Suriya: ನಟ ಸೂರ್ಯ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ; ಕಾರಣವೇನು? ಇಲ್ಲಿದೆ ಮಾಹಿತಿ
Jai Bhim: ನಟ ಸೂರ್ಯ ನಟನೆಯ ‘ಜೈ ಭೀಮ್’ ಚಿತ್ರಕ್ಕೆ ವನ್ನಿಯಾರ್ ಸಮುದಾಯ ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೇ, ನಟ ಸೂರ್ಯ ನಿವಾಸಕ್ಕೆ ಪೊಲೀಸ್ ಭದ್ರತೆ ನೀಡಲಾಗಿದೆ.
ಕಾಲಿವುಡ್ ನಟ ಸೂರ್ಯ (Suriya) ಅಭಿನಯದ ‘ಜೈ ಭೀಮ್’ (Jai Bhim) ಚಿತ್ರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿರುವ ಬೆನ್ನಲ್ಲೇ, ಕೆಲವೊಂದು ಆರೋಪಗಳೂ ಹುಟ್ಟಿಕೊಂಡಿವೆ. ಇತ್ತೀಚೆಗೆ ವನ್ನಿಯಾರ್ (Vanniyar) ಸಮುದಾಯವು ತಮ್ಮ ಭಾವನೆಗೆ ಧಕ್ಕೆಯಾಗಿದೆ ಎಂದು ಚಿತ್ರತಂಡದ ವಿರುದ್ಧ ಆರೋಪಿಸಿ ನೋಟೀಸ್ ಜಾರಿ ಮಾಡಿತ್ತು. ಸದ್ಯ ವನ್ನಿಯಾರ್ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ನಟ ಸೂರ್ಯ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ. ವನ್ನಿಯಾರ್ ಸಂಗವು ನೀಡಿದ್ದ ನೋಟೀಸ್ನಲ್ಲಿ ಸೂರ್ಯ ನಾಯಕನಾಗಿ, ನಿರ್ಮಾಣವನ್ನೂ ಮಾಡಿರುವ ‘ಜೈ ಭೀಮ್’ ವಿರುದ್ಧ ಹಲವು ಆರೋಪಗಳನ್ನು ಮಾಡಲಾಗಿತ್ತು. ಚಿತ್ರದಲ್ಲಿ ಚಿತ್ರಹಿಂಸೆ ನೀಡುವ ಖಳನಾಯಕ ಓರ್ವನನ್ನು ವನ್ನಿಯಾರ್ ಸಮುದಾಯದವನು ಎಂದು ತೋರಿಸಲಾಗಿದೆ. ಅಲ್ಲದೇ ಚಿತ್ರದಲ್ಲಿ ವನ್ನಿಯಾರ್ ಸಮುದಾಯದ ಪೂಜ್ಯ ಚಿಹ್ನೆಗಳನ್ನು ದುರುದ್ದೇಶಪೂರ್ವಕವಾಗಿ ತೋರಿಸಲಾಗಿದೆ ಎಂದು ಆರೋಪಿಸಲಾಗಿತ್ತು.
ನಟ ಸೂರ್ಯ ಈ ಕುರಿತಂತೆ ಮಾತನಾಡುತ್ತಾ, ಯಾರನ್ನೂ ಅವಮಾನಿಸುವ, ನೋಯಿಸುವ ಉದ್ದೇಶ ಚಿತ್ರತಂಡಕ್ಕಿಲ್ಲ ಎಂದು ನುಡಿದಿದ್ದರು. ನವೆಂಬರ್ನಲ್ಲಿ ಬಿಡುಗಡೆಯಾದ ಈ ಚಿತ್ರ ಇರುಲರ್ ಬುಡಕಟ್ಟು ಜನಾಂಗ ಎದುರಿಸುತ್ತಿರುವ ಸಮಸ್ಯೆಗಳನ್ನು ಕಟ್ಟಿಕೊಟ್ಟಿತ್ತು. ನೈಜ ಘಟನೆಗಳನ್ನು ಆಧರಿಸಿದ ಈ ಚಿತ್ರ, ಪೊಲೀಸ್ ದೌರ್ಜನ್ಯ, ಕಸ್ಟಡಿ ಸಾವು ಇವುಗಳ ಕುರಿತಂತೆ ಗಂಭೀರವಾಗಿ ಚರ್ಚಿಸಿತ್ತು.
ಚಿತ್ರಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರೆ, ಹಲವರು ನಟ ಸೂರ್ಯ ಅವರ ಬೆಂಬಲಕ್ಕೆ ನಿಂತಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ‘ಅಸುರನ್’ ಖ್ಯಾತಿಯ ನಿರ್ದೇಶಕ ವೇಟ್ರಿ ಮಾರನ್ ಪ್ರತಿಕ್ರಿಯಿಸಿ, ‘ಬದಲಾವಣೆ ಬಯಸದವರು ಇದಕ್ಕೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಾರೆ’ ಎಂದಿದ್ದರು. ಲೋಕೇಶ್ ಕನಗರಾಜ್ ಕೂಡ ಸೂರ್ಯ ಬೆಂಬಲಕ್ಕೆ ನಿಂತಿದ್ದರು. ಇದರೊಂದಿಗೆ ಚಿತ್ರರಂಗ ಹಾಗೂ ನೆಟ್ಟಿಗರು ಸೂರ್ಯ ಅವರಿಗೆ ಬೆಂಬಲಕ್ಕೆ ನಿಂತು, ‘ಐ ಸ್ಟಾಂಡ್ ವಿತ್ ಸೂರ್ಯ’ ಎಂಬ ಹ್ಯಾಶ್ ಟ್ಯಾಗ್ ಮೂಲಕ ಟ್ವಿಟರ್ನಲ್ಲಿ ಬೆಂಬಲ ಸೂಚಿಸುತ್ತಿದ್ದಾರೆ.
ಇದನ್ನೂ ಓದಿ:
ಸಂಕಷ್ಟದಲ್ಲಿ ‘ಜೈ ಭೀಮ್’ ತಂಡ; ಕ್ಷಮೆ ಕೇಳಿ ಐದು ಕೋಟಿ ನೀಡುವಂತೆ ಸೂರ್ಯಗೆ ಬಂತು ನೋಟಿಸ್
ಬೊಂಬೆ ಹೇಳುತೈತೆ ಹಾಡಿನ ಮುಖಾಂತರ ಪುನೀತ್ಗೆ ನಮನ ಸಲ್ಲಿಸಿದ 50ಕ್ಕೂ ಹೆಚ್ಚು ಪುಟಾಣಿಗಳು; ವಿಡಿಯೋ ನೋಡಿ
Published On - 11:11 am, Wed, 17 November 21