ವಿಜಯ್ ರಾಜಕೀಯ ಪ್ರವೇಶದ ಬಗ್ಗೆ ಆರಂಭದಲ್ಲಿಯೇ ಟೀಕೆ
Vijay: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ವಿಜಯ್ ರಾಜಕೀಯ ಪ್ರವೇಶಿಸಲಿದ್ದಾರೆ ಎನ್ನಲಾಗುತ್ತಿದ್ದು, ವಿಜಯ್ ನಡೆಯನ್ನು ನಿರ್ಮಾಪಕ ಕೆ ರಾಜಾ ಟೀಕಿಸಿದ್ದಾರೆ.

ತಮಿಳುನಾಡಿನಲ್ಲಿ (Tamil Nadu) ಸಿನಿಮಾ ನಟರು ರಾಜಕೀಯ ಪ್ರವೇಶಿಸುವುದು, ಹೊಸ ರಾಜಕೀಯ ಪಕ್ಷ ಕಟ್ಟುವುದು ಸಾಮಾನ್ಯ. ಎಂಜಿಆರ್, ಕರುಣಾನಿಧಿ, ಜಯಲಲಿತಾ ಅವರುಗಳು ಸಿನಿಮಾ ಹಿನ್ನೆಲೆಯಿಂದ ರಾಜಕೀಯ ಪ್ರವೇಶಿಸಿ ಸಿಎಂ ಸಹ ಆಗಿದ್ದಾರೆ. ಇದೇ ಹಾದಿಯಲ್ಲಿ ಕಮಲ್ ಹಾಸನ್ (Kamal Haassan) ಸಹ ರಾಜಕೀಯ ಪಕ್ಷ ಸ್ಥಾಪಿಸಿ ಹೋರಾಟ ಜಾರಿಯಲ್ಲಟ್ಟಿದ್ದಾರೆ. ರಜನೀಕಾಂತ್ (Rajinikanth) ಸಹ ರಾಜಕೀಯ ಪಕ್ಷ ಕಟ್ಟಲು ನಿರ್ಧರಿಸಿ ಬಳಿಕ ಆರೋಗ್ಯ ಸಮಸ್ಯೆಯಿಂದಾಗಿ ಹಿಂದೆ ಸರಿದರು. ಇದೀಗ ತಮಿಳಿನ ಮತ್ತೊಬ್ಬ ಸೂಪರ್ ಸ್ಟಾರ್ ನಟ ವಿಜಯ್ (Vijay) ರಾಜಕೀಯ ಪ್ರವೇಶಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ವಿಜಯ್ರ ರಾಜಕೀಯ ಪ್ರವೇಶದ ಸುದ್ದಿ ಹಬ್ಬುತ್ತಿದ್ದಂತೆ ಕೆಲವು ಟೀಕೆಗಳು ಸಹ ವ್ಯಕ್ತವಾಗಿವೆ.
ವಿಜಯ್ ರಾಜಕೀಯ ಪ್ರವೇಶಿಸಲಿದ್ದಾರೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿರುವ ನಿರ್ಮಾಪಕ ಕೆ ರಾಜನ್, ”ಬಡವರಿಗೆ ಸಹಾಯ ಮಾಡುವ ಮನಸ್ಸಿದ್ದರೆ ಮೊದಲು ತಮ್ಮ ಸಿನಿಮಾ ಟಿಕೆಟ್ನ ಬೆಲೆ ಕಡಿಮೆ ಮಾಡಿ ತೋರಿಸಲಿ. ಅದು ಅವರ ಕೈಯಲ್ಲೇ ಇದೆಯಲ್ಲ. ತನ್ನ ಸಿನಿಮಾ ಟಿಕೆಟ್ಗಳು ಭಾರಿ ಬೆಲೆಗೆ ಮಾರಾಟವಾಗುವುದನ್ನು ತಡೆಯುವ ಶಕ್ತಿ ಆತನಿಗಿಲ್ಲ ಹಾಗಿದ್ದರೆ ರಾಜಕೀಯಕ್ಕೆ ಬಂದು ಜನಗಳ ಒಳತು ಮಾಡುತ್ತಾರೆ ಎಂದು ಹೇಗೆ ನಂಬುವುದು” ಎಂದಿದ್ದಾರೆ.
”ವಿಜಯ್ಗೆ ರಾಜಕೀಯಕ್ಕೆ ಪ್ರವೇಶಿಸುವ ಇಚ್ಛೆ ಇದ್ದರೆ ಪ್ರವೇಶಿಸಲು ಅವರನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಅದು ಅವರ ಇಚ್ಛೆ. ಒಂದೊಮ್ಮೆ ವಿಜಯ್ ಒಳ್ಳೆಯ ರಾಜಕಾರಣ ಮಾಡಿದರೆ ಜನರೇ ಅವರ ಬೆನ್ನಿಗೆ ನಿಲ್ಲುತ್ತಾರೆ. ಆದರೆ ರಾಜಕೀಯಕ್ಕಾಗಿ ಸಿನಿಮಾ ವೃತ್ತಿಯನ್ನು ಬಿಡುವುದು ಒಳ್ಳೆಯದಲ್ಲ. ಅವರು ಒಳ್ಳೆಯ ನಟ ಅವರು ಇನ್ನೂ ಹೆಚ್ಚು-ಹೆಚ್ಚು ಸಿನಿಮಾಗಳಲ್ಲಿ ನಟಿಸಬೇಕು” ಎಂದಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಇದೇ ಕೆ ರಾಜನ್, ವಿಜಯ್ರ ರಾಜಕೀಯ ಎಂಟ್ರಿಯನ್ನು ಸ್ವಾಗತಿಸಿದ್ದರು. ಪ್ರತಿಭಾನ್ವಿತ ಶಾಲಾ ಮಕ್ಕಳಗೆ ಪುರಸ್ಕಾರ ನೀಡಿದ ವಿಜಯ್ರ ಸೇವೆಯನ್ನು ಸಹ ಶ್ಲಾಘಿಸಿದ್ದರು. ಆದರೆ ಈಗ ಅಚಾನಕ್ಕಾಗಿ ಟೀಕೆ ಮಾಡುತ್ತಿದ್ದಾರೆ.
ಇದನ್ನೂ ಓದಿ:Thalapathy Vijay: ಚಿತ್ರರಂಗಕ್ಕೆ ವಿದಾಯ ಹೇಳಲಿರುವ ದಳಪತಿ ವಿಜಯ್? ರಾಜಕೀಯದ ಎಂಟ್ರಿಗೆ 3 ವರ್ಷ ತಯಾರಿ
ಕೆ ರಾಜ ತಮ್ಮ ವಿವಾದಾತ್ಮಕ ಮಾತುಗಳಿಂದ ಆಗಾಗ್ಗೆ ಸುದ್ದಿ ಆಗುತ್ತಿರುತ್ತಾರೆ. ಹಿಂದೊಮ್ಮೆ ಗಾಯಕಿ ಚನ್ಮಯಿ, ಗೀತಸಾಹಿತಿ ವೈರಮುತ್ತು ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದಾಗ, ವೇದಿಕೆಯೊಂದರಲ್ಲಿ ಚಿನ್ಮಯಿ ವಿರುದ್ಧ ಗುಡುಗಿದ್ದರು, ಆಕೆಯ ವೃತ್ತಿಯನ್ನು ಮುಗಿಸುತ್ತೇನೆ ಎಂದಿದ್ದರು. ಚಿನ್ಮಯಿ ಕೇವಲ ಪ್ರಚಾರಕ್ಕಾಗಿ ಹೀಗೆಲ್ಲ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅದೇ ವೇದಿಕೆಯಲ್ಲಿ ಹಾಜರಿದ್ದ ನಿರ್ದೇಶಕ ಪಾ ರಂಜಿತ್, ತಮ್ಮ ಮಾತಿನ ಸರದಿ ಬಂದಾಗ ನಿರ್ಮಾಪಕ ರಾಜನ್ ಮಾತುಗಳನ್ನು ಖಂಡಿಸಿ ಮಾತನಾಡಿದ್ದರು.
ವಿಜಯ್ ರಾಜಕೀಯ ಪ್ರವೇಶದ ವಿಷಯಕ್ಕೆ ಮರಳುವುದಾದರೆ, ವಿಜಯ್ ಹೆಸರಿನಲ್ಲಿ ಅವರ ಅಭಿಮಾನಿಗಳು ಕಳೆದ ತಮಿಳುನಾಡು ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ಧಿಸಿ ಕೆಲವು ಸೀಟುಗಳನ್ನು ಗೆದ್ದಿದ್ದಾರೆ. ವಿಜಯ್ ಸಹ ಸೂಕ್ತ ಸಮಯದಲ್ಲಿ ರಾಜಕೀಯ ಎಂಟ್ರಿ ವಿಷಯ ಹೊರಹಾಕಲು ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆಯೇ ವಿಜಯ್ರ ತಂದೆ ಚಂದ್ರಶೇಖರ್ ವಿಜಯ್ ಹೆಸರಿನಲ್ಲಿ ರಾಜಕೀಯ ಪಕ್ಷ ಸ್ಥಾಪನೆಗೆ ಅರ್ಜಿ ಹಾಕಿ ರಾಜಕೀಯ ಪಕ್ಷದ ನೊಂದಣಿ ಮಾಡಿಸಿದ್ದರು. ಆದರೆ ವಿಜಯ್, ತಮಗೂ ಆ ರಾಜಕೀಯ ಪಕ್ಷಕ್ಕೂ ಸಂಬಂಧವಿಲ್ಲವೆಂದು ಹೇಳಿದ್ದರು. ಆದರೆ ಈಗ ಸ್ವತಃ ವಿಜಯ್ ಅವರೇ ರಾಜಕೀಯ ಪಕ್ಷ ಸ್ಥಾಪಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




