ಮತ್ತೆ ಬರುತ್ತಿದ್ದಾನೆ ರಾಣಾ ನಾಯ್ಡು, ಹಿಂದಿಯಲ್ಲಿ ಕಮಾಲ್ ಮಾಡಲಿದೆ ತೆಲುಗು ಜೋಡಿ
Rana Naidu: 2023 ರಲ್ಲಿ ಬಿಡುಗಡೆ ಆಗಿದ್ದ ರಾಣಾ ದಗ್ಗುಬಾಟಿ, ವೆಂಕಟೇಶ್ ಒಟ್ಟಿಗೆ ನಟಿಸಿದ್ದ ‘ರಾಣಾ ನಾಯ್ಡು’ ವೆಬ್ ಸರಣಿ ದೊಡ್ಡ ಹಿಟ್ ಆಗಿತ್ತು. ಇದೀಗ ‘ರಾಣಾ ನಾಯ್ಡು’ ಸೀಸನ್ 2 ಘೋಷಣೆ ಮಾಡಲಾಗಿದೆ. ಈ ವೆಬ್ ಸರಣಿಯಲ್ಲಿ ಅರ್ಜುನ್ ರಾಮ್ಪಾಲ್ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ. ಶೀಘ್ರವೇ ವೆಬ್ ಸರಣಿ ಬಿಡುಗಡೆ ಆಗಲಿದೆ.

ರಾಣಾ ನಾಯ್ಡು (Rana Naidu), ನೆಟ್ಫ್ಲಿಕ್ಸ್ನಲ್ಲಿ (Netflix) ಪ್ರಸಾರವಾಗಿದ್ದ ವೆಬ್ ಸರಣಿ ತನ್ನ ಭಿನ್ನತೆ, ಹಸಿ-ಬಿಸಿ ದೃಶ್ಯಗಳಿಂದ ಸಖತ್ ಜನಪ್ರಿಯತೆ ಗಳಿಸಿತ್ತು. ಬಾಲಿವುಡ್ನ ಕರಾಳ ಮುಖಗಳ ಪರಿಚಯ ಮಾಡಿಸಿದ್ದ ಈ ಶೋನಲ್ಲಿ. ತೆಲುಗಿನ ಇಬ್ಬರು ಸ್ಟಾರ್ ನಟರು ನಟಿಸಿದ್ದರು. ಬಲ್ಲಾಳದೇವ ಖ್ಯಾತಿಯ ರಾಣಾ ದಗ್ಗುಬಾಟಿ ಮತ್ತು ತೆಲುಗಿನ ಸ್ಟಾರ್ ನಟ ವೆಂಕಟೇಶ್. ಪರಸ್ಪರ ವಿರೋಧಿಗಳಾದ ಅಪ್ಪ-ಮಗನ ಪಾತ್ರದಲ್ಲಿ ಈ ಇಬ್ಬರೂ ಸಹ ನಟಿಸಿದ್ದರು. ಶೋ ಭಾರಿ ಯಶಸ್ಸು ಗಳಿಸಿತ್ತು.
ಇದೀಗ ‘ರಾಣಾ ನಾಯ್ಡು’ ಎರಡನೇ ಸೀಸನ್ ಬರಲಿದೆ. ಎರಡನೇ ಸೀಸನ್ ಅನ್ನು ನೆಟ್ಫ್ಲಿಕ್ಸ್ ಈಗಾಗಲೇ ಘೋಷಿಸಿದೆ. ಮೊದಲ ಸೀಸನ್ನಲ್ಲಿ ನಟಿಸಿದ್ದ ಕೆಲ ಮುಖ್ಯ ಪಾತ್ರಗಳು ಎರಡನೇ ಸೀಸನ್ನಲ್ಲಿಯೂ ನಟಿಸಲಿದ್ದಾರೆ. ಜೊತೆಗೆ ಎರಡನೇ ಸೀಸನ್ಗೆ ಅರ್ಜುನ್ ರಾಮ್ಪಾಲ್ ವಿಲನ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾದ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದ್ದು, ವೆಬ್ ಸರಣಿ ಜೂನ್ 13 ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಲಿದೆ.
ಸೀಸನ್ 1 ಬಿಡುಗಡೆ ಆದಾಗ ಹಿಟ್ ಆಗಿತ್ತಾದರೂ ವೆಬ್ ಸರಣಿಯಲ್ಲಿನ ಲೈಂಗಿಕ ದೃಶ್ಯಗಳು, ಅಶ್ಲೀಲ ಭಾಷೆ ಬಳಕೆ ಬಗ್ಗೆ ತೀವ್ರ ಆಕ್ರೋಶವೂ ವ್ಯಕ್ತವಾಗಿತ್ತು. ಫ್ಯಾಮಿಲಿ ಹೀರೋ ಆಗಿರುವ ವೆಂಕಟೇಶ್ ಅವರನ್ನು ಅಂಥಹಾ ಪಾತ್ರದಲ್ಲಿ ನೋಡಿ ತೆಲುಗು ಪ್ರೇಕ್ಷಕರು ಅಚ್ಚರಿ ವ್ಯಕ್ತಪಡಿಸಿದ್ದರು. ಟೀಕೆ ಸಹ ಮಾಡಿದ್ದರು. ಆ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿದ್ದ ವೆಂಕಟೇಶ್, ಮುಂದಿನ ಸೀಸನ್ನಲ್ಲಿ ಭಾಷೆಯ ಬಗ್ಗೆ ಹಿಡಿತ ಇರುವಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಈಗ ಎರಡನೇ ಸೀಸನ್ ಘೋಷಣೆ ಆಗಿದ್ದು, ಇದು ಹೇಗಿರಲಿದೆ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ:ಪರಸ್ಪರ ಕಾಲೆಳೆದುಕೊಂಡ ಸಮಂತಾ-ರಾಣಾ, ನಕ್ಕು ಸುಸ್ತಾದ ಸೆಲೆಬ್ರಿಟಿಗಳು
‘ರಾಣಾ ನಾಯ್ಡು’ ವೆಬ್ ಸರಣಿಯ ಮೊದಲ ಸೀಸನ್ನಲ್ಲಿ ರಾಣಾ ದಗ್ಗುಬಾಟಿ, ವೆಂಕಟೇಶ್ ದಗ್ಗುಬಾಟಿ ಜೊತೆಗೆ ಸುರ್ವೀನ್ ಚಾವ್ಲಾ, ಸುಚಿತ್ರಾ ಪಿಲ್ಲೈ, ಹಿರಿಯ ನಟ ಸುಶಾಂತ್ ಸಿಂಗ್, ಡಿನೊ ಮೊರಿಯೊ ಇನ್ನೂ ಕೆಲವರು ನಟಿಸಿದ್ದರು. ಇದೀಗ ಎರಡನೇ ಸೀಸನ್ನಲ್ಲಿ ಅರ್ಜುನ್ ರಾಮ್ಪಾಲ್, ಕೃತಿ ಕರಬಂಧ ಸೇರಿದಂತೆ ಇನ್ನೂ ಕೆಲ ಮುಖ್ಯ ನಟರುಗಳು ಎಂಟ್ರಿ ನೀಡಿದ್ದಾರೆ. ಮೊದಲ ಸರಣಿ ನಿರ್ದೇಶಿಸಿದ್ದ ಕರಣ್ ಅಂಶುಮನ್ ಅವರೇ ಈ ವೆಬ್ ಸರಣಿಯನ್ನೂ ನಿರ್ದೇಶನ ಮಾಡಿದ್ದಾರೆ. ಈ ವೆಬ್ ಸರಣಿ ಇಂಗ್ಲೀಷ್ನ ‘ರೇ ಡೊನೊವನ್’ ಸೀರೀಸ್ ಅನ್ನು ಆಧರಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




