Thalapathy Vijay: ಚಿತ್ರರಂಗಕ್ಕೆ ವಿದಾಯ ಹೇಳಲಿರುವ ದಳಪತಿ ವಿಜಯ್? ರಾಜಕೀಯದ ಎಂಟ್ರಿಗೆ 3 ವರ್ಷ ತಯಾರಿ
ತಮಿಳುನಾಡಿನಲ್ಲಿ ರಾಜಕೀಯಕ್ಕೂ ಚಿತ್ರರಂಗಕ್ಕೂ ಬಹಳ ನಂಟಿದೆ. ರಾಜಕೀಯದ ಸುದ್ದಿಯಲ್ಲಿ ಈಗ ದಳಪತಿ ವಿಜಯ್ ಅವರ ಹೆಸರು ತಳುಕು ಹಾಕಿಕೊಂಡಿದೆ.
ಖ್ಯಾತ ನಟ ದಳಪತಿ ವಿಜಯ್ (Thalapathy Vijay) ಅವರು ಬಹಳ ವೇಗವಾಗಿ ಸಿನಿಮಾ ಕೆಲಸಗಳನ್ನು ಮುಗಿಸುತ್ತಾರೆ. ಈಗ ಅವರು ‘ಲಿಯೋ’ ಸಿನಿಮಾದ (Leo Movie) ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಈ ನಡುವೆ ಅವರು ರಾಜಕೀಯಕ್ಕೆ ಎಂಟ್ರಿ ನೀಡುತ್ತಾರೆ ಎಂಬ ಸುದ್ದಿ ಕೂಡ ಜೋರಾಗಿ ಕೇಳಿಬರುತ್ತಿದೆ. ದಳಪತಿ ವಿಜಯ್ ಅವರು ರಾಜಕೀಯಕ್ಕೆ (Thalapathy Vijay Politics) ಎಂಟ್ರಿ ನೀಡಲಿ ಎಂಬುದು ಅಭಿಮಾನಿಗಳ ಆಸೆಯೂ ಹೌದು. ಅವರಿಂದ ಸಮಾಜದಲ್ಲಿ ಬದಲಾವಣೆ ಬರಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಅದಕ್ಕಾಗಿ ದಳಪತಿ ವಿಜಯ್ ಅವರು ಸಿನಿಮಾ ರಂಗಕ್ಕೆ ವಿದಾಯ ಹೇಳಿ ರಾಜಕೀಯಕ್ಕೆ ಎಂಟ್ರಿ ನೀಡುತ್ತಾರೆ ಎನ್ನಲಾಗಿದೆ. ಅದಕ್ಕಾಗಿ ಅವರು ಮೂರು ವರ್ಷ ತಯಾರಿ ನಡೆಸಲಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದೆ.
ಕಾಲಿವುಡ್ನಲ್ಲಿ ದಳಪತಿ ವಿಜಯ್ ಅವರಿಗೆ ಸಖತ್ ಬೇಡಿಕೆ ಇದೆ. ಅವರ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತವೆ. ಹಾಗಿದ್ದರೂ ಕೂಡ ಅವರು ರಾಜಕೀಯದ ಕಡೆಗೆ ಒಲವು ತೋರಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ‘ಲಿಯೋ’ ಕೆಲಸಗಳು ಮುಗಿದ ಬಳಿಕ ನಿರ್ದೇಶಕ ವೆಂಕಟ್ ಪ್ರಭು ಜೊತೆ ಅವರೊಂದು ಸಿನಿಮಾ ಮಾಡಲಿದ್ದಾರೆ. ಆ ನಂತರ ಅವರು ಯಾವುದೇ ಸಿನಿಮಾವನ್ನು ಒಪ್ಪಿಕೊಳ್ಳುವುದಿಲ್ಲ. ನೇರವಾಗಿ ಅವರು ರಾಜಕೀಯಕ್ಕೆ ಪ್ರವೇಶ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Thalapathy Vijay: ಡ್ರಗ್ಸ್ ಸೇವನೆಗೆ ಪ್ರಚೋದನೆ ನೀಡಿದ ಆರೋಪ: ನಟ ದಳಪತಿ ವಿಜಯ್ ಮೇಲೆ ಕೇಸ್ ದಾಖಲು
ಈ ಬಗ್ಗೆ ದಳಪತಿ ವಿಜಯ್ ಅವರು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಅವರು ಹೊಸ ಪಕ್ಷ ಶುರು ಮಾಡುತ್ತಾರೋ ಅಥವಾ ಈಗ ಇರುವ ಯಾವುದಾದರೂ ಪಕ್ಷದ ಜೊತೆ ಕೈ ಜೋಡಿಸುತ್ತಾರೋ ಎಂಬುದು ಕೂಡ ಇನ್ನೂ ಖಚಿತವಾಗಿಲ್ಲ. ಸಿನಿಮಾದಿಂದ ಮೂರು ವರ್ಷ ಬ್ರೇಕ್ ಪಡೆದುಕೊಂಡು, ರಾಜಕೀಯದ ಬಗ್ಗೆ ಎಲ್ಲ ವಿವರಗಳನ್ನು ತಿಳಿದುಕೊಂಡು ಅವರು ಪ್ಯ್ಲಾನ್ ರೂಪಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ‘ಲಿಯೋ’ ನಿರ್ದೇಶಕನಿಗೆ ದಳಪತಿ ವಿಜಯ್ ಅಭಿಮಾನಿಗಳಿಂದ ಬಹಿರಂಗ ಪತ್ರ; ಏನಿದೆ ಇದರಲ್ಲಿ?
ತಮಿಳುನಾಡಿನಲ್ಲಿ ರಾಜಕೀಯಕ್ಕೂ ಚಿತ್ರರಂಗಕ್ಕೂ ಬಹಳ ನಂಟಿದೆ. ಈಗಾಗಲೇ ಅನೇಕ ಸ್ಟಾರ್ ನಟ-ನಟಿಯರು ರಾಜಕೀಯಕ್ಕೆ ಎಂಟ್ರಿ ನೀಡಿ ಯಶಸ್ಸು ಕಂಡಿದ್ದುಂಟು. ಈಗ ವಿಜಯ್ ಅವರು ಅದೇ ಮಾರ್ಗದಲ್ಲಿ ಸಾಗಲಿದ್ದಾರೆ ಎಂದು ಊಹಿಸಲಾಗುತ್ತಿದೆ. ಸದ್ಯ ಅವರ ‘ಲಿಯೋ’ ಸಿನಿಮಾ ಮೇಲೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಲೋಕೇಶ್ ಕನಗರಾಜ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:27 pm, Mon, 3 July 23