‘ಸು ಫ್ರಮ್ ಸೋ’ ಒಟಿಟಿ ರಿಲೀಸ್: ಸೆಪ್ಟೆಂಬರ್ 9ರಿಂದ ಜಿಯೋ ಹಾಟ್​ಸ್ಟಾರ್ ಮೂಲಕ ಪ್ರಸಾರ

‘ಸು ಫ್ರಮ್ ಸೋ’ ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕದ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ. ‘ಜಿಯೋ ಹಾಟ್​ಸ್ಟಾರ್’ ಒಟಿಟಿಯಲ್ಲಿ ಸೆಪ್ಟೆಂಬರ್ 9ರಿಂದ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ. ಥಿಯೇಟರ್​​​ನಲ್ಲಿ ಗೆದ್ದ ಈ ಸಿನಿಮಾ ಈಗ ಒಟಿಟಿಯಲ್ಲೂ ಭರ್ಜರಿ ಪ್ರತಿಕ್ರಿಯೆ ಪಡೆಯುವ ನಿರೀಕ್ಷೆ ಇದೆ.

‘ಸು ಫ್ರಮ್ ಸೋ’ ಒಟಿಟಿ ರಿಲೀಸ್: ಸೆಪ್ಟೆಂಬರ್ 9ರಿಂದ ಜಿಯೋ ಹಾಟ್​ಸ್ಟಾರ್ ಮೂಲಕ ಪ್ರಸಾರ
Shaneel Gautham

Updated on: Sep 07, 2025 | 11:42 AM

ಚಿತ್ರಮಂದಿರಗಳಲ್ಲಿ ‘ಸು ಫ್ರಮ್ ಸೋ’ (Su From So) ಸಿನಿಮಾ ಅಬ್ಬರಿಸಿದೆ. ಈಗಲೂ ಕೂಡ ಈ ಅನೇಕ ಕಡೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. 44 ದಿನ ಕಳೆದರೂ ಕೂಡ ಹೌಸ್​ಫುಲ್ ಆಗುತ್ತಿದೆ. ಸದ್ಯದಲ್ಲೇ ಈ ಸಿನಿಮಾ 50 ದಿನಗಳನ್ನು ಯಶಸ್ವಿಯಾಗಿ ಪೂರೈಸುತ್ತಿದೆ. ಅಷ್ಟರಲ್ಲಾಗಲೇ ಒಟಿಟಿ ಅಂಗಳಕ್ಕೆ ಕಾಲಿಡುತ್ತಿದೆ. ಹೌದು, ‘ಸು ಫ್ರಮ್ ಸೋ’ ಒಟಿಟಿ ಬಿಡುಗಡೆ (Su From So OTT Release) ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ. ಜೆಪಿ ತುಮಿನಾಡು, ಶನೀಲ್ ಗೌತಮ್, ಸಂಧ್ಯಾ ಅರಕೆರೆ, ರಾಜ್ ಬಿ. ಶೆಟ್ಟಿ ಮುಂತಾದವರು ನಟಿಸಿರುವ ಈ ಸಿನಿಮಾ ಈಗ ಒಟಿಟಿಗೆ ಬರುತ್ತಿದೆ. ‘ಜಿಯೋ ಹಾಟ್​ಸ್ಟಾರ್’ (Jio Hotstar) ಮೂಲಕ ಸೆಪ್ಟೆಂಬರ್ 9ರಿಂದ ಪ್ರಸಾರ ಆರಂಭಿಸಲಿದೆ.

ಜೆ.ಪಿ. ತುಮಿನಾಡು ಅವರು ‘ಸು ಫ್ರಮ್ ಸೋ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಸಿನಿಮಾ. ಚೊಚ್ಚಲ ಪ್ರಯತ್ನದಲ್ಲೇ ಅವರಿಗೆ ದೊಡ್ಡ ಗೆಲುವು ಸಿಕ್ಕಿದೆ. ದೊಡ್ಡ ಪರದೆಯಲ್ಲಿ ನೋಡಿ ಎಂಜಾಯ್ ಮಾಡಿದ ಬಳಿಕ ಪ್ರೇಕ್ಷಕರು ಒಟಿಟಿಯಲ್ಲಿ ಮತ್ತೊಮ್ಮೆ ನೋಡಲು ಕಾದಿದ್ದಾರೆ. ಒಳ್ಳೆಯ ಮೊತ್ತಕ್ಕೆ ಒಟಿಟಿ ಪ್ರಸಾರ ಹಕ್ಕುಗಳು ಸೇಲ್ ಆಗಿವೆ.

‘ಸು ಫ್ರಮ್ ಸೋ’ ಸಿನಿಮಾದ ಒಟಿಟಿ ರಿಲೀಸ್ ಬಗ್ಗೆ ಮೊದಲಿನಿಂದಲೂ ಅಂತೆ-ಕಂತೆಗಳು ಕೇಳಿಬರುತ್ತಿತ್ತು. ಆದರೆ ಅದು ಖಚಿತವಾಗಲಿಲ್ಲ. ಈಗ ‘ಜಿಯೋ ಹಾಟ್​ಸ್ಟಾರ್’ ಮೂಲಕವೇ ಅಧಿಕೃತವಾಗಿ ತಿಳಿಸಲಾಗಿದೆ. ‘ಜಿಯೋ ಹಾಟ್​ಸ್ಟಾರ್’ ಆಪ್​​ನ ಅಪ್​​ಕಮಿಂಗ್ ಸಿನಿಮಾಗಳ ಪಟ್ಟಿಯಲ್ಲಿ ‘ಸು ಫ್ರಮ್ ಸೋ’ ಕೂಡ ಇದೆ. ಸೆಪ್ಟೆಂಬರ್ 9ರಿಂದ ಎಂದು ದಿನಾಂಕವನ್ನು ಕೂಡ ತಿಳಿಸಲಾಗಿದೆ.

ಹಾರರ್ ಕಾಮಿಡಿ ಕಥಾಹಂದರ ‘ಸು ಫ್ರಮ್ ಸೋ’ ಸಿನಿಮಾದಲ್ಲಿದೆ. ಕರಾವಳಿ ಭಾಗದ ಪ್ರತಿಭೆಗಳ ಪ್ರಯತ್ನಕ್ಕೆ ಇಡೀ ರಾಜ್ಯದ ಜನರು ಭೇಷ್ ಎಂದಿದ್ದಾರೆ. ಎಲ್ಲ ಕಡೆಗಳಲ್ಲೂ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ತೆಲುಗು ಮತ್ತು ಮಲಯಾಳಂ ಭಾಷೆಗೂ ಡಬ್ ಆಗಿ ಒಳ್ಳೆಯ ಕಮಾಯಿ ಮಾಡಿದೆ. ವಿಶ್ವಾದ್ಯಂತ ಈ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ 121 ಕೋಟಿ ರೂಪಾಯಿಗೂ ಅಧಿಕ ಆಗಿದೆ.

ಇದನ್ನೂ ಓದಿ: ‘ಸು ಫ್ರಮ್ ಸೋ’ ಭಾನುಗೆ ಸಿಗುತ್ತಿದೆ ಪ್ರೇಕ್ಷಕರಿಂದ ಸಖತ್ ಪ್ರೀತಿ

ಅಂದಾಜು 5.5 ಕೋಟಿ ರೂಪಾಯಿ ಬಜೆಟ್​​ನಲ್ಲಿ ‘ಸು ಫ್ರಮ್ ಸೋ’ ಸಿನಿಮಾ ಸಿದ್ಧವಾಯಿತು. ನಿರೀಕ್ಷೆಗೂ ಮೀರಿ ಕಲೆಕ್ಷನ್ ಮಾಡಿತು. ಒಟಿಟಿಯಲ್ಲಿ ತೆರೆಕಂಡ ಬಳಿಕ ದೇಶಾದ್ಯಂತ ಇರುವ ಪ್ರೇಕ್ಷಕರು ಈ ಸಿನಿಮಾವನ್ನು ನೋಡಿ ಅಭಿಪ್ರಾಯ ತಿಳಿಸಲಿದ್ದಾರೆ. ‘ಸು ಫ್ರಮ್ ಸೋ’ ಸಿನಿಮಾವನ್ನು ಬೇರೆ ಬೇರೆ ಭಾಷೆಗಳಿಗೆ ರಿಮೇಕ್ ಮಾಡುವ ಪ್ರಯತ್ನ ಕೂಡ ಜಾರಿಯಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.