ಈ ವಾರ ಒಟಿಟಿಗೆ ಬರುತ್ತಿವೆ ಹಲವು ಉತ್ತಮ ಸಿನಿಮಾಗಳು

|

Updated on: May 16, 2024 | 12:48 PM

ಲೋಕಸಭೆ ಚುನಾವಣೆ, ಐಪಿಎಲ್ ಕಾರಣದಿಂದ ಹೊಸ ಸಿನಿಮಾಗಳು ಚಿತ್ರಮಂದಿರಗಳಿಗೆ ಬರುತ್ತಿಲ್ಲ. ಆದರೆ ಈ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುತ್ತಿರುವ ಒಟಿಟಿಗಳು ಕೆಲವು ಒಳ್ಳೆಯ ಸಿನಿಮಾಗಳನ್ನು ಒಟಿಟಿಗೆ ತರುತ್ತಿವೆ.

ಈ ವಾರ ಒಟಿಟಿಗೆ ಬರುತ್ತಿವೆ ಹಲವು ಉತ್ತಮ ಸಿನಿಮಾಗಳು
Follow us on

ಲೋಕಸಭೆ ಚುನಾವಣೆ (Loksabha Election), ಐಪಿಎಲ್ (IPL) ಕಾರಣಗಳಿಂದಾಗಿ ಚಿತ್ರಮಂದಿರಗಳು ಸಿನಿಮಾಗಳಿಲ್ಲದೆ ಬಣಗುಟ್ಟುತ್ತಿವೆ. ಇನ್ನೂ 20 ದಿನಗಳ ಕಾಲ ಒಳ್ಳೆಯ ಸಿನಿಮಾಗಳು ಚಿತ್ರಮಂದಿರಗಳಿಗೆ ಬರುವುದು ಅನುಮಾನ. ಕೆಲವೆಡೆಗಳಲ್ಲಿ ಒಳ್ಳೆಯ ಹೊಸ ಸಿನಿಮಾಗಳು ಇಲ್ಲದ ಕಾರಣ ಹಳೆಯ ಸಿನಿಮಾಗಳನ್ನೇ ಮರು ಬಿಡುಗಡೆ ಮಾಡುತ್ತಿವೆ. ಇನ್ನು ಕೆಲವೆಡೆ ಹೊಸ ಸಿನಿಮಾಗಳು ಇಲ್ಲದ ಕಾರಣದಿಂದಾಗಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ತಾತ್ಕಾಲಿಕವಾಗಿ ಬಂದ್ ಸಹ ಮಾಡಲಾಗುತ್ತಿದೆ. ಆದರೆ ಈ ಸಮಯದ ಸದುಪಯೋಗ ಪಡಿಸಿಕೊಳ್ಳುತ್ತಿರುವ ಒಟಿಟಿಗಳು ಒಂದರ ಹಿಂದೊಂದರಂತೆ ಒಳ್ಳೆಯ ಸಿನಿಮಾಗಳನ್ನು ಬಿಡುಗಡೆ ಮಾಡುತ್ತಿವೆ. ಈ ವಾರವೂ ಸಹ ಕೆಲವು ಒಳ್ಳೆಯ ಸಿನಿಮಾಗಳು ಒಟಿಟಿಗೆ ಬರುತ್ತಿವೆ.

ಬಿಡುಗಡೆ ಆದಾಗ ಸಿನಿಮಾ ಪ್ರೇಮಿಗಳ, ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದ್ದ ಕನ್ನಡದ ಹೊಸ ಪ್ರಯತ್ನ ‘ಬ್ಲಿಂಕ್’ ಸಿನಿಮಾ ಇದೀಗ ಒಟಿಟಿಗೆ ಬರುತ್ತಿದೆ. ಅಮೆಜಾನ್ ಪ್ರೈಂನಲ್ಲಿ ಈಗಾಗಲೇ ಕೆಲವು ದೇಶಗಳಲ್ಲಿ ‘ಬ್ಲಿಂಕ್’ ಸಿನಿಮಾ ಬಿಡುಗಡೆ ಆಗಿದೆ. ಅಲ್ಲಿ ಕೆಲವು ಡಾಲರ್​ ಹಣ ತೆತ್ತು ಸಿನಿಮಾ ನೋಡಬೇಕಾಗಿದೆ. ಆದರೆ ಭಾರತದಲ್ಲಿ ಉಚಿತವಾಗಿ ಲಭ್ಯವಿದೆ. ಒಟಿಟಿಯನ್ನು ಸಿನಿಮಾ ನೋಡಿದ ಕೆಲವರು ಯಾಕಾದರೂ ಚಿತ್ರಮಂದಿರದಲ್ಲಿ ಮಿಸ್ ಮಾಡಿಕೊಂಡೆನೋ ಎನ್ನುತ್ತಿದ್ದಾರೆ. ‘ಬ್ಲಿಂಕ್’ ಸಿನಿಮಾನಲ್ಲಿ ದೀಕ್ಷಿತ್ ಶೆಟ್ಟಿ, ಚೈತ್ರಾ ಆಚಾರ್ ಇನ್ನೂ ಕೆಲವರು ನಟಿಸಿದ್ದಾರೆ.

ಭಾರತೀಯ ಸಿನಿಮಾ ಇತಿಹಾಸದ ಪ್ರಮುಖ ಸಿನಿಮಾ ‘ಬಾಹುಬಲಿ’ಯ ಪ್ರೀಕ್ವೆಲ್ ‘ಬಾಹುಬಲಿ: ಕ್ರೌನ್ ಆಫ್ ಬ್ಲಡ್’ ಅನಿಮೇಟೆಡ್ ವೆಬ್ ಸರಣಿ ಇದೇ ವಾರ ಬಿಡುಗಡೆ ಆಗುತ್ತಿದೆ. ಮೇ 17ರಿಂದ ಡಿಸ್ನಿ ಪ್ಲಸ್ ಹಾಟ್​ಸ್ಟಾರ್​ನಲ್ಲಿ ‘ಬಾಹುಬಲಿ: ಕ್ರೌನ್ ಆಫ್ ಬ್ಲಡ್’ ಬಿಡುಗಡೆ ಆಗಲಿದೆ. ಎಸ್​ಎಸ್ ರಾಜಮೌಳಿ ಈ ವೆಬ್ ಸರಣಿ ಬಗ್ಗೆ ಪ್ರಚಾರ ಮಾಡಿದ್ದಾರೆ. ಕತೆಯ ಮೇಲುಸ್ತುವಾರಿಯೂ ಅವರದ್ದೇ.

ಇದನ್ನೂ ಓದಿ:ಯಾವಾಗ ಒಟಿಟಿಗೆ ಬರಲಿದೆ ಪೃಥ್ವಿರಾಜ್ ನಟನೆಯ ‘ಆಡು ಜೀವಿತಂ’ ಸಿನಿಮಾ? ಇಲ್ಲಿದೆ ಬ್ಯಾಡ್ ನ್ಯೂಸ್

‘ದಿ ಕೇರಳ ಸ್ಟೋರಿ’ ಮಾಡಿದ್ದ ತಂಡವೇ ನಿರ್ಮಿಸಿ, ನಿರ್ದೇಶನ ಮಾಡಿದ್ದ ‘ಬಸ್ತಾರ್: ನಕ್ಸಲ್ ಸ್ಟೋರಿ’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಹೆಚ್ಚು ಸಮಯವೇ ಆಗಿದೆ. ಚಿತ್ರಮಂದಿರಗಳಲ್ಲಿ ಈ ಸಿನಿಮಾ ಒಳ್ಳೆಯ ಪ್ರದರ್ಶನ ಕಾಣಲಿಲ್ಲ. ಇದೀಗ ಈ ಸಿನಿಮಾ ಒಟಿಟಿಗೆ ಬರಲಿದೆ. ಜೀ5ನಲ್ಲಿ ‘ಬಸ್ತಾರ್; ನಕ್ಸಲ್ ಸ್ಟೋರಿ’ ಮೇ 17ಕ್ಕೆ ತೆರೆಗೆ ಬರಲಿದೆ. ‘ದಿ ಕೇರಳ ಸ್ಟೋರಿ’ ಸಿನಿಮಾನಲ್ಲಿ ನಟಿಸಿದ್ದ ಅದಾ ಶರ್ಮಾ, ‘ಬಸ್ತರ್’ನಲ್ಲಿಯೂ ನಟಿಸಿದ್ದಾರೆ. ಈ ಸಿನಿಮಾ ಬಿಡುಗಡೆ ಆದಾಗ ಕೇಂದ್ರ ಸರ್ಕಾರದ ಪರವಾಗಿ ನಿರ್ಮಿಸಲಾಗಿರುವ ಸಿನಿಮಾ ಎಂಬ ಟೀಕೆಗಳು ಕೇಳಿ ಬಂದಿದ್ದವು.

ವಿಕ್ಕಿ ಕೌಶಲ್ ಹಾಗೂ ಸಾರಾ ಅಲಿ ಖಾನ್ ನಟಿಸಿರುವ ರೊಮ್ಯಾಂಟಿಕ್ ಕಾಮಿಡಿ ಹಿಂದಿ ಸಿನಿಮಾ ‘ಝರ ಹಟ್ಕೆ, ಝರ ಬಚ್ಕೆ’ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಾಣಲಿಲ್ಲ. ಇದೀಗ ಈ ಸಿನಿಮಾ ಒಟಿಟಿಗೆ ಕಾಲಿಟ್ಟಿದೆ. ಮೇ 17ಕ್ಕೆ ಈ ಸಿನಿಮಾ ಜಿಯೋ ಸಿನಿಮಾಸ್​ನಲ್ಲಿ ಪ್ರಸಾರವಾಗಲಿದೆ. ಈ ಸಿನಿಮಾಗಳ ಹೊರತಾಗಿ ಇಂಗ್ಲೀಷ್​ನ ‘ಗಾಡ್ಜಿಲ್ಲ vs ಕಾಂಗ್’, 99, ಪವರ್ ಸಿನಿಮಾಗಳು ಬಿಡುಗಡೆ ಆಗಲಿವೆ. ತೆಲುಗಿನ ‘ಜೋರೋಡು’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳು ಇದೇ ವಾರ ಒಟಿಟಿಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:48 pm, Thu, 16 May 24