ಅವನ್ನು ಹೇಗೆ ಅವರು ಎದುರಿಸುತ್ತಾರೆ ಎಂಬುದೇ ಈ ಸಿನಿಮಾದ ಕತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ