Sehar Shinwari: ಮೋದಿ ವಿರುದ್ಧ ದೂರು ನೀಡಲು ಮುಂದಾದ ಪಾಕ್​ ನಟಿ; ಖಡಕ್​ ಪ್ರತಿಕ್ರಿಯೆ ನೀಡಿದ ದೆಹಲಿ ಪೊಲೀಸರು

|

Updated on: May 10, 2023 | 6:47 PM

PM Narendra Modi: ಪಾಕಿಸ್ತಾನದ ಗಲಭೆಗೆ ಮೋದಿ ಕಾರಣ ಎಂದು ನಟಿ ಸೆಹರ್ ಶಿನ್ವಾರಿ ಆರೋಪ ಮಾಡಿದ್ದಾರೆ. ಅವರ ಟ್ವೀಟ್​ಗೆ ದೆಹಲಿ ಪೊಲೀಸರು ಉತ್ತರ ನೀಡಿದ್ದಾರೆ.

Sehar Shinwari: ಮೋದಿ ವಿರುದ್ಧ ದೂರು ನೀಡಲು ಮುಂದಾದ ಪಾಕ್​ ನಟಿ; ಖಡಕ್​ ಪ್ರತಿಕ್ರಿಯೆ ನೀಡಿದ ದೆಹಲಿ ಪೊಲೀಸರು
ಸೆಹರ್ ಶಿನ್ವಾರಿ, ನರೇಂದ್ರ ಮೋದಿ
Follow us on

ಪಾಕಿಸ್ತಾನದಲ್ಲಿ ಸದ್ಯದ ಪರಿಸ್ಥಿತಿ ಉದ್ವಿಗ್ನವಾಗಿದೆ. ಅಲ್ಲಿನ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ (Imran Khan) ಬಂಧನದ ಬಳಿಕ ಹಲವು ಕಡೆಗಳಲ್ಲಿ ಗಲಭೆ ಉಂಟಾಗಿದೆ. ಒಂದು ರೀತಿಯ ನಾಗರಿಕ ಯುದ್ಧದಂತಹ ಪರಿಸ್ಥಿತಿ ಅಲ್ಲಿ ನಿರ್ಮಾಣ ಆಗಿದೆ. ಈ ಪರಿಸ್ಥಿತಿಯಲ್ಲಿ ಪಾಕ್​ ನಟಿ ಸೆಹರ್​ ಶಿನ್ವಾರಿ ಅವರು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಬಗ್ಗೆ ಟ್ವೀಟ್​ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಆಗುತ್ತಿರುವ ಸಮಸ್ಯೆಗೆ ಮೋದಿ ಕಾರಣ ಎಂದು ಸೆಹರ್​ ಶಿನ್ವಾರಿ ಆರೋಪಿಸಿದ್ದಾರೆ. ಅಲ್ಲದೇ, ಮೋದಿ ವಿರುದ್ಧ ದೂರು ನೀಡಲು ದೆಹಲಿ ಪೊಲೀಸರ ಸಹಾಯ ಕೇಳಿದ್ದಾರೆ. ನಟಿಯ ಈ ಟ್ವೀಟ್​ ನೋಡಿಕೊಂಡು ದೆಹಲಿ ಪೊಲೀಸರು ಸುಮ್ಮನೆ ಕುಳಿತಿಲ್ಲ. ಆ ನಟಿಗೆ ಖಡಕ್​ ಪ್ರತಿಕ್ರಿಯೆ ನೀಡಲಾಗಿದೆ. ಅಷ್ಟಕ್ಕೂ ಪಾಕ್​ ನಟಿ ಸೆಹರ್​ ಶಿನ್ವಾರಿ (Sehar Shinwari) ಹೇಳಿದ್ದೇನು? ಅದಕ್ಕೆ ದೆಹಲಿ ಪೋಲಿಸರ ನೀಡಿದ ಉತ್ತರ ಏನು? ಇಲ್ಲಿದೆ ವಿವರ..

ಪಾಕ್​ ನಟಿ ಸೆಹರ್​ ಶಿನ್ವಾರಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಹಲವಾರು ವಿಷಯಗಳ ಬಗ್ಗೆ ಅವರು ಟ್ವೀಟ್​ ಮಾಡುತ್ತಾರೆ. ಟ್ವಿಟರ್​ನಲ್ಲಿ ಅವರನ್ನು ಲಕ್ಷಾಂತರ ಮಂದಿ ಫಾಲೋ ಮಾಡುತ್ತಿದ್ದಾರೆ. ಈಗ ಪಾಕಿಸ್ತಾನದಲ್ಲಿ ಆಗುತ್ತಿರುವ ಗಲಭೆಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಾರಣ ಎಂಬುದು ಸೆಹರ್​ ಶಿನ್ವಾರಿ ವಾದ.

ಸೆಹರ್​ ಶಿನ್ವಾರಿ ಟ್ವೀಟ್​ನಲ್ಲಿ ಏನಿದೆ?

‘ಯಾರಿಗಾದರೂ ದೆಹಲಿ ಪೊಲೀಸರ ಆನ್​ಲೈನ್​ ಸಂಪರ್ಕ ತಿಳಿದಿದೆಯೇ? ಪಾಕಿಸ್ತಾನದಲ್ಲಿ ಗಲಭೆ ಮತ್ತು ಭಯೋತ್ಪಾದನೆ ಹಬ್ಬಿಸುತ್ತಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಬೇಹುಗಾರಿಕಾ ಸಂಸ್ಥೆ ರಾ ವಿರುದ್ಧ ನಾನು ದೂರು ನೀಡಬೇಕು. ಭಾರತದ ಸುಪ್ರೀಂ ಕೋರ್ಟ್​ ನನಗೆ ನ್ಯಾಯ ಒದಗಿಸುತ್ತದೆ ಎಂಬ ನಂಬಿಕೆ ಇದೆ’ ಎಂದು ಸೆಹರ್​ ಶಿನ್ವಾರಿ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: PM Narendra Modi: ₹5,500 ಕೋಟಿ ವೆಚ್ಚದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ

ದೆಹಲಿ ಪೊಲೀಸರ ಪ್ರತಿಕ್ರಿಯೆ ಏನು?

ಸೆಹರ್​ ಶಿನ್ವಾರಿ ಅವರು ಮಾಡಿದ ಈ ಟ್ವೀಟ್​ ದೆಹಲಿ ಪೊಲೀಸರ ಕಣ್ಣಿಗೆ ಬಿದ್ದಿದೆ. ಅದಕ್ಕೆ ಅವರು ಉತ್ತರ ನೀಡಿದ್ದಾರೆ. ‘ಪಾಕಿಸ್ತಾನದಲ್ಲಿ ನಮ್ಮ ಕಾರ್ಯವಾಪ್ತಿ ಇಲ್ಲ. ನಿಮ್ಮ ದೇಶದಲ್ಲಿ ಇಂಟರ್​ನೆಟ್​ ಸೌಲಭ್ಯ ಕಡಿತಗೊಂಡಿದ್ದರೂ ಕೂಡ ನೀವು ಹೇಗೆ ಈ ಟ್ವೀಟ್​ ಮಾಡಿದ್ದೀರಿ ಎಂಬುದನ್ನು ನಾವು ತಿಳಿಯಲು ಬಯಸುತ್ತೇವೆ’ ಎಂದು ದೆಹಲಿ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.

ಸೆಹರ್​ ಶಿನ್ವಾರಿ ಮಾಡಿದ ಅರ್ಥವಿಲ್ಲದ ಈ ಟ್ವೀಟ್​ಗೆ ನೂರಾರು ಜನರು ಕಮೆಂಟ್​ ಮಾಡಿದ್ದಾರೆ. ‘ಕುಡಿದ ನಶೆಯಲ್ಲಿ ಈಕೆ ಈ ರೀತಿ ಟ್ವೀಟ್​ ಮಾಡಿದ್ದಾಳೆ’ ಎಂದು ನೆಟ್ಟಿಗರೊಬ್ಬರು ಟ್ರೋಲ್​ ಮಾಡಿದ್ದಾರೆ. ‘ಯಾರಾದರೂ ಇಷ್ಟು ಮೂರ್ಖರಾಗಲು ಹೇಗೆ ಸಾಧ್ಯ?’ ಎಂದು ಕೂಡ ಅನೇಕರು ಪ್ರಶ್ನೆ ಮಾಡಿದ್ದಾರೆ.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.