Rajinikanth: ಕೋಟಿ ಕೋಟಿ ಗಳಿಸಿದ ಈ ಚಿತ್ರದ ಸ್ಕ್ರಿಪ್ಟ್ ಕೇಳಿ ಕಣ್ಣೀರು ಹಾಕಿದ್ದ ರಜಿನಿ; ಅಚ್ಚರಿಯ ಮಾಹಿತಿ ಇಲ್ಲಿದೆ
Annatthe: ಸೂಪರ್ಸ್ಟಾರ್ ರಜಿನಿಕಾಂತ್ ಅಣ್ಣಾಥೆ ಚಿತ್ರದ ಸ್ಕ್ರಿಪ್ಟ್ ಕೇಳಿದ ಸಂದರ್ಭ ಹಾಗೂ ನಿರ್ದೇಶಕ ಶಿವ ಅವರೊಂದಿಗಿನ ಮಾತುಕತೆಯನ್ನು ಮೆಲುಕು ಹಾಕಿದ್ದಾರೆ. ಅದರಲ್ಲಿ ಮಾತನಾಡುತ್ತಾ ರಜಿನಿ, ಸ್ಕ್ರಿಪ್ಟ್ ಕೇಳಿ ಕಣ್ಣೀರು ಹಾಕಿದ್ದನ್ನು ಬಹಿರಂಗಪಡಿಸಿದ್ದಾರೆ.
ನಟ ರಜಿನಿಕಾಂತ್ ಅಭಿನಯದ ‘ಅಣ್ಣಾಥೆ’ ಚಿತ್ರ ಸುಮಾರು ₹ 225 ಕೋಟಿಗೂ ಅಧಿಕ ಕಮಾಯಿ ಮಾಡಿದ್ದು, ಬಾಕ್ಸಾಫೀಸ್ನಲ್ಲಿ ದಾಖಲೆ ಬರೆದಿದೆ. 2021ರಲ್ಲಿ ಅತ್ಯಂತ ವೇಗವಾಗಿ ₹ 200 ಕೋಟಿ ಕ್ಲಬ್ ಸೇರಿದ ಚಿತ್ರವಾಗಿ ‘ಅಣ್ಣಾಥೆ’ ಗುರುತಿಸಿಕೊಂಡಿದೆ. ಇದಲ್ಲದೇ ಅತ್ಯಂತ ಹೆಚ್ಚು ₹ 200 ಕೋಟಿ ಕ್ಲಬ್ ಸಿನಿಮಾಗಳನ್ನು ನೀಡಿದ ಖ್ಯಾತಿ ರಜಿನಿ ಪಾಲಾಗಿದೆ. ಆದರೆ ಈ ಚಿತ್ರಕ್ಕೆ ರಜಿನಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದರೂ ಕೂಡ, ವಿಮರ್ಶಕರು ಸಾಧಾರಣ ಪ್ರತಿಕ್ರಿಯೆ ನೀಡಿದ್ದರು. ಇದೀಗ 70 ವರ್ಷ ಪ್ರಾಯದ ಸೂಪರ್ಸ್ಟಾರ್ ರಜಿನಿ, ಚಿತ್ರದ ಹಿಂದಿನ ಅತ್ಯಂತ ಅಚ್ಚರಿಯ ಕಥಾನಕಗಳನ್ನು ಹಂಚಿಕೊಂಡಿದ್ದಾರೆ. ವಾಯ್ಸ್ ನೋಟ್ಗಳ ಮುಖಾಂತರ ಅವರು, ಅಣ್ಣಾಥೆ ಚಿತ್ರದ ಸ್ಕ್ರಿಪ್ಟ್ ಕೇಳಿದ ಸಂದರ್ಭ ಹಾಗೂ ನಿರ್ದೇಶಕ ಶಿವ ಅವರೊಂದಿಗಿನ ಮಾತುಕತೆಯನ್ನು ಮೆಲುಕು ಹಾಕಿದ್ದಾರೆ. ಅದರಲ್ಲಿ ಮಾತನಾಡುತ್ತಾ ರಜಿನಿ, ‘ಅಣ್ಣಾಥೆ ಚಿತ್ರದ ಸ್ಕ್ರಿಪ್ಟ್ ಕೇಳಿ ಕಣ್ಣೀರು ಹಾಕಿದ್ದನ್ನು ಬಹಿರಂಗಪಡಿಸಿದ್ದಾರೆ. ಈ ಕುರಿತ ಅಚ್ಚರಿಯ ಮಾಹಿತಿ ಇಲ್ಲಿದೆ.
ಧ್ವನಿಯ ರೂಪದ ಮಾಧ್ಯಮವಾದ ‘ಹೂಟೆ’ಯಲ್ಲಿ ರಜಿನಿ ತಮ್ಮ ಅನುಭವಗಳನ್ನು ಮೆಲುಕು ಹಾಕಿದ್ದಾರೆ. ಆ ಸಂದರ್ಭದಲ್ಲಿ ‘ಅಣ್ಣಾಥೆ’ ಚಿತ್ರವನ್ನು ಒಪ್ಪಿಕೊಂಡ ಸಂದರ್ಭವನ್ನು ವಿವರಿಸಿದ್ದಾರೆ. ಅಣ್ಣಾಥೆ ಚಿತ್ರವನ್ನು ಶಿವ ನಿರ್ದೇಶಿಸಿದ್ದು, ರಜಿನಿ-ಶಿವ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ಮೊದಲ ಚಿತ್ರವಾಗಿದೆ. ಕೆಲವು ವರ್ಷಗಳ ಹಿಂದೆ ರಜಿನಿಯ ‘ಪೆಟ್ಟಾ’ ಹಾಗೂ ಶಿವ ನಿರ್ದೇಶನದ ಅಜಿತ್ ನಟನೆಯ ‘ವಿಶ್ವಾಸಂ’ ಜೊತೆಜೊತೆಯಾಗಿ ಬಿಡುಗಡೆಯಾಗಿತ್ತು. ವಿಶ್ವಾಸಂ ಬಾಕ್ಸಾಫೀಸ್ನಲ್ಲಿ ಬಹುದೊಡ್ಡ ಹಿಟ್ ಆಗಿತ್ತು. ಆ ಸಂದರ್ಭದಲ್ಲಿ ಚಿತ್ರವನ್ನು ವೀಕ್ಷಿಸಿದ್ದ ರಜಿನಿ ಶಿವ ಅವರ ನಿರ್ದೇಶನದ ಕುರಿತು ಆಸಕ್ತಿ ತಾಳಿದ್ದರು. ನಂತರ ರಜಿನಿ ಹಾಗೂ ಶಿವ ಭೇಟಿಯಾಗಿದ್ದರು.
ರಜಿನಿ ಹಾಗೂ ಶಿವ ಭೇಟಿಯ ಸಂದರ್ಭದಲ್ಲಿ ಅಚ್ಚರಿಯ ಮಾತುಕತೆ ನಡೆದಿತ್ತು. ಶಿವ ರಜಿನಿ ಬಳಿ ಮಾತನಾಡುತ್ತಾ, ‘ನಿಮ್ಮೊಂದಿಗೆ ಹಿಟ್ ಚಿತ್ರ ಮಾಡುವುದು ಸುಲಭ’ ಎಂದಿದ್ದರು. ಆ ಮಾತಿನಿಂದ ತಾನು ಸ್ತಂಭೀಭೂತನಾದೆ ಎಂದು ರಜಿನಿ ಹೇಳಿಕೊಂಡಿದ್ದಾರೆ. ಕಾರಣ, ಇದುವರೆಗೆ ಅಂತಹ ಮಾತನ್ನು ಯಾರೂ ಅವರಿಗೆ ಹೇಳಿರಲಿಲ್ಲವಂತೆ. ಆಗ ರಜಿನಿ ‘‘ನಾನು ಕಥೆಯೇ ಪ್ರಮುಖವಾಗಿರುವ ಚಿತ್ರದಲ್ಲಿ ಕಾಣಿಸಿಕೊಳ್ಳಬೇಕು. ಅದು ಹಳ್ಳಿಯಲ್ಲಿ ನಡೆಯಬೇಕು’’ ಎಂದಿದ್ದರಂತೆ. 15 ದಿನದಲ್ಲಿ ಸ್ಕ್ರಿಪ್ಟ್ ಮಾಡಿಕೊಂಡು ಬನ್ನಿ ಎಂದು ಶಿವ ಬಳಿ ರಜಿನಿ ಹೇಳಿದ್ದರಂತೆ.
ರಜಿನಿ 15 ದಿನದ ಅವಧಿ ನೀಡಿದ್ದರೆ, ಶಿವ ಕೇವಲ 12 ದಿನದಲ್ಲಿ ಸ್ಕ್ರಿಪ್ಟ್ ತಯಾರಿಸಿಕೊಂಡು ಬಂದಿದ್ದರಂತೆ. ಅದನ್ನು ವಿವರಿಸಿದ ರಜಿನಿ, ‘‘ಕೇವಲ 12 ದಿನದಲ್ಲಿ ಸ್ಕ್ರಿಪ್ಟ್ ತಯಾರಿಸಿಕೊಂಡು ಬಂದಿದ್ದರು. ನಂತರ ಅವರು, ನಿಮ್ಮ ಎರಡೂವರೆ ಗಂಟೆ ಸಮಯ ಬೇಕು ಮತ್ತು ಮೂರು ಬಾಟಲ್ ನೀರು ಬೇಕು ಎಂದು ಕೇಳಿದರು. ಅವರು ಕತೆಯನ್ನು ಹೇಳಿ ಮುಗಿಸಿದ ಕೊನೆಯಲ್ಲಿ ನಾನು ಅಳುತ್ತಿದ್ದೆ. ನಂತರ ಅವರನ್ನು ತಬ್ಬಿಕೊಂಡೆ’’ ಎಂದು ರಜಿನಿ ಆ ಭಾವುಕ ಸನ್ನಿವೇಶವನ್ನು ವಿವರಿಸಿದ್ದಾರೆ.
ರಜಿನಿ ಮಾತನಾಡಿರುವ ಆಡಿಯೋ ಇಲ್ಲಿ ಲಭ್ಯವಿದೆ:
அண்ணாத்த பற்றி .. part 1 https://t.co/6aw9DP3YEH
— Rajinikanth (@rajinikanth) November 15, 2021
அண்ணாத்த பற்றி .. part 2 https://t.co/rqLb1eyq3o
— Rajinikanth (@rajinikanth) November 15, 2021
‘ಅಣ್ಣಾಥೆ’ ಚಿತ್ರದಲ್ಲಿ ರಜಿನಿ ಹಳ್ಳಿಯ ಮುಖ್ಯಸ್ಥನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಜಿನಿ ತಂಗಿಯ ಪಾತ್ರದಲ್ಲಿ ಕೀರ್ತಿ ಸುರೇಶ್ ಕಾಣಿಸಿಕೊಂಡಿದ್ದಾರೆ. ಚಿತ್ರ ಮಿಶ್ರ ಪ್ರತಿಕ್ರಿಯೆಯ ನಡುವೆಯೂ ಹಿಟ್ ಆಗಿದ್ದು, ಒಳ್ಳೆಯ ಗಳಿಕೆ ಮಾಡಿದೆ. ಈ ಮೂಲಕ ಶಿವ ಹಾಗೂ ರಜಿನಿಯ ಕಾಂಬಿನೇಷನ್ನ ಮೊದಲ ಪ್ರಯತ್ನಕ್ಕೆ ಯಶಸ್ಸು ದಕ್ಕಿದೆ.
ಇದನ್ನೂ ಓದಿ:
Rajinikanth: ಬಾಕ್ಸಾಫೀಸ್ನಲ್ಲಿ ದಾಖಲೆ ಬರೆದ ಅಣ್ಣಾಥೆ; ರಜಿನಿ ನಟನೆಯ ಚಿತ್ರ ಇದುವರೆಗೆ ಗಳಿಸಿದ್ದೆಷ್ಟು?
ಕಿರುತೆರೆಯಲ್ಲಿ ನಿರೂಪಕನಾಗಿದ್ದ ನಾನಿ ಒಂದೇ ದಶಕದಲ್ಲಿ ಟಾಲಿವುಡ್ ಜನಪ್ರಿಯ ನಟನಾಗಿ ಬೆಳೆದಿದ್ದು ಶ್ಲಾಘನೀಯ
Published On - 8:35 am, Wed, 17 November 21