ಒಂದು ದಿನಕ್ಕೆ ಪ್ರಿಯಾಮಣಿ ಪಡೆಯುವ ಸಂಬಳ ಎಷ್ಟು? ‘ದಿ ಫ್ಯಾಮಿಲಿ ಮ್ಯಾನ್’ ನಟಿಯ ಸಂಭಾವನೆ ಏರಿಕೆ
Priyamani Remuneration: ಪ್ರಿಯಾಮಣಿ ಓರ್ವ ಪ್ರತಿಭಾವಂತ ನಟಿ. ಯಾವುದೇ ಪಾತ್ರ ಕೊಟ್ಟರೂ ಅವರು ನ್ಯಾಯ ಸಲ್ಲಿಸುತ್ತಾರೆ. ಆ ಕಾರಣಕ್ಕಾಗಿ ಅವರ ಕಾಲ್ಶೀಟ್ ಪಡೆಯಲು ನಿರ್ಮಾಪಕರು ಮುಗಿ ಬೀಳುತ್ತಾರೆ.
ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾಮಣಿ (Priyamani) ಅವರು ಒಳ್ಳೊಳ್ಳೆಯ ಪ್ರಾಜೆಕ್ಟ್ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಈ ಪ್ರತಿಭಾವಂತ ನಟಿಗೆ ಬಹುಭಾಷೆಯಲ್ಲಿ ಬೇಡಿಕೆ ಇದೆ. ಅನೇಕ ಸಿನಿಮಾ ಹಾಗೂ ವೆಬ್ ಸಿರೀಸ್ಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸರಣಿಯಿಂದ ಪ್ರಿಯಾಮಣಿ ಅವರಿಗೆ ಸಿಕ್ಕ ಯಶಸ್ಸು ದೊಡ್ಡದು. ಅದರ ಎರಡನೇ ಸೀಸನ್ನಲ್ಲೂ ಅವರ ಪಾತ್ರಕ್ಕೆ ಹೆಚ್ಚು ಮಹತ್ವ ಸಿಕ್ಕಿತ್ತು. ಇತ್ತೀಚೆಗೆ ಅವರು ನಟಿಸಿದ ‘ಭಾಮಾ ಕಲಾಪಂ’ (Bhama Kalapam) ಸಿನಿಮಾ ಕೂಡ ಸೂಪರ್ ಹಿಟ್ ಆಗಿದೆ. ಇದರ ಪರಿಣಾಮವಾಗಿ ಪ್ರಿಯಾಮಣಿ ಅವರ ಡಿಮ್ಯಾಂಡ್ ಹೆಚ್ಚಿದೆ. ಅದಕ್ಕೆ ಅನುಗುಣವಾಗಿ ಅವರು ಸಂಭಾವನೆ ಕೂಡ ಹೆಚ್ಚಿಸಿಕೊಂಡಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಒಂದು ದಿನಕ್ಕೆ ಪ್ರಿಯಾಮಣಿ ಪಡೆಯುವ ಸಂಬಳ (Priyamani Salary) ಡಬಲ್ ಆಗಿದೆ ಎನ್ನಲಾಗಿದೆ. ಮದುವೆ ಆದ ಬಳಿಕವೂ ಅನೇಕ ನಟಿಯರು ವೃತ್ತಿಜೀವನವನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಸಾಗುತ್ತಿದ್ದಾರೆ. ಅಂಥವರಲ್ಲಿ ನಟಿ ಪ್ರಿಯಾಮಣಿ ಕೂಡ ಪ್ರಮುಖರಾಗಿದ್ದಾರೆ.
ಕೆಲವು ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಪ್ರಿಯಾಮಣಿ ಅವರು ಈ ಮೊದಲು ದಿನವೊಂದಕ್ಕೆ ಒಂದೂವರೆ ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಆದರೆ ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸಿರೀಸ್ ಮತ್ತು ‘ಭಾಮಾ ಕಲಾಪಂ’ ಸಿನಿಮಾ ಹಿಟ್ ಆದ ನಂತರ ಅವರು ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಈಗ ಅವರು ಒಂದು ದಿನಕ್ಕೆ ಬರೋಬ್ಬರಿ 3ರಿಂದ 4 ಲಕ್ಷ ರೂಪಾಯಿ ಪಡೆಯುತ್ತಾರೆ ಎನ್ನಲಾಗಿದೆ. ಅಂದರೆ ಅವರ ಸಂಬಳ ಡಬಲ್ಗಿಂತಲೂ ಹೆಚ್ಚಾಗಿದೆ.
ಪ್ರಿಯಾಮಣಿ ಓರ್ವ ಪ್ರತಿಭಾವಂತ ನಟಿ. ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸಿರೀಸ್ನಲ್ಲಿ ಅವರು ನಿಭಾಯಿಸಿದ ಸುಚಿ ಎಂಬ ಪಾತ್ರ ಜನಮನ ಗೆಲ್ಲುವಲ್ಲಿ ಯಶಸ್ವಿ ಆಯಿತು. ಯಾವುದೇ ಪಾತ್ರ ಕೊಟ್ಟರೂ ಅವರು ನ್ಯಾಯ ಸಲ್ಲಿಸುತ್ತಾರೆ. ಆ ಕಾರಣಕ್ಕಾಗಿ ಅವರ ಕಾಲ್ಶೀಟ್ ಪಡೆಯಲು ನಿರ್ಮಾಪಕರು ಮುಗಿ ಬೀಳುತ್ತಾರೆ. ಸಿನಿಮಾ, ವೆಬ್ ಸಿರೀಸ್ಗಳ ಆಯ್ಕೆಯಲ್ಲಿ ಪ್ರಿಯಾಮಣಿ ತುಂಬ ಕಾಳಜಿ ವಹಿಸುತ್ತಿದ್ದಾರೆ. ಸದ್ಯ ಅವರ ಕೈಯಲ್ಲಿ ಅನೇಕ ಪ್ರಾಜೆಕ್ಟ್ಗಳಿವೆ. ಅಜಯ್ ದೇವಗನ್ ನಟನೆಯ ‘ಮೈದಾನ್’, ರಾಣಾ ದಗ್ಗುಬಾಟಿ ಅಭಿನಯದ ‘ವಿರಾಟ ಪರ್ವಂ’ ಚಿತ್ರದಲ್ಲಿ ಅವರು ನಟಿಸಿದ್ದಾರೆ. ಆ ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ಶಾರುಖ್ ಖಾನ್ ಹಾಗೂ ಅಟ್ಲಿ ಕುಮಾರ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾದಲ್ಲೂ ಪ್ರಿಯಾಮಣಿ ಬಣ್ಣ ಹಚ್ಚುತ್ತಿದ್ದಾರೆ ಎನ್ನಲಾಗಿದೆ.
ಹಿಂದಿ, ತೆಲುಗು, ತಮಿಳು ಚಿತ್ರರಂಗದಲ್ಲಿ ಅನೇಕ ನಟಿಯರು ಮದುವೆ ಆದ ಬಳಿಕವೂ ನಟನೆಯಲ್ಲಿ ಸಕ್ರಿಯರಾಗಿದ್ದಾರೆ. ಕರೀನಾ ಕಪೂರ್ ಖಾನ್, ಸಮಂತಾ ಮುಂತಾದವರು ಈ ವಿಚಾರದಲ್ಲಿ ಮಾದರಿ ಆಗಿದ್ದಾರೆ. ಈ ನಟಿಯರು ಕೂಡ ಸಂಭಾವನೆ ಹೆಚ್ಚಿಸಿಕೊಳ್ಳುತ್ತ ಮುಂದೆ ಸಾಗುತ್ತಿದ್ದಾರೆ. ಅಂಥವರ ಸಾಧನೆ ಬಗ್ಗೆ ಪ್ರಿಯಾಮಣಿ ಇತ್ತೀಚೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:
‘ನೀವು ಈಗಲೂ ಸೂಪರ್ ಹಾಟ್’; ಪ್ರಿಯಾಮಣಿ ಬಗ್ಗೆ ಅಲ್ಲು ಅರ್ಜುನ್ ಮೆಚ್ಚುಗೆಯ ಮಾತು
ವಿಚ್ಛೇದನ ವದಂತಿ ಹಬ್ಬಿಸಿದವರಿಗೆ ಸೈಲೆಂಟ್ ಆಗಿ ಉತ್ತರಿಸಿದ ಪ್ರಿಯಾಮಣಿ