Neena Gupta: ‘ಲೈಂಗಿಕ ಕ್ರಿಯೆ ಮತ್ತು ಮುಟ್ಟಿನ ಬಗ್ಗೆ ನನ್ನ ತಾಯಿ ನನಗೆ ಏನೂ ಹೇಳಿರಲಿಲ್ಲ‘: ನಟಿ ನೀನಾ ಗುಪ್ತಾ
Lust Stories 2: ‘ನಾನು ಕಾಲೇಜಿಗೆ ಹೋಗುವಾಗ ತಾಯಿ ಬಹಳ ಕಟ್ಟುನಿಟ್ಟಾಗಿ ನಮ್ಮನ್ನು ಬೆಳೆಸಿದ್ದರು. ಆ ಕಾಲದಲ್ಲಿ ಮದುವೆ ಆಗುವುದಕ್ಕೂ ಕೆಲವೇ ದಿನಗಳ ಮುಂಚೆ ಮಾತ್ರ ಹುಡುಗಿಗೆ ಸ್ವಲ್ಪ ಮಾಹಿತಿ ನೀಡುತ್ತಿದ್ದರು’ ಎಂದಿದ್ದಾರೆ ನೀನಾ ಗುಪ್ತಾ
ಬಾಲಿವುಡ್ ನಟಿ ನೀನಾ ಗುಪ್ತಾ (Neena Gupta) ಅವರು ಇತ್ತೀಚಿನ ವರ್ಷಗಳಲ್ಲಿ ಡಿಫರೆಂಟ್ ಆದ ಪಾತ್ರಗಳನ್ನು ಮಾಡುತ್ತಿದ್ದಾರೆ. ‘ಬದಾಯಿ ಹೋ’ ಸಿನಿಮಾದಲ್ಲಿ ಅವರ ನಟನೆ ಗಮನ ಸೆಳೆದಿತ್ತು. ಮಕ್ಕಳು ಮದುವೆ ವಯಸ್ಸಿಗೆ ಬಂದಾಗ ತಾಯಿ ಪ್ರೆಗ್ನೆಂಟ್ ಆದರೆ ಪರಿಸ್ಥಿತಿ ಹೇಗಿರುತ್ತದೆ ಎಂಬ ಕಾನ್ಸೆಪ್ಟ್ನಲ್ಲಿ ಆ ಸಿನಿಮಾ ಮೂಡಿಬಂದಿತ್ತು. ಈಗ ‘ಲಸ್ಟ್ ಸ್ಟೋರೀಸ್ 2’ (Lust Stories 2) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ನೀನಾ ಗುಪ್ತಾ ಅವರು ಲೈಂಗಿಕ ಕ್ರಿಯೆ ಬಗ್ಗೆ ಮುಕ್ತವಾಗಿ ಮಾತನಾಡುವ ಅಜ್ಜಿಯ ಪಾತ್ರ ಮಾಡಿದ್ದಾರೆ. ಜುಲೈ 29ರಂದು ನೆಟ್ಫ್ಲಿಕ್ಸ್ (Netflix) ಮೂಲಕ ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಪ್ರಯುಕ್ತ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ನೀನಾ ಗುಪ್ತಾ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ಲೈಂಗಿಕ ಕ್ರಿಯೆ ಮತ್ತು ಋತುಮತಿ ಆಗುವುದರ ಬಗ್ಗೆ ನಮ್ಮ ತಾಯಿ ನಮ್ಮ ಜೊತೆ ಏನನ್ನೂ ಮಾತನಾಡಿರಲಿಲ್ಲ’ ಎಂದು ನೀನಾ ಗುಪ್ತಾ ತಿಳಿಸಿದ್ದಾರೆ.
‘ಲೈಂಗಿಕ ಕ್ರಿಯೆ ಬಗ್ಗೆ ನಮಗೆ ಏನೂ ತಿಳಿದಿರಲಿಲ್ಲ. ನನ್ನ ತಾಯಿ ನನಗೆ ಸೆ*ಕ್ಸ್ ಮತ್ತು ಮುಟ್ಟಿನ ಬಗ್ಗೆ ಏನನ್ನೂ ಹೇಳಿರಲಿಲ್ಲ. ನಾನು ಕಾಲೇಜಿಗೆ ಹೋಗುವಾಗ ತಾಯಿ ಬಹಳ ಕಟ್ಟುನಿಟ್ಟಾಗಿ ನಮ್ಮನ್ನು ಬೆಳೆಸಿದ್ದರು. ಹೆಣ್ಣು ಮಕ್ಕಳ ಜೊತೆಗೂ ನಾವು ಸಿನಿಮಾಗೆ ಹೋಗುವಂತೆ ಇರಲಿಲ್ಲ. ಆ ಕಾಲದಲ್ಲಿ ಮದುವೆ ಆಗುವುದಕ್ಕೂ ಸ್ವಲ್ಪ ಮುಂಚೆ ಮಾತ್ರ ಹುಡುಗಿಗೆ ಕೊಂಚ ಮಾಹಿತಿ ನೀಡುತ್ತಿದ್ದರು. ಮೊದಲ ರಾತ್ರಿಯಲ್ಲಿ ಏನು ಆಗುತ್ತದೆ ಎಂಬುದನ್ನು ತಿಳಿಸುತ್ತಿದ್ದರು. ಯಾಕೆಂದರೆ ಆಕೆ ಹೆದರಬಾರದು ಮತ್ತು ಹುಡುಗ ಓಡಿ ಹೋಗಬಾರದು ಅಂತ. ಮಕ್ಕಳನ್ನು ಹೆರುವುದು ಮತ್ತು ಗಂಡ ಬಯಸಿದಾಗ ಸೆ*ಕ್ಸ್ನಲ್ಲಿ ಭಾಗಿ ಆಗುವುದಷ್ಟೇ ಮಹಿಳೆಯರ ಕೆಲಸ ಎಂದು ಹೇಳಲಾಗುತ್ತಿತ್ತು’ ಎಂದಿದ್ದಾರೆ ನೀನಾ ಗುಪ್ತಾ.
ಇದನ್ನೂ ಓದಿ: Lust Stories 2: ವೈರಲ್ ಆಯ್ತು ‘ಲಸ್ಟ್ ಸ್ಟೋರೀಸ್ 2’ ಟ್ರೇಲರ್; ಇದರಲ್ಲಿದೆ ಲೈಂಗಿಕತೆ ಬಗೆಗಿನ ಬಣ್ಣದ ಕಥೆಗಳು
‘ಲಸ್ಟ್ ಸ್ಟೋರೀಸ್’ ಸಿನಿಮಾ 2018ರಲ್ಲಿ ಬಿಡುಗಡೆಯಾಗಿ ಚರ್ಚೆ ಹುಟ್ಟುಹಾಕಿತ್ತು. ಬಹಳ ಬೋಲ್ಡ್ ಆದ ಕಥೆಯನ್ನು ಅದರಲ್ಲಿ ಹೇಳಲಾಗಿತ್ತು. ನಾಲ್ಕು ಡಿಫರೆಂಟ್ ಕಥೆಗಳನ್ನು ಆ ಸಿನಿಮಾ ಒಳಗೊಂಡಿತ್ತು. ಈಗ ‘ಲಸ್ಟ್ ಸ್ಟೋರಿಸ್ 2’ ಸಿನಿಮಾ ಒಟಿಟಿ ಮೂಲಕ ರಿಲೀಸ್ಗೆ ಸಜ್ಜಾಗಿದೆ. ಟಾಲಿವುಡ್ ನಟಿ ತಮನ್ನಾ ಭಾಟಿಯಾ, ಬಾಲಿವುಡ್ ನಟ ವಿಜಯ್ ವರ್ಮಾ, ಹಿರಿಯ ನಟಿ ಕಾಜೋಲ್, ನೀನಾ ಗುಪ್ತಾ, ‘ಸೀತಾ ರಾಮಂ’ ಖ್ಯಾತಿಯ ಮೃಣಾಲ್ ಠಾಕೂರ್, ಅನುಭವಿ ಕಲಾವಿದರಾದ ಕುಮುದ್ ಮಿಶ್ರಾ, ಅಂಗದ್ ಬೇಡಿ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ‘ಲಸ್ಟ್ ಸ್ಟೋರಿಸ್’ ಸಿನಿಮಾದ ತರಹ ‘ಲಸ್ಟ್ ಸ್ಟೋರಿಸ್ 2’ ಸಿನಿಮಾದಲ್ಲಿಯೂ 4 ಕಥೆಗಳು ಇವೆ. ಈ ಕಥೆಗಳಿಗೆ ಖ್ಯಾತ ನಿರ್ದೇಶಕರಾದ ಆರ್. ಬಾಲ್ಕಿ, ಅಮಿತ್ ರವಿಂದರ್ನಾಥ್ ಶರ್ಮಾ, ಕೊಂಕಣ ಸೇನ್ ಶರ್ಮಾ ಹಾಗೂ ಸುಜಯ್ ಘೋಷ್ ಆ್ಯಕ್ಷನ್-ಕಟ್ ಹೇಳಿದ್ದಾರೆ.
ಇದನ್ನೂ ಓದಿ: ತಮನ್ನಾ-ವಿಜಯ್ ವರ್ಮಾ ಸಂಬಂಧದ ಬಗ್ಗೆ ಅಶ್ಲೀಲ ಕಮೆಂಟ್; ವಿಮರ್ಶಕನ ವಿರುದ್ಧ ಬೀಳುತ್ತಾ ಕೇಸ್?
ಇತ್ತೀಚೆಗಷ್ಟೇ ‘ಲಸ್ಟ್ ಸ್ಟೋರೀಸ್ 2’ ಸಿನಿಮಾದ ಟ್ರೇಲರ್ ಬಿಡುಗಡೆ ಆಯಿತು. ಅದರಲ್ಲಿ ನೀನಾ ಗುಪ್ತಾ ಅವರು ಸೆ*ಕ್ಸ್ ಬಗ್ಗೆ ಮುಕ್ತವಾಗಿ ಡೈಲಾಗ್ ಹೇಳಿದ್ದು ಹೈಲೈಟ್ ಆಗಿದೆ. ಈ ಚಿತ್ರಕ್ಕೆ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.