ನರೇಶ್-ಪವಿತ್ರಾ ‘ಮತ್ತೆ ಮದುವೆ’ಗೆ ಮೂರನೇ ಪತ್ನಿ ರಮ್ಯಾ ರಘುಪತಿ ಅಡ್ಡಗಾಲು
Naresh-Pavitra: ನರೇಶ್ ಹಾಗೂ ಪವಿತ್ರಾ ಲೋಕೇಶ್ ನಟನೆಯ ಮತ್ತೆ ಮದುವೆ ಸಿನಿಮಾದ ವಿರುದ್ಧ ನರೇಶ್ರ ಮೂರನೇ ಪತ್ನಿ ರಮ್ಯಾ ರಘುಪತಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ನರೇಶ್ (Naresh) ಹಾಗೂ ಪವಿತ್ರಾ ಲೋಕೇಶ್ರ (Pavitra Lokesh) ಸಂಬಂಧದ ಬಗ್ಗೆ ಕಳೆದ ವರ್ಷ ಜೋರು ಸದ್ದು-ಸುದ್ದಿಯಾಗಿತ್ತು. ನರೇಶ್ ಹಾಗೂ ಪವಿತ್ರಾರದ್ದು ಕಾನೂನು ಬಾಹಿರ, ಅನೈತಿಕ ಸಂಬಂಧವೆಂದು ನರೇಶ್ರ ಮೂರನೇ ಪತ್ನಿ ರಮ್ಯಾ ರಘುಪತಿ ಮಾಧ್ಯಮಗಳ ಮುಂದೆ ಆರೋಪ ಮಾಡಿದ್ದರು. ಬಳಿಕ ನರೇಶ್ ಸಹ ಮಾಧ್ಯಮಗಳ ಮುಂದೆ ಬಂದು ರಮ್ಯಾರ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದರು. ನರೇಶ್ ಹಾಗೂ ಪವಿತ್ರಾ ತಂಗಿದ್ದ ಹೋಟೆಲ್ಗೆ ಹೋಗಿ ರಮ್ಯಾ ರಘುಪತಿ (Ramya Raghupati) ಗಲಾಟೆ ಮಾಡಿದ್ದರು ಸಹ.
ಆದರೆ ಇತ್ತೀಚೆಗೆ ನರೇಶ್ ಹಾಗೂ ಪವಿತ್ರಾ ಬಹುತೇಕ ತಮ್ಮದೇ ಕತೆ ಆಧರಿಸಿದ ಮಳ್ಳಿ ಪೆಳ್ಳಿ (ಕನ್ನಡದಲ್ಲಿ ಮತ್ತೆ ಮದುವೆ) ಹೆಸರಿನ ಸಿನಿಮಾ ಮಾಡಿದ್ದು, ಸಿನಿಮಾವನ್ನು ನರೇಶ್ ಅವರೇ ನಿರ್ಮಾಣ ಮಾಡಿದ್ದಾರೆ. ಆ ಸಿನಿಮಾ ಇತ್ತೀಚೆಗಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸಾಧಾರಣ ಯಶಸ್ಸು ಕಂಡಿದೆ. ಇದೀಗ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿರುವ ಬೆನ್ನಲ್ಲೆ ನರೇಶ್ರ ಮೂರನೇ ಪತ್ನಿ ರಮ್ಯಾ ರಘುಪತಿ ನೋಟೀಸ್ ಒಂದನ್ನು ಕಳುಹಿಸಿದ್ದಾರೆ.
ನರೇಶ್ ಹಾಗೂ ಪವಿತ್ರಾರ ಮತ್ತೆ ಮದುವೆ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಇಂದಿನಿಂದ (ಜೂನ್ 23) ಸ್ಟ್ರೀಂ ಆಗಲಿದೆ. ಆದರೆ ಸಿನಿಮಾ ವಿರುದ್ಧ ರಮ್ಯಾ ರಘುಪತಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಮಳ್ಳಿ ಪೆಳ್ಳಿ ಸಿನಿಮಾದ ಒಟಿಟಿ ಸ್ಟ್ರೀಮಿಂಗ್ ಅನ್ನು ತಡೆಹಿಡಿಯಬೇಕು ಎಂದು ಮನವಿ ಮಾಡಿದ್ದಾರೆ. ಮಳ್ಳಿ ಪೆಳ್ಳಿ ಸಿನಿಮಾದಲ್ಲಿ ನರೇಶ್ ಹಾಗೂ ಪವಿತ್ರಾ ತಮ್ಮ ವ್ಯಕ್ತಿತ್ವವನ್ನು ಕೆಟ್ಟದಾಗಿ ಬಿಂಬಿಸಿದ್ದಾರೆ ಎಂದಿರುವ ರಮ್ಯಾ, ಸಿನಿಮಾದ ಸ್ಟ್ರೀಮಿಂಗ್ ಅನ್ನು ತಡೆ ಹಿಡಿಯಬೇಕು ಎಂದು ಮನವಿ ಮಾಡಿದ್ದಾರೆ. ಆದರೆ ನ್ಯಾಯಾಲಯವು ಅರ್ಜಿಯ ವಿಚಾರಣೆ ಆರಂಭಿಸಿಲ್ಲ.
ಮಳ್ಳಿ ಪೆಳ್ಳಿ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವ ಸಮಯದಲ್ಲಿಯೂ ರಮ್ಯಾ ರಘುಪತಿ ಕುಕ್ಕಟಪಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಸಿನಿಮಾ ಬಿಡುಗಡೆ ಆಗದಂತೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದ್ದರು. ಆದರೆ ನ್ಯಾಯಾಲಯವು ತಡೆಯಾಜ್ಞೆ ನೀಡಲು ನಿರಾಕರಿಸಿತು ಹಾಗಾಗಿ ಸಿನಿಮಾ ಮೇ 26 ರಂದು ತೆಲುಗಿನಲ್ಲಿ ಅದಾದ ಎರಡು ವಾರದ ಬಳಿಕ ಕನ್ನಡದಲ್ಲಿ ಬಿಡುಗಡೆ ಆಗಿ ಸಾಧಾರಣ ಯಶಸ್ಸನ್ನು ಕಂಡಿತು.
ಈ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ನರೇಶ್ ಹಾಗೂ ಪವಿತ್ರಾ ನಾವು ನಮ್ಮ ಅಥವಾ ಇನ್ಯಾರದೇ ಜೀವನ ಆಧರಿಸಿ ಸಿನಿಮಾ ಮಾಡಿಲ್ಲ ಆದರೆ ವಯಸ್ಸಾದವರು ಮತ್ತೆ ಮದುವೆ ಆಗುವ ಬಗ್ಗೆ ಸಿನಿಮಾ ಮಾಡಿದ್ದೇವೆ ಎಂದಿದ್ದರು. ಆದರೆ ಸಿನಿಮಾದಲ್ಲಿ ಬಹುತೇಕ ನರೇಶ್ ಹಾಗೂ ಪವಿತ್ರಾರ ಪ್ರೇಮಕತೆಯೇ ಇತ್ತು. ಅದರಲ್ಲಿಯೂ ನರೇಶ್ರ ಮೂರನೇ ಪತ್ನಿ ರಮ್ಯಾರನ್ನು ಬಹಳ ಕೆಟ್ಟ ಮಹಿಳೆಯಾಗಿ ಸಿನಿಮಾದಲ್ಲಿ ತೋರಿಸಲಾಗಿತ್ತು. ಇದು ಸಹಜವಾಗಿಯೇ ರಮ್ಯಾರನ್ನು ಕೆರಳಿಸಿದೆ. ತೆಲುಗಿನ ಜನಪ್ರಿಯ ನಟ, ನಿರ್ಮಾಪಕ ನರೇಶ್ಗೆ ಮೂರು ಮಂದಿ ಪತ್ನಿಯರು. ಅವರ ಮೂರನೇ ಪತ್ನಿ ರಮ್ಯಾ ರಘುಪತಿ, ಅವರೊಟ್ಟಿಗೆ ಇನ್ನೂ ವಿಚ್ಛೇದನವನ್ನು ನರೇಶ್ ಪಡೆದುಕೊಂಡಿಲ್ಲ. ಅವರ ಪ್ರಕರಣ ಕೌಟುಂಬಿಕ ನ್ಯಾಯಾಲಯದಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ