Kanguva: 80 ಕೋಟಿ ರೂಪಾಯಿಗೆ ಮಾರಾಟ ಆಯ್ತು ‘ಕಂಗುವ’ ಒಟಿಟಿ ಹಕ್ಕು; ಹೇಗಿದೆ ನೋಡಿ ಸೂರ್ಯ ಹವಾ
Amazon Prime Video: ‘ಅಮೇಜಾನ್ ಪ್ರೈಂ ವಿಡಿಯೋ’ ಸಂಸ್ಥೆಯ ತೆಕ್ಕೆಗೆ ‘ಕಂಗುವ’ ಚಿತ್ರದ ಒಟಿಟಿ ಹಕ್ಕಗಳು ಸೇಲ್ ಆಗಿವೆ. ಈ ವ್ಯವಹಾರದಿಂದ ನಿರ್ಮಾಪಕರಿಗೆ ಭರ್ಜರಿ ಲಾಭವಾಗಿದೆ.
ಕಾಲಿವುಡ್ ನಟ ಸೂರ್ಯ (Suriya) ಅವರು ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅವರು ಆಯ್ಕೆ ಮಾಡಿಕೊಳ್ಳುವ ಪ್ರತಿ ಸಿನಿಮಾ ಬಗ್ಗೆಯೂ ಅಭಿಮಾನಿಗಳು ಸಖತ್ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ. ಸೂರ್ಯ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ ‘ಕಂಗುವ’ ಎಂದು ಶೀರ್ಷಿಕೆ ಇಟ್ಟಿರುವ ಸುದ್ದಿ ಇತ್ತೀಚೆಗಷ್ಟೇ ಹೊರಬಿದ್ದಿತ್ತು. ಈಗ ಈ ಚಿತ್ರತಂಡದಿಂದ ಇನ್ನೊಂದು ಅಚ್ಚರಿಯ ಮಾಹಿತಿ ಸಿಕ್ಕಿದೆ. ‘ಕಂಗುವ’ (Kanguva Movie) ಸಿನಿಮಾದ ಒಟಿಟಿ ಹಕ್ಕುಗಳು ಭಾರಿ ಮೊತ್ತಕ್ಕೆ ಮಾರಾಟ ಆಗಿವೆ. ‘ಅಮೇಜಾನ್ ಪ್ರೈಂ ವಿಡಿಯೋ’ (Amazon Prime Video) ಸಂಸ್ಥೆಯು ಬರೋಬ್ಬರಿ 80 ಕೋಟಿ ರೂಪಾಯಿ ನೀಡಿ ಈ ಡೀಲ್ ಮುಗಿಸಿದೆ. ನಿರ್ಮಾಪಕ ಕೆ.ಇ. ಜ್ನಾನವೇಲ್ ರಾಜ ಅವರೇ ಈ ಮಾಹಿತಿ ಖಚಿತಪಡಿಸಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದೆ. ಹಲವು ಕಾರಣಗಳಿಂದಾಗಿ ‘ಕಂಗುವ’ ಸಿನಿಮಾ ಹೈಪ್ ಸೃಷ್ಟಿ ಮಾಡಿದೆ.
ಹೊಸ ಸಿನಿಮಾಗಳನ್ನು ಖರೀದಿಸುವಲ್ಲಿ ಎಲ್ಲ ಒಟಿಟಿ ಸಂಸ್ಥೆಗಳ ನಡುವೆ ಪೈಪೋಟಿ ಇದೆ. ದಕ್ಷಿಣ ಭಾರತದ ಸಿನಿಮಾಗಳನ್ನು ಖರೀದಿಸುವಲ್ಲಿ ‘ಅಮೇಜಾನ್ ಪ್ರೈಂ ವಿಡಿಯೋ’ ಮುಂಚೂಣಿಯಲ್ಲಿದೆ. ಈಗ ಈ ಸಂಸ್ಥೆಯ ತೆಕ್ಕೆಗೆ ‘ಕಂಗುವ’ ಚಿತ್ರದ ಒಟಿಟಿ ಹಕ್ಕಗಳು ಸೇಲ್ ಆಗಿವೆ. ಅಚ್ಚರಿ ಎಂದರೆ, ಇದು ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ವರ್ಷನ್ನ ಡೀಲ್ ಮಾತ್ರ. ಹಿಂದಿ ಮತ್ತು ಇನ್ನುಳಿದ ಭಾಷೆಯ ಪ್ರಸಾರ ಹಕ್ಕುಗಳು ಇನ್ನೂ ಸೇಲ್ ಆಗಿಲ್ಲ.
ಇದನ್ನೂ ಓದಿ: Tu Jhoothi Main Makkaar: ಒಟಿಟಿಯಲ್ಲಿ ಮೇ 3ರಿಂದ ಪ್ರಸಾರ ಆಗಲಿದೆ ‘ತು ಜೂಟಿ ಮೈ ಮಕ್ಕಾರ್’ ಸಿನಿಮಾ; ಇಲ್ಲಿದೆ ವಿವರ
‘ಸ್ಟುಡಿಯೋ ಗ್ರೀನ್’ ಮೂಲಕ ಕೆ.ಇ. ಜ್ನಾನವೇಲ್ ರಾಜ ನಿರ್ಮಿಸುತ್ತಿರುವ ‘ಕಂಗುವ’ ಚಿತ್ರಕ್ಕೆ ಶಿವ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಕೆಲಸಗಳು ಆರಂಭ ಆದಾಗಿನಿಂದ ಅಭಿಮಾನಿಗಳ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಬಹುಕೋಟಿ ವೆಚ್ಚದ ಈ ಚಿತ್ರದಲ್ಲಿ ಸೂರ್ಯ ಅವರಿಗೆ ಜೋಡಿಯಾಗಿ ಬಾಲಿವುಡ್ ನಟಿ ದಿಶಾ ಪಟಾಣಿ ಅಭಿನಯಿಸುತ್ತಿದ್ದಾರೆ. ಯೋಗಿ ಬಾಬು ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಮೋಷನ್ ಪೋಸ್ಟರ್ ಕಂಡು ಫ್ಯಾನ್ಸ್ ಖುಷಿಪಟ್ಟಿದ್ದರು.
ಇದನ್ನೂ ಓದಿ: ರೋಲೆಕ್ಸ್ ಪಾತ್ರ ಇಟ್ಟುಕೊಂಡು ಪ್ರತ್ಯೇಕ ಸಿನಿಮಾ ಮಾಡ್ತಾರಾ ಲೋಕೇಶ್ ಕನಗರಾಜ್?
‘ಕಂಗುವ’ ಚಿತ್ರಕ್ಕೆ ಈಗಾಗಲೇ ಗೋವಾ, ಚೆನ್ನೈ ಮುಂತಾದ ಕಡೆಗಳಲ್ಲಿ ಶೇಕಡ 50ರಷ್ಟು ಚಿತ್ರೀಕರಣ ಮುಗಿದಿದೆ. ಬಾಕಿ ಇರುವ ಚಿತ್ರೀಕರಣ ಕೂಡ ಆದಷ್ಟು ಬೇಗ ಮುಗಿಯಲಿದೆ. ಬರೋಬ್ಬರಿ 10 ಭಾಷೆಗಳಲ್ಲಿ ಏಕಕಾಲಕ್ಕೆ ‘ಕಂಗುವ’ ಸಿನಿಮಾ ಬಿಡುಗಡೆ ಆಗಲಿರುವುದು ವಿಶೇಷ. ಈ ಸಿನಿಮಾದ ತೆರೆಹಿಂದೆ ಘಟಾನುಘಟಿ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ವೆಟ್ರಿ ಪಳನಿಸಾಮಿ ಅವರು ಛಾಯಾಗ್ರಹಣ ಮತ್ತು ದೇವಿ ಶ್ರೀ ಪ್ರಸಾದ್ ಅವರು ಸಂಗೀತ ನಿರ್ದೇಶನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.