ವಿಚ್ಛೇದನ ಸುದ್ದಿ ಹಬ್ಬಿಸಿದವರ ಬಾಯಿ ಮುಚ್ಚಿಸಿದ ನಟ ಪವನ್ ಕಲ್ಯಾಣ್
Pawan Kalyan: ನಟ, ರಾಜಕಾರಣಿ ಪವನ್ ಕಲ್ಯಾಣ್ ತಮ್ಮ ಮೂರನೇ ಪತ್ನಿಗೂ ವಿಚ್ಛೇದನ ನೀಡಲಿದ್ದಾರೆ ಎಂಬ ಸುದ್ದಿ ಹರಿದಾಡಿದ ಬೆನ್ನಲ್ಲೆ ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ ಪವನ್.

ತೆಲುಗಿನ ಸೂಪರ್ ಸ್ಟಾರ್ ಪವನ್ ಕಲ್ಯಾಣ್ (Pawan Kalyan), ರಾಜಕಾರಣಿಯೂ ಆಗಿದ್ದು ಮುಂಬರುವ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ (Andhra Pradesh Assembly Elections) ತಮ್ಮ ಜನಸೇನಾ ಪಕ್ಷವನ್ನು ಗೆಲ್ಲಿಸಲು ತೀವ್ರ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಆಂಧ್ರದಲ್ಲಿ ಜಗನ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜಗನ್ ಹಾಗೂ ಅವರ ಸಚಿವರು ಶಾಸಕರ ವಿರುದ್ಧ ಪವನ್ ಕಲ್ಯಾಣ್ ಸತತ ಟೀಕೆಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಕೆಲವು ಶಾಸಕರು ಸಹ ಪವನ್ ಕಲ್ಯಾಣ್ ಅನ್ನು ಟೀಕಿಸುತ್ತಾ ಬರುತ್ತಿದ್ದು, ಪವನ್ರ ಮೂರು ಮದುವೆಗಳ ಬಗ್ಗೆ ಹೆಚ್ಚಾಗಿ ಆಡಿಕೊಂಡಿದ್ದಾರೆ. ಇದೀಗ ಪವನ್ ತಮ್ಮ ಮೂರನೇ ಮಡದಿಗೂ ವಿಚ್ಛೇದನ (Divorce) ನೀಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿದ್ದು ಈ ಸುದ್ದಿಯನ್ನು ಆಡಳಿತ ಪಕ್ಷದವರೇ ವೈರಲ್ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ ಅದಕ್ಕೆ ತಕ್ಕ ಪ್ರತಿಕ್ರಿಯೆಯನ್ನು ಪವನ್ ನೀಡಿದ್ದಾರೆ.
ಪವನ್ ಕಲ್ಯಾಣ್ ತಮ್ಮ ಮೂರನೇ ಪತ್ನಿ ಅನ್ನಾ ಲೆಜ್ನೇವಾ ಅವರಿಗೆ ವಿಚ್ಛೇದನ ನೀಡಲಿದ್ದಾರೆ ಎಂಬ ಸುದ್ದಿ ವೈರಲ್ ಆದ ಬೆನ್ನಲ್ಲೆ ಪವನ್ರ ಜನಸೇನಾ ಪಕ್ಷವು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು ”ವಾರಾಹಿ ಯಾತ್ರೆಯ ಮೊದಲ ಹಂತ ಯಶಸ್ವಿಯಾಗಿ ಮುಗಿದ ಕಾರಣ ಪವನ್ ಕಲ್ಯಾಣ್ ಹಾಗೂ ಅವರ ಪತ್ನಿ ಅನ್ನಾ ಕೋನಿಡೇಲ ತಮ್ಮ ಹೈದರಾಬಾದ್ ನಿವಾಸದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಿದ್ದಾರೆ. ಶೀಘ್ರದಲ್ಲಿಯೇ ವಾರಾಹಿ ಯಾತ್ರೆಯ ಎರಡನೇ ಹಂತ ಪ್ರಾರಂಭವಾಗಲಿದೆ. ಈ ಬಗ್ಗೆ ಚರ್ಚಿಸಲು ಪವನ್ ಕಲ್ಯಾಣ್ ಮಂಗಳಗಿರಿಯಲ್ಲಿ ಕೆಲವು ಸಭೆಗಳನ್ನು ನಡೆಸಲಿದ್ದಾರೆ” ಎಂದಿದೆ.
ಪವನ್ ಕಲ್ಯಾಣ್ ಕುರಿತಾಗಿ ಹಬ್ಬಿದ್ದ ವಿಚ್ಛೇದನದ ಸುಳ್ಳು ಸುದ್ದಿಗೆ ಹೀಗೆ ಪರೋಕ್ಷವಾಗಿ ಪಕ್ಷದ ಸಾಮಾಜಿಕ ಜಾಲತಾಣ ಬಳಸಿಕೊಂಡು ಸ್ಪಷ್ಟನೆಯನ್ನು ಪವನ್ ಕಲ್ಯಾಣ್ ನೀಡಿದ್ದಾರೆ. ಪವನ್ ಕಲ್ಯಾಣ್ರ ವಿರೋಧಿಗಳು ಪವನ್ ಕಲ್ಯಾಣ್ ಅನ್ನು ಟೀಕಿಸಲು ಅವರ ವೈಯಕ್ತಿಕ ಜೀವನ್ನು ಗುರಿಯಾಗಿಸಿಕೊಳ್ಳುತ್ತಾರೆ. ಪವನ್ ಮೂರು ಮದುವೆ ಆಗಿದ್ದಾರೆ, ಸಿಟ್ಟಿನ ವ್ಯಕ್ತಿ, ಹಣಕ್ಕಾಗಿ ರಾಜಕೀಯಕ್ಕೆ ಬಂದಿದ್ದಾರೆ ಇತರೆ ಟೀಕೆಗಳನ್ನು ಮಾಡುತ್ತಾರೆ. ಹಿಂದೆಯೂ ಮಾಡಿದ್ದಾರೆ.
ಇದನ್ನೂ ಓದಿ:ಪವನ್ ಕಲ್ಯಾಣ್ಗಾಗಿ ಮಾಡಿದ ಕತೆ ರಾಮ್ ಚರಣ್ ಪಾಲಾಗಿದ್ದು ಹೇಗೆ? ನಿರ್ಮಾಪಕನ ವಿರುದ್ಧ ಪವನ್ ಅಭಿಮಾನಿಗಳು ಕಿಡಿ
ಈ ಹಿಂದೆ ಈ ಬಗ್ಗೆ ಉತ್ತರಿಸಿರುವ ಪವನ್ ಕಲ್ಯಾಣ್, ”ಹೌದು ನಾನು ಮೂರು ಮದುವೆ ಆಗಿದ್ದೇನೆ. ಮೊದಲ ಮದುವೆಯನ್ನು ಕೋಟಿಗಟ್ಟಲೆ ಹಣ ಕೊಟ್ಟು ವಿಚ್ಛೇದನ ಪಡೆದಿದ್ದೇನೆ. ಎರಡನೇ ಪತ್ನಿಗೆ ಮಕ್ಕಳಿಗೆ ಜೀವನಕ್ಕೆ ಏನು ಬೇಕೋ ಅದೆಲ್ಲವನ್ನೂ ಕೊಟ್ಟಿದ್ದೇನೆ. ಈಗ ಮೂರನೇ ಮದುವೆ ಆಗಿದ್ದೇನೆ. ಕಾನೂನು ಪ್ರಕಾರವೇ ನಾನು ಮದುವೆ ಆಗಿದ್ದೀನಿ. ಈ ಕುರಿತು ನನ್ನನ್ನು ಪ್ರಶ್ನೆ ಮಾಡುತ್ತಿರುವ ನಿಮ್ಮ ಖಾಸಗಿ ಜೀವನದ ಬಗ್ಗೆ ಮಾತನಾಡಲಾ? ನಿಮಗೆ ಹಗಲಲ್ಲಿ ಒಬ್ಬರು ಇರುಳಲ್ಲಿ ಒಬ್ಬರು ಜೊತೆಗಾರರು ಎಂದು ಆಕ್ರೋಶ ಹೊರಹಾಕಿದ್ದರು.
ಹಣಕ್ಕಾಗಿ ರಾಜಕೀಯಕ್ಕೆ ಬಂದವ, ಪವನ್ ಒಬ್ಬ ಪ್ಯಾಕೇಜ್ ಸ್ಟಾರ್ ಎಂದು ಕರೆದವರಿಗೆ ಬಹಿರಂಗ ಸಭೆಯಲ್ಲಿ ಚಪ್ಪಲಿ ತೋರಿಸಿದ ಪವನ್ ಕಲ್ಯಾಣ್, ಅದೇ ಸಭೆಯಲ್ಲಿ ತಮ್ಮ ವಾರ್ಷಿಕ ಆದಾಯ, ತಾವು ಕಟ್ಟುವ ತೆರಿಗೆ ಎಲ್ಲವನ್ನೂ ಬಹಿರಂಗವಾಗಿ ಓದಿ ಹೇಳಿದ್ದರು. ಏನೇ ಆದರೂ ಪವನ್ ಕಲ್ಯಾಣ್ ಈ ಬಾರಿಯ ಚುನಾವಣೆಗಾಗಿ ಅತೀವ ಶ್ರಮ ಹಾಕುತ್ತಿದ್ದು, ಈ ಚುನಾವಣೆಯಲ್ಲಿ ಅವರ ಪಕ್ಷ ಪ್ರಭಾವ ಬೀರಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




