ಮತ್ತೆ ಬಂದಿದೆ ‘ಮನಿ ಹೈಸ್ಟ್’ ಮುಖ್ಯ ಪಾತ್ರಗಳೇ ಮಿಸ್ಸಿಂಗ್
Money Heist: ‘ಮನಿ ಹೈಸ್ಟ್’ ವೆಬ್ ಸರಣಿಯ ಅಭಿಮಾನಿಗಳಿಗೆ ಖುಷಿ ಸುದ್ದಿ, ‘ಮನಿ ಹೈಸ್ಟ್’ ವೆಬ್ ಸರಣಿಯ ಪ್ರೀಕ್ವೆಲ್ ‘ಬರ್ಲಿನ್’ ವೆಬ್ ಸರಣಿ ಶೀಘ್ರವೇ ಬಿಡುಗಡೆ ಆಗಲಿದೆ.
ಕೋವಿಡ್ ಕಾಲದಲ್ಲಿ ಭಾರತದಲ್ಲಿ ವೆಬ್ ಸರಣಿಗಳು (Web Series) ಬಹಳ ಜನಪ್ರಿಯತೆಗಳಿಸಿದವು. ಯಾವ ಮಟ್ಟಿಗೆಂದರೆ ಈಗ ವೆಬ್ ಸರಣಿಗಳನ್ನು ನೋಡುವ ದೊಡ್ಡ ವರ್ಗವೇ ಒಂದು ಭಾರತೀಯ ಮನರಂಜನಾ ಕ್ಷೇತ್ರದಲ್ಲಿದೆ. ಕೋವಿಡ್ ಕಾಲದಲ್ಲಿ ಹಲವು ಅಂತರಾಷ್ಟ್ರೀಯ ವೆಬ್ ಸರಣಿಗಳು ದೊಡ್ಡ ಮಟ್ಟಿಗಿನ ಜನಪ್ರಿಯತೆ ಗಳಿಸಿದವು ಅವುಗಳಲ್ಲಿ ಒಂದು ‘ಮನಿ ಹೈಸ್ಟ್’. ಗ್ಯಾಂಗ್ ಒಂದು ಬುದ್ಧಿವಂತಿಕೆಯಿಂದ ಬ್ಯಾಂಕ್ ರಾಬರಿ ಮಾಡುವ ಈ ವೆಬ್ ಸರಣಿ ವಿಶ್ವದಲ್ಲಿ ಅತಿ ಹೆಚ್ಚು ಜನಪ್ರಿಯ ವೆಬ್ ಸರಣಿಗಳಲ್ಲಿ ಒಂದು. ವೆಬ್ ಸರಣಿ ಈಗಾಗಲೇ ಅಂತ್ಯವಾಗಿದೆ. ಆದರೆ ಇದೀಗ ಇದೇ ವೆಬ್ ಸರಣಿಯ ಸ್ಪಿನ್ ಆಫ್ ಒಂದು ಬಂದಿದ್ದು, ನಿನ್ನೆಯಷ್ಟೆ (ನವೆಂಬರ್ 30) ಅದರ ಟ್ರೈಲರ್ ಬಿಡುಗಡೆ ಆಗಿದೆ.
‘ಮನಿ ಹೈಸ್ಟ್’ನಲ್ಲಿ ರಾಬರಿ ಮಾಡುವ ಗುಂಪಿನ ಪ್ರಮುಖ ಸದಸ್ಯರಲ್ಲಿ ಒಬ್ಬನಾದ ‘ಬರ್ಲಿನ್’ ಪಾತ್ರವನ್ನು ಪ್ರಧಾನವಾಗಿಟ್ಟುಕೊಂಡು ಅದೇ ಪಾತ್ರದ ಹೆಸರಿನ ಮೇಲೆ ‘ಬರ್ಲಿನ್’ ಹೆಸರಿನ ವೆಬ್ ಸರಣಿ ಬಿಡುಗಡೆಗೆ ರೆಡಿಯಾಗಿದೆ. ವೆಬ್ ಸರಣಿಯ ಟ್ರೈಲರ್ ಬಿಡುಗಡೆ ಆಗಿದೆ. ‘ಮನಿ ಹೈಸ್ಟ್’ ಮಾದರಿಯಲ್ಲಿ ಈ ವೆಬ್ ಸರಣಿ ಸಹ ಪ್ಯಾರಿಸ್ನಲ್ಲಿ ನಡೆಯುವ ಬ್ಯಾಂಕ್ ರಾಬರಿಯ ಕುರಿತಾದದ್ದೇ ಆಗಿದೆ. ‘ಮನಿ ಹೈಸ್ಟ್’ ವೆಬ್ ಸರಣಿಯ ಕತೆ ಪ್ರಾರಂಭವಾಗುವುದಕ್ಕಿಂತಲೂ ಹಿಂದಿನ ಕತೆಯನ್ನು ಈ ವೆಬ್ ಸರಣಿ ಒಳಗೊಂಡಿದೆ ಹಾಗಾಗಿ ಇದನ್ನು ‘ಮನಿ ಹೈಸ್ಟ್’ನ ಪ್ರೀಕ್ವೆಲ್ ಎನ್ನಬಹುದು.
ಇದನ್ನೂ ಓದಿ:‘ಮನಿ ಹೈಸ್ಟ್’ ಸೀರಿಸ್ ಆಧರಿಸಿ ಸಿದ್ಧಗೊಂಡಿತಾ ‘ಜವಾನ್’? ಹೊರಬಿತ್ತು ಅಸಲಿ ವಿಚಾರ
‘ಮನಿ ಹೈಸ್ಟ್’ ಅಭಿಮಾನಿಗಳಿಗೆ ಸಣ್ಣ ನಿರಾಸೆಯೂ ಈ ವೆಬ್ ಸರಣಿಯಲ್ಲಿದೆ. ‘ಮನಿ ಹೈಸ್ಟ್’ನ ಹಲವು ಮುಖ್ಯ ಪಾತ್ರಗಳು ಈ ವೆಬ್ ಸರಣಿಯಲ್ಲಿಲ್ಲ. ಇದೀಗ ಬಿಡುಗಡೆ ಆಗಿರುವ ಟ್ರೈಲರ್ನಲ್ಲಿರುವಂತೆ ‘ಮನಿ ಹೈಸ್ಟ್’ನ ಅತ್ಯಂತ ಪ್ರಧಾನ ಪಾತ್ರವಾದ ಪ್ರೊಫೆಸರ್ ಇಲ್ಲಿಲ್ಲ. ಟೋಕಿಯೋ ಇಲ್ಲ. ‘ಮನಿ ಹೈಸ್ಟ್’ ಕಳ್ಳರ ಗುಂಪಿನ ಯಾವೊಬ್ಬ ಸದಸ್ಯರೂ ಇಲ್ಲ ಬರ್ಲಿನ್ ಒಬ್ಬನ ಹೊರತಾಗಿ. ಆದರೆ ‘ಮನಿ ಹೈಸ್ಟ್’ನಲ್ಲಿ ಕಳ್ಳರ ಗುಂಪನ್ನು ಹಿಡಿಯಲು ಬರುವ ಖಡಕ್ ಪೊಲೀಸ್ ಅಧಿಕಾರಿಗಳಾದ ರಕೆಲ್ ಮರಿಯೋ ಹಾಗೂ ಅಲಿಸಾ ಸಿಯೆರಾ ಇಬ್ಬರೂ ಸಹ ಇಲ್ಲಿದ್ದಾರೆ. ಇಬ್ಬರೂ ಜಂಟಿಯಾಗಿ ‘ಬರ್ಲಿನ್’ ಅನ್ನು ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ.
ಈಗ ಬಿಡುಗಡೆ ಆಗಿರುವ ಟ್ರೈಲರ್ನ ಪ್ರಕಾರ, ‘ಮನಿ ಹೈಸ್ಟ್’ ನಲ್ಲಿ ತೋರಿಸಲಾಗಿರುವ ಕತೆ ಪ್ರಾರಂಭವಾಗುವುದಕ್ಕೂ ಮುಂಚೆ ನಡೆದ ರಾಬರಿಯ ಕತೆಯನ್ನು ‘ಬರ್ಲಿನ್’ನಲ್ಲಿ ತೋರಿಸಲಾಗಿದೆ. ಹಾಗಾಗಿಯೇ ಈ ವೆಬ್ ಸರಣಿಯಲ್ಲಿ ಪ್ರೊಫೆಸರ್ ಮತ್ತು ‘ಮನಿ ಹೈಸ್ಟ್’ನ ಇತರೆ ಪಾತ್ರಗಳು ಇಲ್ಲ. ‘ಮನಿ ಹೈಸ್ಟ್’ ವೆಬ್ ಸರಣಿಯನ್ನು ಸೃಷ್ಟಿಸಿದ್ದ ಅಲೆಕ್ಸ್ ಪೀನಾ, ‘ಬರ್ಲಿನ್’ ವೆಬ್ ಸರಣಿಯನ್ನು ನಿರ್ಮಾಣ ಮಾಡಿದ್ದಾರೆ. ಪೆಡ್ರೊ ಅಲೋನ್ಸೋ ಬರ್ಲಿನ್ ಪಾತ್ರದಲ್ಲಿ ನಟಿಸಿದ್ದಾರೆ. ವೆಬ್ ಸರಣಿಯು ಡಿಸೆಂಬರ್ 29ಕ್ಕೆ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ