ಮಣಿರತ್ನಂ (Manirathnam) ನಿರ್ದೇಶನದ ಭಾರಿ ಬಜೆಟ್, ಬಹುತಾರಾಗಣದ ಸಿನಿಮಾ ಪೊನ್ನಿಯಿನ್ ಸೆಲ್ವನ್ 2 (Ponniyin Selvan 2) ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮೊತ್ತ ಕಲೆಕ್ಷನ್ ಮಾಡಿತ್ತು. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಬಿಡುಗಡೆ ಆಗಿದ್ದ ಪೊನ್ನಿಯಿನ್ ಸೆಲ್ವನ್ 1 ರ ಮುಂದಿನ ಭಾಗ ಇದಾಗಿದ್ದು, ವಿಕ್ರಂ, ಐಶ್ವರ್ಯಾ ರೈ ಸೇರಿದಂತೆ ಇನ್ನೂ ಹಲವು ಸ್ಟಾರ್ ನಟರು ನಟಿಸಿರುವ ಈ ಸಿನಿಮಾಕ್ಕೆ ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ಭರಪೂರ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಈ ಸಿನಿಮಾ ಒಟಿಟಿಗೆ ಬರುತ್ತಿದೆ.
ಪೊನ್ನಿಯಿನ್ ಸೆಲ್ವನ್ 2 ಸಿನಿಮಾ ಏಪ್ರಿಲ್ 28 ರಂದು ಪಂಚ ಭಾಷೆಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಬಿಡುಗಡೆ ಆಗಿ 25 ದಿನಗಳಷ್ಟೆ ಆಗಿದ್ದು, ಇದಾಗಲೇ ಸಿನಿಮಾವು ಒಟಿಟಿಗೆ ಬರುವ ದಿನಾಂಕ ಪ್ರಕಟಿಸಲಾಗಿದೆ. ಅಸಲಿಗೆ ಚೆನ್ನೈ ಹಾಗೂ ಇನ್ನೂ ಕೆಲವು ಕಡೆಗಳಲ್ಲಿ ಪೊನ್ನಿಯಿನ್ ಸೆಲ್ವನ್ 2 ಸಿನಿಮಾದ ಒಂದೆರಡು ಶೋಗಳು ಪ್ರದರ್ಶಿತವಾಗುತ್ತಿವೆ. ಆದರೆ ಚಿತ್ರತಂಡವು ಸಿನಿಮಾವನ್ನು ಆದಷ್ಟು ಬೇಗನೆ ಒಟಿಟಿಗೆ ತರಲು ಯೋಜಿಸಿದೆ ಅಂತೆಯೇ ಬಿಡುಗಡೆ ದಿನಾಂಕ ಘೋಷಿಸಿದೆ.
ಪೊನ್ನಿಯಿನ್ ಸೆಲ್ವನ್ 2 ಸಿನಿಮಾವು ಜೂನ್ 2 ರಂದು ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಈಗಾಗಲೇ ಪೊನ್ನಿಯಿನ್ ಸೆಲ್ವನ್ ಮೊದಲ ಭಾಗವನ್ನು ಹೊಂದಿರುವ ಅಮೆಜಾನ್ ಪ್ರೈಂನಲ್ಲಿಯೇ ಪೊನ್ನಿಯಿನ್ ಸೆಲ್ವನ್ 2 ಸಿನಿಮಾ ಸಹ ಬಿಡುಗಡೆ ಆಗಲಿದೆ. ಪೊನ್ನಿಯಿನ್ ಸೆಲ್ವನ್ 1 ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆದಾಗ ಅಮೆಜಾನ್ ಸಬ್ಕ್ರಿಪ್ಷನ್ ಉಳ್ಳವರು ಸಹ ಅದನ್ನು ಹಣಕೊಟ್ಟು ವೀಕ್ಷಿಸಬೇಕಿತ್ತು. ಒಂದು ವಾರದ ಬಳಿಕ ಸಬ್ಸ್ಕ್ರಿಪ್ಷನ್ ಒಂದು ಉಚಿತವಾಗಿ ವೀಕ್ಷಿಸುವಂತಾಯಿತು. ಇದೀಗ ಪೊನ್ನಿಯಿನ್ ಸೆಲ್ವನ್ 2 ಸಿನಿಮಾಕ್ಕೂ ಇದೇ ಮಾದರಿ ಬಳಸುವ ಸಾಧ್ಯತೆ ಇದೆ. ಪೊನ್ನಿಯಿನ್ ಮೊದಲ ಭಾಗಕ್ಕಿಂತಲೂ ಪೊನ್ನಿಯಿನ್ ಸೆಲ್ವನ್ 2 ಹೆಚ್ಚು ಹಿಟ್ ಆದ ಕಾರಣ ಒಟಿಟಿಯಲ್ಲಿ ರೆಂಟಲ್ ಮೊತ್ತವನ್ನೂ ಹೆಚ್ಚಿಗೆ ಇಡುವ ಸಂಭವವೂ ಇದೆ. ಆದರೆ ಕೆಲವು ದಿನಗಳ ಬಳಿಕ ಉಚಿತವಾಗಿ ವೀಕ್ಷಿಸಬಹುದಾಗಿದೆ.
ವಿಕ್ರಂ, ಐಶ್ವರ್ಯಾ ರೈ, ತ್ರಿಷಾ, ಕಾರ್ತಿ, ಜಯಂ ರವಿ, ಶೋಭಿತಾ ದುಲಿಪಾಲ, ಐಶ್ವರ್ಯಾ ಲಕ್ಷ್ಮಿ ಸೇರಿದಂತೆ ಇನ್ನೂ ಹಲವು ಸ್ಟಾರ್ ನಟ-ನಟಿಯರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ತಮಿಳು ಸಾಹಿತ್ಯದ ಮೇರು ಕೃತಿ ಎಂದು ಕರೆಯಲಾಗುವ ಪೊನ್ನಿಯಿನ್ ಸೆಲ್ವನ್ ಕಾದಂಬರಿಯನ್ನೇ ಮಣಿರತ್ನಂ ಎರಡು ಭಾಗಗಳ ಸಿನಿಮಾವನ್ನಾಗಿ ಮಾಡಿದ್ದಾರೆ. ಕತೆಯನ್ನು ಅಲ್ಲಲ್ಲಿ ಬದಲಾವಣೆ ಮಾಡಿಕೊಂಡಿರುವುದರ ಬಗ್ಗೆ ಕೆಲವು ಟೀಕೆಗಳು ಸಹ ಮಣಿರತ್ನಂ ವಿರುದ್ಧ ವ್ಯಕ್ತವಾಗಿದ್ದವು. ಏನೇ ಆಗಲಿ ಜನರು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಪೊನ್ನಿಯಿನ್ ಸೆಲ್ವನ್ 2 ಸಿನಿಮಾ 25 ದಿನಗಳಲ್ಲಿ 350 ಕೋಟಿಗೂ ಹೆಚ್ಚು ಹಣವನ್ನು ಬಾಕ್ಸ್ ಆಫೀಸ್ನಲ್ಲಿ ಕಲೆಕ್ಷನ್ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ