OTT Release: ಕನ್ನಡ ಸೇರಿ ಈ ವಾರ ಒಟಿಟಿಗೆ ಹಲವು ಸಿನಿಮಾಗಳು
ಪ್ರತಿ ವಾರದಂತೆ ಈ ವಾರವೂ ಕೆಲವು ಸಿನಿಮಾಗಳು ಒಟಿಟಿಗೆ ಬಿಡುಗಡೆ ಆಗಿದ್ದು, ಅವುಗಳಲ್ಲಿ ಪ್ರಮುಖ ಸಿನಿಮಾ ಹಾಗೂ ವೆಬ್ ಸರಣಿಗಳ ಪಟ್ಟಿ ಇಲ್ಲಿದೆ.
ವೀಕೆಂಡ್ (Weekend) ಬಂತೆಂದರೆ ಚಿತ್ರಮಂದಿರಗಳಲ್ಲಿ (Theater) ಹೊಸ ಸಿನಿಮಾಗಳು ಬಿಡುಗಡೆ ಆಗುವಂತೆಯೇ ಒಟಿಟಿಯಲ್ಲಿಯೂ (OTT) ಸಹ ಹೊಸ ಹೊಸ ಸಿನಿಮಾಗಳು ತೆರೆಗೆ ಬರುತ್ತವೆ. ಚಿತ್ರಮಂದಿರಗಳಿಗೆ ಹೋಲಿಸಿದರೆ ಹೆಚ್ಚು ಕಥಾ ವೈವಿದ್ಯತೆಯಿಂದ ಕೂಡಿದ ಸಿನಿಮಾಗಳು ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗುತ್ತವೆ. ಪ್ರತಿ ವಾರದಂತೆ ಈ ವಾರವೂ ಕೆಲವು ಸಿನಿಮಾಗಳು ಒಟಿಟಿಗೆ ಬಿಡುಗಡೆ ಆಗಿದ್ದು, ಅವುಗಳಲ್ಲಿ ಪ್ರಮುಖ ಸಿನಿಮಾಗಳ ಪಟ್ಟಿ ಇಲ್ಲಿದೆ.
ರೇಮೊ ಕನ್ನಡ ಸಿನಿಮಾ
ಪವನ್ ಒಡೆಯರ್ ನಿರ್ದೇಶನದ ಇಶಾನ್ ಹಾಗೂ ಆಶಿಕಾ ರಂಗನಾಥ್ ನಟನೆಯ ‘ರೇಮೊ’ ಸಿನಿಮಾ ಒಟಿಟಿ ಎಂಟ್ರಿ ಕೊಟ್ಟಿದೆ. ನವೆಂಬರ್ 25ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಂಡಿದ್ದ ಈ ಸಿನಿಮಾ ಮಾರ್ಚ್ 10 ರಿಂದ ಜೀ5 ನಲ್ಲಿ ಸ್ಟ್ರೀಂ ಆಗುತ್ತಿದೆ. ಜೀ5 ನಲ್ಲಿ ಈಗಾಗಲೇ ಕೆಲವು ಉತ್ತಮ ಕನ್ನಡ ಸಿನಿಮಾಗಳು ಸ್ಟ್ರೀಂ ಆಗುತ್ತಿದ್ದು ಅವುಗಳ ಸಾಲಿಗೆ ರೆಮೋ ಸೇರುವ ನಿರೀಕ್ಷೆ ಇದೆ.
ರಾಣಾ ನಾಯ್ಡು
ತೆಲುಗಿನ ಇಬ್ಬರು ಸ್ಟಾರ್ ನಟರುಗಳಾದ ರಾಣಾ ದಗ್ಗುಬಾಟಿ ಹಾಗೂ ದಗ್ಗುಬಾಟಿ ವೆಂಕಟೇಶ್ ಒಟ್ಟಿಗೆ ನಟಿಸಿರುವ ಕ್ರೈಂ, ಆಕ್ಷನ್, ಫ್ಯಾಮಿಲಿ ಡ್ರಾಮಾ ಕತೆಯುಳ್ಳ ರಾಣಾ ನಾಯ್ಡು ವೆಬ್ ಸರಣಿ ನೆಟ್ಫ್ಲಿಕ್ಸ್ನಲ್ಲಿ ಮಾರ್ಚ್ 10 ಕ್ಕೆ ಬಿಡುಗಡೆ ಆಗಿದೆ. ನಿಜ ಜೀವನದಲ್ಲಿ ರಾಣಾಗೆ ಚಿಕ್ಕಪ್ಪ ಆಗಿರುವ ವೆಂಕಟೇಶ್ ಈ ಸಿನಿಮಾದಲ್ಲಿ ಅಪ್ಪನ ಪಾತ್ರ ಮಾಡಿದ್ದಾರೆ. ಅಪ್ಪ-ಮಗನ ನಡುವೆ ನಡೆವ ವೈರತ್ವದ ಕತೆಯನ್ನು ರಾಣಾ ನಾಯ್ಡು ಒಳಗೊಂಡಿದೆ. ಸಖತ್ ಅದ್ಧೂರಿಯಾಗಿ ಈ ವೆಬ್ ಸರಣಿಯನ್ನು ನಿರ್ಮಾಣ ಮಾಡಲಾಗಿದೆ.
ರನ್ ಬೇಬಿ ರನ್
ಫೆಬ್ರವರಿ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ತಮಿಳಿನ ಥ್ರಿಲ್ಲರ್ ಕತೆಯುಳ್ಳ ರನ್ ಬೇಬಿ ರನ್ ಇದೀಗ ಒಟಿಟಿಗೆ ಬಂದಿದೆ. ಸಿನಿಮಾ ಬಗ್ಗೆ ಉತ್ತಮ ವಿಮರ್ಶೆಗಳು ವ್ಯಕ್ತವಾಗಿದ್ದರೂ ಸಹ ಸಿನಿಮಾ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರಲಿಲ್ಲ. ಮಾರ್ಚ್ 10 ರಿಂದ ಡಿಸ್ನಿ ಹಾಟ್ಸ್ಟಾರ್ನಲ್ಲಿ ಈ ಸಿನಿಮಾ ಸ್ಟ್ರೀಂ ಆಗುತ್ತಿದೆ. ತಮಿಳು ಸೇರಿದಂತೆ ಇತರೆ ಕೆಲವು ಭಾಷೆಗಳಲ್ಲಿಯೂ ಸಿನಿಮಾವನ್ನು ವೀಕ್ಷಿಸಬಹುದಾಗಿದೆ. ಆರ್ಜೆ ಬಾಲಾಜಿ, ಐಶ್ವರ್ಯಾ ರಾಜೇಶ್ ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಹ್ಯಾಪಿ ಫ್ಯಾಮಿಲಿ: ಕಂಡಿಷನ್ಸ್ ಅಪ್ಲೈ
ಹಿಂದಿಯ ಹಾಸ್ಯಮಯ, ಕೌಟುಂಬಿಕ ಸಿನಿಮಾ ಹ್ಯಾಫಿ ಫ್ಯಾಮಿಲಿ; ಕಂಡಿಷನ್ಸ್ ಅಪ್ಲೈ ಹೆಸರಿನ ವೆಬ್ ಸರಣಿ ಅಮೆಜಾನ್ ಪ್ರೈಂನಲ್ಲಿ ಈ ವಾರ ತೆರೆಗೆ ಬಂದಿದೆ. ವೆಬ್ ಸರಣಿಯಲ್ಲಿ ದೊಡ್ಡ ತಾರಾಗಣವೇ ಇದೆ. ರತ್ನ ಪಾಠಕ್ ಶಾ, ಅತುಲ್ ಕುಲಕರ್ಣಿ, ಆಯೆಷಾ ಝುಲ್ಕಾ, ರಾಜ್ ಬಬ್ಬರ್ ಅವರುಗಳು ನಟಿಸಿದ್ದಾರೆ. ಮೂರು ತಲೆಮಾರಿನ ಒಂದೇ ಕುಟುಂಬದವರು ಒಟ್ಟಿಗೆ ಒಂದೇ ಮನೆಯಲ್ಲಿ ಹೊಂದಿಕೊಂಡು ಬಾಳುವ ಕುರಿತಾದ ಹಾಸ್ಯಮಯ ಕತೆಯನ್ನು ಈ ವೆಬ್ ಸರಣಿ ಒಳಗೊಂಡಿದೆ.