Sonu Nigam: ಖ್ಯಾತ ಗಾಯಕ ಸೋನು ನಿಗಮ್ ಸಾಧನೆಗೆ ಒಲಿಯಿತು ಪದ್ಮಶ್ರೀ ಪ್ರಶಸ್ತಿಯ ಗರಿ
Padma Awards 2022: ಖ್ಯಾತ ಗಾಯಕ ಸೋನು ನಿಗಮ್ಗೆ ಪದ್ಮ ಶ್ರೀ ಪ್ರಶಸ್ತಿ ಲಭಿಸಿದೆ. ಕೇಂದ್ರ ಸರ್ಕಾರ ಇಂದು ಪದ್ಮ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ವಿವಿಧ ಭಾಷೆಗಳಲ್ಲಿ ತಮ್ಮ ಗಾಯನದಿಂದ ಮೋಡಿ ಮಾಡಿದ್ದ ಸೋನು ನಿಗಮ್ (Sonu Nigam) ಪದ್ಮ ಶ್ರೀ (Padma Shri) ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಂದು ಕೇಂದ್ರ ಸರ್ಕಾರವು ಪದ್ಮ ಪ್ರಶಸ್ತಿ 2022ರ (Padma Awards 2022) ಪ್ರಶಸ್ತಿ ಪಟ್ಟಿಯನ್ನು ಘೋಷಣೆ ಮಾಡಿದೆ. ಸೋನು ನಿಗಮ್ ಅವರು ಕನ್ನಡ, ಪಂಜಾಬಿ, ಬಂಗಾಳಿ, ಹಿಂದಿ, ತೆಲುಗು, ಮಲಯಾಳಂ, ಮರಾಠಿ ಮತ್ತು ತಮಿಳು ಭಾಷೆಗಳಲ್ಲಿ ಹಿನ್ನೆಲೆ ಗಾಯಕರಾಗಿದ್ದಾರೆ. ಹಲವಾರು ಆಲ್ಬಮ್ಗಳನ್ನೂ ತೆರೆಗೆ ತಂದಿರುವ ಅವರು ಕೆಲವು ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ. ಗಾಯನದಿಂದಾಗಿಯೇ ಅಪಾರ ಜನಪ್ರಿಯತೆ ಪಡೆದಿರುವ ಸೋನುಗೆ ಅಭಿಮಾನಿಗಳು ಮೆಚ್ಚುಗೆಯಿಂದ ನೀಡಿರುವ ಬಿರುದು ‘ಆಧುನಿಕ ಮೊಹಮ್ಮದ್ ರಫಿ’ ಎಂದು! ಮಾಸ್ಟರ್ ಆಫ್ ಮೆಲೋಡಿ ಎಂದೂ ಜನ ಅವರನ್ನು ಪ್ರೀತಿಯಿಂದ ಗುರುತಿಸುತ್ತಾರೆ. ಇದುವರೆಗೆ ಸುಮಾರು 5,000ಕ್ಕೂ ಅಧಿಕ ಗೀತೆಗೆ ಧ್ವನಿಯಾಗಿರುವ ಅವರ ವಿಶೇಷ ಸಾಧನೆಗೆ ಈಗ ಪದ್ಮ ಶ್ರೀ ಒಲಿದಿದೆ.
ಭಾರತ ಕಂಡ ಅಪ್ರತಿಮ ಕಲಾವಿದೆ ಸಾಹುಕಾರ್ ಜಾನಕಿಯವರಿಗೂ ಪದ್ಮಶ್ರೀ ಪ್ರಶಸ್ತಿ ನೀಡಿ ಸರ್ಕಾರ ಗೌರವಿಸಿದೆ. ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲಿ ಖ್ಯಾತರಾಗಿರುವ ಇವರು, ಸುಮಾರು 200ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳುನಾಡು ಮೂಲದ ಸಾಹುಕಾರ್ ಜಾನಕಿ ಡಾ.ರಾಜ್ಕುಮಾರ್ ಅವರೊಂದಿಗೆ ಹಲವು ಚಿತ್ರಗಳಲ್ಲಿ ಬಣ್ಣಹಚ್ಚಿದ್ದಾರೆ.
ಖ್ಯಾತ ನಟ ವಿಕ್ಷರ್ ಬ್ಯಾನರ್ಜಿಯವರಿಗೆ ಪದ್ಮ ಭೂಷಣ ಲಭಿಸಿದೆ. ನಾಲ್ಕು ದಶಕಕ್ಕೂ ಅಧಿಕ ಕಾಲ ಅವರು ಹಿಂದಿ, ಇಂಗ್ಲೀಷ್ ಹಾಗೂ ಬೆಂಗಾಳಿ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಬರಹಗಾರ, ನಿರ್ದೇಶಕ ಚಂದ್ರಪ್ರಕಾಶ್ ದ್ವಿವೇದಿಯವರಿಗೆ ಪದ್ಮ ಶ್ರೀ ಪ್ರಶಸ್ತಿ ಘೋಷಿಸಲಾಗಿದೆ. ಭಾರತೀಯ ಕಿರುತೆರೆ ಹಾಗೂ ಹಿರಿತೆರೆಗೆ ತಮ್ಮದೇ ಆದ ಕೊಡುಗೆ ನೀಡಿರುವ ಚಂದ್ರಪ್ರಕಾಶ್ ದ್ವಿವೇದಿ, ಸದ್ಯ ಅಕ್ಷಯ್ ಕುಮಾರ್ ಹಾಗೂ ಮಾನುಷಿ ಚಿಲ್ಲರ್ ನಟನೆಯ ‘ಪೃಥ್ವಿರಾಜ್’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ:
Govt announces Padma Awards 2022
CDS Gen Bipin Rawat to get Padma Vibhushan (posthumous), Congress leader Ghulam Nabi Azad to be conferred with Padma Bhushan pic.twitter.com/Qafo6yiDy5
— ANI (@ANI) January 25, 2022
ಪದ್ಮ ಪ್ರಶಸ್ತಿಗಳನ್ನು 1954 ರಲ್ಲಿ ಸ್ಥಾಪಿಸಲಾಗಿದ್ದು, ಶಿಕ್ಷಣ, ಕಲೆ, ಸಾಹಿತ್ಯ, ವಿಜ್ಞಾನ, ನಟನೆ, ಸಮಾಜ ಸೇವೆ ಮತ್ತು ಸಾರ್ವಜನಿಕ ವ್ಯವಹಾರಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತದ ನಾಗರಿಕರ ವಿಶಿಷ್ಟ ಕೊಡುಗೆಗಾಗಿ ಪ್ರಶಸ್ತಿ ನೀಡಲಾಗುತ್ತದೆ. ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ಗಣರಾಜ್ಯೋತ್ಸವದ ಮುನ್ನಾದಿನದಂದು ಘೋಷಿಸಲಾಗುತ್ತದೆ. ಈ ಬಾರಿ 4 ಪದ್ಮವಿಭೂಷಣ, 17 ಪದ್ಮಭೂಷಣ ಮತ್ತು 107 ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. 34 ಮಹಿಳೆಯರು ಮತ್ತು 10 ವಿದೇಶಿಯರು ಪ್ರಶಸ್ತಿಗೆ ಭಾಜನರಾಗಿದ್ದಾರೆ. 13 ಸಾಧಕರಿಗೆ ಮರಣೋತ್ತರ ಪ್ರಶಸ್ತಿ ಲಭಿಸಿದೆ.
ತಮಿಳುನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಸಶಸ್ತ್ರ ಪಡೆಗಳ ಸಿಬ್ಬಂದಿ ಮುಖ್ಯಸ್ಥ (Chief of Defence Staff – CDS) ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರಿಗೆ ಕೇಂದ್ರ ಸರ್ಕಾರವು ಮರಣೋತ್ತರ ಪದ್ಮವಿಭೂಷಣ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರಿಗೆ ಪದ್ಬಭೂಷಣ ಪುರಸ್ಕಾರ ಸಂದಿದೆ. ಕನ್ನಡಕವಿ ಸಿದ್ದಲಿಂಗಯ್ಯ ಅವರಿಗೆ ಪದ್ಮಶ್ರೀ ಪುರಸ್ಕಾರ ಸಂದಿದೆ. ಗೂಗಲ್ ಸಿಇಒ ಸುಂದರ್ ಪಿಚೈ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಳ ಸೇರಿದಂತೆ 128 ಸಾಧಕರಿಗೆ ಪದ್ಮ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ.
ಇದನ್ನೂ ಓದಿ:
Padma Awards ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿ ಘೋಷಣೆ, ಬಿಪಿನ್ ರಾವತ್ಗೆ ಪದ್ಮ ವಿಭೂಷಣ್
Republic Day 2022: 189 ಶೌರ್ಯ ಪ್ರಶಸ್ತಿಗಳು ಸೇರಿದಂತೆ 939 ಪೊಲೀಸ್ ಪದಕ ಘೋಷಿಸಿದ ಗೃಹ ಸಚಿವಾಲಯ
Published On - 8:26 pm, Tue, 25 January 22