ಕಾಲಿವುಡ್ ನಟ ಸೂರ್ಯ ಅಭಿನಯದ ‘ಜೈ ಭೀಮ್’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದೆ. ಲಾಯರ್ ಪಾತ್ರದಲ್ಲಿ ಸೂರ್ಯ ನಟಿಸಿರುವ ಈ ಚಿತ್ರ ಈಗ ಬಿಡುಗಡೆಗೆ ಸಜ್ಜಾಗಿದೆ. ನ.2ರಂದು ‘ಜೈ ಭೀಮ್’ ರಿಲೀಸ್ ಆಗಲಿದೆ. ಹೆಸರೇ ಹೇಳುವಂತೆ ಶೋಷಿತರಿಗೆ ನ್ಯಾಯ ಒದಗಿಸಿಕೊಡುವಂತಹ ಕಥೆಯುಳ್ಳ ಸಿನಿಮಾ ಇದು. ಸದ್ಯದ ಕೊವಿಡ್ ಪರಿಸ್ಥಿತಿಯಲ್ಲಿ ಚಿತ್ರಮಂದಿರಗಳನ್ನು ಸಂಪೂರ್ಣ ನಂಬಿಕೊಳ್ಳುವಂತಿಲ್ಲ. ಹಾಗಾಗಿ ಓಟಿಟಿ ಮೂಲಕ ಚಿತ್ರವನ್ನು ರಿಲೀಸ್ ಮಾಡಲು ಸೂರ್ಯ ತೀರ್ಮಾನಿಸಿದ್ದಾರೆ. ಅಮೇಜಾನ್ ಪ್ರೈಂ ಮೂಲಕ ‘ಜೈ ಭೀಮ್’ ವೀಕ್ಷಣಗೆ ಲಭ್ಯವಾಗಲಿದೆ.
ಸೂರ್ಯ ಮತ್ತು ಅಮೇಜಾನ್ ಪ್ರೈಂ ವಿಡಿಯೋ ಸಂಸ್ಥೆ ನಡುವೆ ಒಳ್ಳೆಯ ಒಡನಾಟ ಇದೆ. ಕಳೆದ ವರ್ಷ ಸೂರ್ಯ ನಟಿಸಿದ ‘ಸೂರರೈ ಪೋಟ್ರು’ ಚಿತ್ರ ಕೂಡ ಅಮೇಜಾನ್ ಪ್ರೈಂನಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಅವರ ಪತ್ನಿ ಜ್ಯೋತಿಕಾ ಅಭಿನಯಿಸಿದ್ದ ‘ಪೊನ್ಮಗಳ್ ವಂದಾಳ್’ ಸಿನಿಮಾ ಕೂಡ ಅಮೇಜಾನ್ ಪ್ರೈಂ ಮೊರೆ ಹೋಗಿತ್ತು. ಈಗ ಸೂರ್ಯ ಮತ್ತೆ ಓಟಿಟಿ ಪ್ರೇಕ್ಷಕರ ಮೇಲೆ ನಂಬಿಕೆ ಇಟ್ಟಿದ್ದಾರೆ. ನ.2ರಂದು ‘ಜೈ ಭೀಮ್’ ಬಿಡುಗಡೆ ಆಗಲಿದೆ ಎಂಬ ಸುದ್ದಿ ಕೇಳಿ ಅವರ ಅಭಿಮಾನಿಗಳು ಖುಷಿ ಆಗಿದ್ದಾರೆ.
Proud to bring this story of courage and faith in pursuit of Justice!!#JaiBhimOnPrime arrives Nov 2, on @PrimeVideoIN@prakashraaj #Jyotika @tjgnan @RSeanRoldan @srkathiir @KKadhirr_artdir @philoedit @rajisha_vijayan #Manikandan @jose_lijomol@rajsekarpandian @2D_ENTPVTLTD pic.twitter.com/58rQIFP38Y
— Suriya Sivakumar (@Suriya_offl) October 1, 2021
‘ಜೈ ಭೀಮ್’ ಮೂಲ ತಮಿಳಿನ ಸಿನಿಮಾ ಆದರೂ ಸಹ ಕನ್ನಡದಲ್ಲೂ ರಿಲೀಸ್ ಆಗಲಿದೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್ಗಳು ಗಮನ ಸೆಳೆದಿವೆ. ಪೋಸ್ಟರ್ ನೋಡಿದಾಗಲೇ ಕಥೆಯ ಬಗ್ಗೆ ಸುಳಿವು ಸಿಕ್ಕುವಂತಿತ್ತು. ನ್ಯಾಯಾಲಯ ಕಟ್ಟಡ ಮತ್ತು ಅದರ ಮುಂದೆ ಬುಡಕಟ್ಟು ಜನರು ನಿಂತಿರುವುದು ಪೋಸ್ಟರ್ನಲ್ಲಿ ಹೈಲೈಟ್ ಆಗಿತ್ತು. ಅದರಲ್ಲೂ ಜೈ ಭೀಮ್ ಎಂಬ ಶೀರ್ಷಿಕೆ ಗಮನಿಸಿದರೆ, ಈ ಚಿತ್ರದಲ್ಲಿ ದೀನ ದಲಿತರ ಪರವಾಗಿ ಕಥಾನಾಯಕ ಹೋರಾಡುತ್ತಾನೆ ಎಂಬುದು ಖಚಿತವಾಗುವಂತಿತ್ತು. ಚಿತ್ರದ ಕಥೆ ಏನು ಎಂಬ ಬಗ್ಗೆ ಈಗಾಗಲೇ ಕೆಲವು ಮಾಹಿತಿ ಹರಿದಾಡುತ್ತಿವೆ.
ಚಂದ್ರು ಎಂಬ ಹಿರಿಯ ಲಾಯರ್ ಪಾತ್ರದಲ್ಲಿ ಸೂರ್ಯ ಕಾಣಿಸಿಕೊಳ್ಳಲಿದ್ದಾರಂತೆ. ಬುಡಕಟ್ಟು ಮಹಿಳೆಯೊಬ್ಬರಿಗೆ ಚಂದ್ರು ನ್ಯಾಯ ಕೊಡಿಸಿದ ರೋಚಕ ಕಥೆಯನ್ನು ಈ ಸಿನಿಮಾ ವಿವರಿಸಲಿದೆ. ಅದು 1993ರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದೆ ಎಂದು ಹೇಳಲಾಗುತ್ತಿದೆ. ನ.2ರಂದು ಈ ಎಲ್ಲ ಕುತೂಹಲಗಳಿಗೆ ತೆರೆ ಬೀಳಲಿದೆ.
ಇದನ್ನೂ ಓದಿ:
ಓಟಿಟಿಗೆ ಬಂತು ‘ತಲೈವಿ’; ಚಿತ್ರಮಂದಿರದಲ್ಲಿ ಸೋತ ಕಂಗನಾ ಸಿನಿಮಾಗೆ ನೆಟ್ಫ್ಲಿಕ್ಸ್ನಲ್ಲಿ ಸಿಗುತ್ತಾ ಜಯ?
ಸೋತು ಸುಣ್ಣವಾದ ಶಾರುಖ್ಗೆ ಈಗ ಓಟಿಟಿ ಅನಿವಾರ್ಯ; ಸತ್ಯ ಒಪ್ಪಿಕೊಂಡು ವಿಡಿಯೋ ಶೇರ್ ಮಾಡಿದ ನಟ