ಪುನೀತ್ ತೋರಿದ್ದ ಪ್ರೀತಿ-ಕಾಳಜಿ ನೆನೆದು ನುಡಿ ನಮನ ಸಲ್ಲಿಸಿದ ‘ಶಕ್ತಿಧಾಮ’ ಮಕ್ಕಳು
Puneeth Rajkumar: ‘ಪುನೀತ್ ರಾಜ್ಕುಮಾರ್ ಅವರು ನಮಗೆ ತಂದೆ-ಅಣ್ಣನ ಸ್ಥಾನ ನೀಡಿದ್ದರು. ಹೊಸ ಕಟ್ಟಡ ನಿರ್ಮಾಣ ಆಗಿತ್ತು. ಅದರ ಉದ್ಘಾಟನೆಗೆ ಅವರು ಬರಬೇಕಿತ್ತು. ಅಷ್ಟರೊಳಗೆ ಹೀಗಾಗಿದೆ’ ಎಂದಿದ್ದಾರೆ ಶಕ್ತಿಧಾಮದ ಮಕ್ಕಳು.
ಪುನೀತ್ ರಾಜ್ಕುಮಾರ್ (Puneeth Rajkumar) ಅವರಿಗೆ ಚಿತ್ರರಂಗದವರು ‘ಪುನೀತ ನಮನ’ (Puneetha Namana) ಕಾರ್ಯಕ್ರಮದ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಸಿನಿಮಾ ಕ್ಷೇತ್ರ ಮತ್ತು ಸಾಮಾಜಿಕ ಕೆಲಸಗಳಲ್ಲಿ ಪುನೀತ್ ಮಾಡಿದ ಸಾಧನೆಯನ್ನು ಎಲ್ಲರೂ ಕೊಂಡಾಡಿದ್ದಾರೆ. ಅಪ್ಪು ಅವರನ್ನು ನೆನಪಿಸಿಕೊಳ್ಳುವ ಸಲುವಾಗಿ ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದ ಗಣ್ಯರು ಅನೇಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮೈಸೂರಿನ ಶಕ್ತಿಧಾಮದ (Shakti Dhama) ಮಕ್ಕಳು ಕೂಡ ಆಗಮಿಸಿ ಅಪ್ಪುಗೆ ನಮನ ಸಲ್ಲಿಸಿದ್ದರು. ಶಕ್ತಿಧಾಮದ ಮೂಲಕ ಸಾವಿರಾರು ಮಕ್ಕಳಿಗೆ ಆಶ್ರಯ ನೀಡಿದವರು ಪುನೀತ್. ಇಂದು ‘ಪವರ್ ಸ್ಟಾರ್’ ಇಲ್ಲದೇ ಶಕ್ತಿಧಾಮ ಅನಾಥವಾಗಿದೆ. ಅವರನ್ನು ನೆನಪಿಸಿಕೊಂಡು ಶಕ್ತಿಧಾಮದ ಮಕ್ಕಳು ಭಾವುಕರಾಗಿದ್ದಾರೆ. ಟಿವಿ9 ಕನ್ನಡ ಜೊತೆ ಮಾತನಾಡಿರುವ ಅವರೆಲ್ಲರೂ ಪುನೀತ್ಗೆ ನುಡಿ ನಮನ ಸಲ್ಲಿಸಿದ್ದಾರೆ.
‘ಪುನೀತ್ ರಾಜ್ಕುಮಾರ್ ಅವರು ಇಲ್ಲ ಎಂಬುದನ್ನು ನಮಗೆ ನಂಬೋಕೆ ಆಗ್ತಾ ಇಲ್ಲ. ಈಗಲೂ ಅವರು ನಮ್ಮ ಜೊತೆ ಇದ್ದಾರೆ ಅಂತಲೇ ಅನಿಸುತ್ತಿದೆ. ರಾಜ್ಕುಮಾರ್ ರೀತಿಯೇ ಪುನೀತ್ ಅವರ ವ್ಯಕ್ತಿತ್ವ ಇತ್ತು. ಅವರಾಗಲಿ, ಶಿವಣ್ಣ ಅವರಾಗಲಿ ನಮ್ಮನ್ನು ಬೇರೆಯವರ ರೀತಿ ನೋಡಿಲ್ಲ. ಸ್ವಂತ ಮಕ್ಕಳ ರೀತಿಯೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಯಾವುದೋ ರೀತಿಯಲ್ಲಿ ಅವರು ನಮಗೆ ಆಶೀರ್ವಾದ ಮಾಡುತ್ತ ಇರುತ್ತಾರೆ. ಅವರ ನಗುವೇ ಸ್ಫೂರ್ತಿ’ ಎಂದಿದ್ದಾರೆ ಶಕ್ತಿಧಾಮದ ಹೆಣ್ಣು ಮಕ್ಕಳು.
‘ಪುನೀತ್ ಅವರು ನಮಗೆ ತಂದೆ-ಅಣ್ಣನ ಸ್ಥಾನ ನೀಡಿದ್ದರು. ಹೊಸ ಕಟ್ಟಡ ನಿರ್ಮಾಣ ಆಗಿತ್ತು. ಅದರ ಉದ್ಘಾಟನೆಗೆ ಅವರು ಬರಬೇಕಿತ್ತು. ಅಷ್ಟರೊಳಗೆ ಹೀಗಾಗಿದೆ. ಈ ರೀತಿಯ ಒಂದು ಕಾರ್ಯಕ್ರಮದಲ್ಲಿ ನಾವು ಭಾಗವಹಿಸಬೇಕಾಗುತ್ತದೆ ಅಂತ ಊಹಿಸಿರಲಿಲ್ಲ. ಇದು ಅನಿರೀಕ್ಷಿತ. ನಾವು ಕಾಲೇಜಿಗೆ ಹೋಗಿದ್ದಾಗ ಕೂಡಲೇ ಕರೆ ಮಾಡಿ ಕರೆಸಿದರು. ನಂತರವೇ ಗೊತ್ತಾಗಿದ್ದು ನಾವು ಈ ಕಾರ್ಯಕ್ರಮಕ್ಕೆ ಬರುತ್ತೇವೆ ಅಂತ. ಅವರಿಗೆ ನಮನ ಸಲ್ಲಿಸಲು ಇಂಥದ್ದೊಂದು ವೇದಿಕೆ ಸಿಕ್ಕಿದ್ದಕ್ಕೆ ಖುಷಿ ಆಯಿತು’ ಎಂದು ಅವರು ಹೇಳಿದ್ದಾರೆ.
‘ಅವರು ಶಕ್ತಿಧಾಮಕ್ಕೆ ಬಂದಾಗೆಲ್ಲ ನಾವು ಏನೇ ಕೇಳಿದರೂ ಅದನ್ನು ನೆರವೇರಿಸುತ್ತಿದ್ದರು. ಸಿನಿಮಾಗೆ ಕರೆದುಕೊಂಡು ಹೋಗುತ್ತಿದ್ದರು. ಪಾರ್ವತಮ್ಮ ರಾಜ್ಕುಮಾರ್ ಅವರ ಜನ್ಮದಿನದಂದು ನಮಗೆಲ್ಲ ಬಟ್ಟೆ ನೀಡಿದ್ದರು. ಪ್ರತಿ ಬಾರಿ ಬಂದಾಗೆಲ್ಲ ನಮಗೆ ಗಿಫ್ಟ್ ತಂದುಕೊಡುತ್ತಿದ್ದರು’ ಎಂದು ಪುನೀತ್ ಅವರ ಒಳ್ಳೆಯತನವನ್ನು ಶಕ್ತಿಧಾಮದ ಮಕ್ಕಳು ನೆನಪಿಸಿಕೊಂಡಿದ್ದಾರೆ.
ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮುಂತಾದ ರಾಜಕೀಯ ಗಣ್ಯರು ಆಗಮಿಸಿದ್ದರು. ಕನ್ನಡ ಚಿತ್ರರಂಗದ ಬಹುತೇಕ ಎಲ್ಲ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ತಮಿಳು ನಟರಾದ ವಿಶಾಲ್, ಶರತ್ ಕುಮಾರ್ ಮುಂತಾದವರು ಪುನೀತ್ಗೆ ನುಡಿ ನಮನ ಸಲ್ಲಿಸಿದರು.
ಇದನ್ನೂ ಓದಿ:
‘ಶಿವಣ್ಣ ಮತ್ತು ನಾನು ಮುಖ ನೋಡಿಕೊಂಡ್ರೆ ನಾಚಿಕೆ ಆಗತ್ತೆ’: ನೋವಿನಲ್ಲಿ ಕಣ್ಣೀರು ಹಾಕಿದ ರಾಘಣ್ಣ
ಪುನೀತ ನಮನ: ಕಣ್ಣೀರು ತರಿಸಿತು ಸುದೀಪ್ ಧ್ವನಿಯಲ್ಲಿ ಮೂಡಿಬಂದ ಪುನೀತ್ ವಿಡಿಯೋ