ಈ ವಾರ ಒಟಿಟಿಯಲ್ಲಿ ದಕ್ಷಿಣ ಭಾರತದ ಸಿನಿಮಾಗಳದ್ದೇ ಪಾರುಪತ್ಯ, ಯಾವ ಸಿನಿಮಾಗಳಿವೆ?
OTT Release this week: ಈ ವಾರ ಕನ್ನಡದ ಸ್ಟಾರ್ ನಟರ ಸಿನಿಮಾಗಳು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿಲ್ಲ. ಆದರೆ ‘ಹೆಬ್ಬುಲಿ ಕಟ್’ ಸೇರಿದಂತೆ ಇನ್ನೂ ಕೆಲವು ಒಳ್ಳೆಯ ಸಿನಿಮಾಗಳು ಬಿಡುಗಡೆ ಆಗಿವೆ. ಅದರ ಜೊತೆಗೆ ಒಟಿಟಿಯಲ್ಲಿಯೂ ಸಹ ಕೆಲವು ಒಳ್ಳೆಯ ಸಿನಿಮಾಗಳು ಈ ವಾರ ಬಂದಿವೆ. ಈ ವಾರ ದಕ್ಷಿಣ ಭಾರತದ ಸಿನಿಮಾಗಳದ್ದೇ ಪಾರುಪತ್ಯ. ಕನ್ನಡದ ಸಿನಿಮಾಗಳು ಸಹ ಈ ವಾರ ಬಿಡುಗಡೆ ಆಗಿವೆ. ಇಲ್ಲಿವೆ ನೋಡಿ ಸಿನಿಮಾಗಳ ಪಟ್ಟಿ...

Ott Release This Week
- ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಮುಖ್ಯ ಪಾತ್ರದಲ್ಲಿ ನಟಿಸಿರುವ ಆಕ್ಷನ್-ಕಾಮಿಡಿ ಸಿನಿಮಾ ‘ಹೆಡ್ಸ್ ಆಫ್ ದಿ ಸ್ಟೇಟ್’ ಅಮೆಜಾನ್ ಪ್ರೈಂನಲ್ಲಿ ನೇರವಾಗಿ ಬಿಡುಗಡೆ ಆಗಿದೆ. ಸಿನಿಮಾ ನೋಡಿದವರು ಪ್ರಿಯಾಂಕಾರ ಆಕ್ಷನ್ ಅನ್ನು ಸಖತ್ ಆಗಿ ಮೆಚ್ಚಿಕೊಂಡಿದ್ದಾರೆ.
- ಅಭಿಷೇಕ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಖಾಲಿಧರ್ ಲಾಪತಾ’ ಸಿನಿಮಾ ನೇರವಾಗಿ ಒಟಿಟಿಗೆ ಬಿಡುಗಡೆ ಆಗಿದೆ. ಆಸ್ತಿಗಾಗಿ ಹವಣಿಸುತ್ತಿರುವ ಸಂಬಂಧಿಗಳಿಂದ ಪರಾರಿ ಆಗುವ ಹಿರಿಯ ವ್ಯಕ್ತಿಯೊಬ್ಬ ತನಗಿಂತ ವಯಸ್ಸಿನಲ್ಲಿ ಬಹಳ ಸಣ್ಣ ಬಾಲಕನೊಟ್ಟಿಗೆ ಗೆಳೆತನ ಮಾಡುವ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾ ಜೀ5ನಲ್ಲಿ ವೀಕ್ಷಣೆಗೆ ಲಭ್ಯವಿದೆ.
- ಲೂಸ್ ಮಾದ ಯೋಗಿ, ಸೋನು ಗೌಡ ನಟಿಸಿ, ವಿಜಯ ಪ್ರಸಾದ್ ನಿರ್ದೇಶನ ಮಾಡಿರುವ ಹಾಸ್ಯಪ್ರಧಾನ ಸಿನಿಮಾ ‘ಸಿದ್ಲಿಂಗು 2’ ಈ ವಾರ ಪ್ರೈಂ ವಿಡಿಯೋನಲ್ಲಿ ಬಿಡುಗಡೆ ಆಗಿದೆ. ಫೆಬ್ರವರಿಯಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಸಾಧಾರಣ ಪ್ರದರ್ಶನವನ್ನಷ್ಟೆ ಕಂಡಿತ್ತು.
- ಕನ್ನಡತಿ ಪ್ರಿಯಾಮಣಿ, ಸಂಪತ್ ರಾಜ್ ನಟಿಸಿರುವ ತಮಿಳಿನ ಜನಪ್ರಿಯ ವೆಬ್ ಸರಣಿ ‘ದಿ ಗುಡ್ ವೈಫ್’ ಇದೇ ವಾರ ಒಟಿಟಿಗೆ ಬಂದಿದೆ. ತನ್ನ ಕುಟುಂಬ ಕಾನೂನು ಸಿಕ್ಕಿನಲ್ಲಿ ಸಿಲುಕಿಕೊಂಡಿರುವಾಗ ಮನೆಯ ಒಡತಿ ಹೇಗೆ ತನ್ನ ಕಾನೂನು ಜ್ಞಾನದಿಂದ ಕುಟುಂಬವನ್ನು ಕಾಪಾಡಿಕೊಳ್ಳುತ್ತಾಳೆ ಎಂಬ ಕತೆಯನ್ನು ವೆಬ್ ಸರಣಿ ಒಳಗೊಂಡಿದೆ. ಹಾಟ್ಸ್ಟಾರ್ನಲ್ಲಿ ಇದು ವೀಕ್ಷಣೆಗೆ ಲಭ್ಯ ಇದೆ.
- ‘ದಿ ಹಂಟ್: ರಾಜೀವ್ ಗಾಂಧಿ ಅಸಾಸಿನೇಷನ್ ಕೇಸ್’ ವೆಬ್ ಸರಣಿ ಸೋನಿ ಲಿವ್ನಲ್ಲಿ ಈ ವಾರ ಬಿಡುಗಡೆ ಆಗಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಮತ್ತು ಹಂತಕರನ್ನು ಪೊಲೀಸರು ಬೆನ್ನತ್ತಿದ ನಿಜ ಘಟನೆಯನ್ನು ಆಧರಿಸಿ ನಿರ್ಮಿಸಲಾದ ವೆಬ್ ಸರಣೀ ಇದಾಗಿದೆ.
- ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಈ ವಾರ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ. ಚಿತ್ರಮಂದಿರದಲ್ಲಿ ಹೀನಾಯ ಪ್ರದರ್ಶನ ಕಂಡಿದ್ದ ಈ ಸಿನಿಮಾ ಕೇವಲ ನಾಲ್ಕೇ ವಾರದಲ್ಲಿ ಒಟಿಟಿಗೆ ಬಂದಿದೆ. ಸಿನಿಮಾ ಅಷ್ಟೇನೂ ಚೆನ್ನಾಗಿಲ್ಲ ಎಂಬ ಮಾತುಗಳನ್ನೇ ನೆಟ್ಟಿಗರು ವ್ಯಕ್ತಪಡಿಸಿದ್ದಾರೆ.
- ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ನಟಿಸಿರುವ ಹಾಸ್ಯ ಪ್ರಧಾನ ಥ್ರಿಲ್ಲರ್ ಸಿನಿಮಾ ‘ಉಪ್ಪು ಕಪ್ಪು ರಂಬು’ ಹೆಸರಿನ ತೆಲುಗು ಸಿನಿಮಾ ಈ ವಾರ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ. ನಾಯಕನಾಗಿ ನಟ ಸುಹಾಸ್ ನಟಿಸಿದ್ದಾರೆ. ಅಮೆಜಾನ್ ಪ್ರೈಂನಲ್ಲಿ ಈ ಸಿನಿಮಾ ನೇರವಾಗಿ ಬಿಡುಗಡೆ ಆಗಿದೆ.