ಮೋಹನ್ಲಾಲ್ ನಟನೆಯ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ‘ಮರಕ್ಕರ್: ಲಯನ್ ಆಫ್ ದಿ ಅರೇಬಿಯನ್ ಸೀ’ ಚಿತ್ರವು ಒಟಿಟಿಯಲ್ಲಿ ನೇರವಾಗಿ ಬಿಡುಗಡೆಯಾಗುವ ಕ್ರಾಂತಿಕಾರಕ ನಿರ್ಧಾರವನ್ನು ಇತ್ತೀಚೆಗೆ ಕೈಗೊಂಡಿತ್ತು. ಬಹುದೊಡ್ಡ ತಾರಾಗಣದ, ಬಿಗ್ ಬಜೆಟ್ ಚಿತ್ರವಾದ ಇದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂದಾಗ ಕೊರೊನಾದಿಂದ ನಲುಗಿದ್ದ ಚಿತ್ರಮಂದಿರಗಳ ಮತ್ತಷ್ಟು ಹೆಚ್ಚಾಗಿತ್ತು. ಇದೀಗ ಮಾಲಿವುಡ್ ಚಿತ್ರರಂಗಕ್ಕೆ ಭರವಸೆ ತುಂಬುವ ಬೆಳವಣಿಗೆಗಳು ನಡೆದಿದ್ದು, ನೇರವಾಗಿ ಒಟಿಟಿ ಬಿಡುಗಡೆಯಿಂದ ಚಿತ್ರತಂದ ಹಿಂದೆ ಸರಿದೆದೆ. ಇದನ್ನು ಕೇರಳ ಸರ್ಕಾರದ ಸಚಿವ ಸಜಿ ಶೆರಿಯನ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಅಭಿಮಾನಿಗಳಿಗೆ ಸರ್ಪ್ರೈಸ್ ಕೂಡ ನೀಡಿದ್ದು, ಡಿಸೆಂಬರ್ 2ರಂದು ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಒಟಿಟಿ ಬಿಡುಗಡೆಯ ಸುದ್ದಿ ಕೇಳಿ ಮಂಕಾಗಿದ್ದ ಅಭಿಮಾನಿಗಳಿಗೆ ಹಾಗೂ ಚಿತ್ರಮಂದಿರಗಳಿಗೆ ಏಕಾಏಕಿ ಹುರುಪು ತುಂಬುವ ಕೆಲಸವನ್ನು ಸಚಿವರು ಮಾಡಿದ್ದಾರೆ. ಇದನ್ನು ಚಿತ್ರತಂಡ ಕೂಡ ಸ್ಪಷ್ಟಪಡಿಸಿದೆ.
ಕೇರಳದ ಚಲನಚಿತ್ರ ಅಭಿವೃದ್ಧಿ ಮತ್ತು ಚಲನಚಿತ್ರ ಅಕಾಡೆಮಿ ಸಚಿವ ಸಜಿ ಶೆರಿಯನ್ ‘ಮರಕ್ಕರ್’ ಚಿತ್ರದ ನಿರ್ಮಾಪಕ ಆಂಟೊನಿ ಪೆರುವಾಂಬೂರ್ ಅವರೊಂದಿಗೆ ಮಾತುಕತೆ ನಡೆಸಿ, ನಂತರ ಮಾಹಿತಿ ನೀಡಿದ್ದಾರೆ. ‘‘ಚಲನಚಿತ್ರ ಪ್ರದರ್ಶನಕರು, ವಿತರಕರ ಹಿತದೃಷ್ಟಿಯಿಂದ ಚಿತ್ರವನ್ನು ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಡಿಸೆಂಬರ್ 2ರಂದು ಚಿತ್ರ ಬಿಡುಗಡೆಯಾಗಲಿದೆ. ಈ ಬಹುದೊಡ್ಡ ನಿರ್ಧಾರಕ್ಕಾಗಿ ನಿರ್ಮಾಪಕರು ತ್ಯಾಗ ಮಾಡಿದ್ದಾರೆ. ಅವರಿಗೆ ಅಭಿನಂದನೆಗಳು’ ಎಂದು ಸಜಿ ತಿಳಿಸಿದ್ದಾರೆ.
ಈ ಹಿಂದೆ ನಿರ್ಮಾಪಕರು, ಆರ್ಥಿಕ ಕಾರಣಗಳಿಂದಾಗಿ, ಚಿತ್ರ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದರು. ಇದು ಇತರ ಚಿತ್ರರಂಗದಲ್ಲೂ ಸಂಚಲನ ಮೂಡಿಸಿತ್ತು. ಕಾರಣ, ಮೋಹನ್ ಲಾಲ್ ಮಲಯಾಳಂನ ಸ್ಟಾರ್ ನಟ. ಅವರ ಅಭಿನಯದ ಬಿಗ್ ಬಜೆಟ್ ಚಿತ್ರವೊಂದು ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂದಾಗ ಸಹಜವಾಗಿಯೇ ಇತರ ಭಾಷೆಗಳ ನಿರ್ಮಾಪಕರ ನಿರ್ಧಾರದಲ್ಲೂ ಬದಲಾವಣೆಗೆ ನಾಂದಿ ಹಾಡಬಹುದು ಎನ್ನಲಾಗಿತ್ತು. ಆದರೆ ಇದೀಗ ಚಿತ್ರ ಚಿತ್ರಮಂದಿರಗಳಲ್ಲೇ ಬಿಡುಗಡೆಯಾಗಲಿದೆ.
ಕೇರಳದಲ್ಲಿ ಚಿತ್ರಮಂದಿರಗಳು ಪ್ರಸ್ತುತ 50 ಪ್ರತಿಶತ ಭರ್ತಿಯೊಂದಿಗೆ ಕಾರ್ಯ ನಿರ್ವಹಿಸುತ್ತಿವೆ. ಈ ಕಾರಣದಿಂದ ಮರಕ್ಕರ್ ಚಿತ್ರದ ನಿರ್ಮಾಪಕರು, ಚಿತ್ರಮಂದಿರಗಳಲ್ಲಿ ಬಿಡುಗಡೆಯಾದರೆ, ಆರ್ಥಿಕವಾಗಿ ಲಾಭದಾಯಕವಲ್ಲ ಎಂಬ ನಿರ್ಧಾರ ತಳೆದಿದ್ದರು. ಈಗ ಸರ್ಕಾರದ ಮಧ್ಯ ಪ್ರವೇಶದಿಂದ ನಿರ್ಧಾರದಲ್ಲಿ ಬದಲಾವಣೆಯಾಗಿದೆ. ಇದು ಚಿತ್ರಮಂದಿರಗಳ ಭರ್ತಿಯಲ್ಲೂ ಬದಲಾಬವಣೆಗೆ ಕಾರಣವಾಗಬಹುದು, ಸರ್ಕಾರ ಕೊರೊನಾ ನಿಯಮಾವಳಿಗಳನ್ನು ಸಡಿಸಲಿಸಬಹುದು ಎನ್ನಲಾಗಿದೆ.
ಇದನ್ನೂ ಓದಿ:
ವಿಚ್ಛೇದನದ ಬಳಿಕ ಸಮಂತಾಗೆ ಶಾರುಖ್ ಕಡೆಯಿಂದ 2ನೇ ಚಾನ್ಸ್; ಸ್ಟಾರ್ ನಟಿಯ ಉತ್ತರ ಏನು?
Published On - 9:31 am, Fri, 12 November 21