‘ಹರಿ ಹರ ವೀರ ಮಲ್ಲು’: ಎಲ್ಲ ಗೊಂದಲಗಳಿಗೆ ತೆರೆ ಎಳೆದ ಪವನ್ ಕಲ್ಯಾಣ್

Hari Hara Veera Mallu: ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಜುಲೈ 24 ರಂದು ಬಿಡುಗಡೆ ಆಗಲಿದೆ. ಸಿನಿಮಾದ ನಿರ್ಮಾಪಕರ ಜೊತೆಗೆ ಪವನ್ ಕಲ್ಯಾಣ್ ಮುನಿಸಿಕೊಂಡಿದ್ದಾರೆ ಹಾಗಾಗಿ ಅವರು ಪ್ರಚಾರಕ್ಕೆ ಬರುತ್ತಿಲ್ಲ ಎಂಬ ಸುದ್ದಿ ಹರಿದಾಡಿತ್ತು. ಆದರೆ ಪವನ್ ಕಲ್ಯಾಣ್ ಪ್ರತ್ಯೇಕ ಸುದ್ದಿಗೋಷ್ಠಿ ಆಯೋಜಿಸಿ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಸಿನಿಮಾ ಬಿಡುಗಡೆ ತಡವಾಗಿದ್ದಕ್ಕೆ ಕಾರಣವನ್ನೂ ಹೇಳಿದ್ದಾರೆ.

‘ಹರಿ ಹರ ವೀರ ಮಲ್ಲು’: ಎಲ್ಲ ಗೊಂದಲಗಳಿಗೆ ತೆರೆ ಎಳೆದ ಪವನ್ ಕಲ್ಯಾಣ್
Hari Hara Veera Mallu

Updated on: Jul 22, 2025 | 12:18 PM

ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ನಟಿಸಿರುವ ‘ಹರಿ ಹರ ವೀರ ಮಲ್ಲು’ ಸಿನಿಮಾ ಹಲವಾರು ಅಡೆ-ತಡೆಗಳನ್ನು ದಾಟಿ ಬಿಡುಗಡೆ ಆಗಲಿದೆ. ಸಿನಿಮಾ ಇದೇ ಜುಲೈ 24ರಂದು ಬಿಡುಗಡೆ ಆಗಲಿದೆ. ಪವನ್ ಕಲ್ಯಾಣ್ ಈ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸುವುದಿಲ್ಲ ಎಂಬ ಸುದ್ದಿ ಕೆಲ ದಿನಗಳ ಹಿಂದೆ ಹರಿದಾಡಿತ್ತು. ಆದರೆ ಅದನ್ನು ಸುಳ್ಳು ಮಾಡಿರುವ ಪವನ್ ಕಲ್ಯಾಣ್, ನಿನ್ನೆ ನಡೆದ ‘ಹರಿ ಹರ ವೀರ ಮಲ್ಲು’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಮಾತ್ರವಲ್ಲದೆ ಕರ್ನಾಟಕ ಸರ್ಕಾರದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಅತಿಥಿಯಾಗಿ ಆಹ್ವಾನಿಸಿದ್ದರು.

ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಮುಂಚೆ ಸುದ್ದಿಗೋಷ್ಠಿಯೊಂದನ್ನು ಸಹ ಆಯೋಜಿಸಿ ಹಾಜರಿದ್ದ ಪವನ್ ಕಲ್ಯಾಣ್, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪವನ್ ಕಲ್ಯಾಣ್, ‘ಸಂಜೆ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಇದ್ದರೂ ಸಹ ಸುದ್ದಿಗೋಷ್ಠಿ ಆಯೋಜಿಸಲು ಮುಖ್ಯ ಕಾರಣವೆಂದರೆ ಕೆಲವು ಗೊಂದಲಗಳನ್ನು ಪರಿಹರಿಸುವುದೇ ಆಗಿದೆ. ನಾನು ಈ ಸಿನಿಮಾದ ಜೊತೆಗೆ ಇಲ್ಲ ಎಂಬ ಸುದ್ದಿ ಹರಿದಾಡಿದೆ. ಅದರೆ ಅದು ಸುಳ್ಳು, ನಾನು ಈ ಸಿನಿಮಾದ ಜೊತೆಗೆ ಇದ್ದೀನಿ, ಎಎಂ ರತ್ನಂ ಅವರ ಜೊತೆಗೆ ನಾನಿದ್ದೀನಿ. ಇದನ್ನು ಖಾತ್ರಿ ಪಡಿಸಲೆಂದೇ ಈ ಸುದ್ದಿಗೋಷ್ಠಿ ಆಯೋಜಿಸಲಾಗಿದೆ’ ಎಂದರು.

ಇದನ್ನೂ ಓದಿ:ತಮ್ಮದೇ ಸಿನಿಮಾ ಪ್ರಚಾರ ಮಾಡುವುದಿಲ್ಲ ಪವನ್ ಕಲ್ಯಾಣ್: ಕಾರಣ?

ಸಿನಿಮಾದ ಬಿಡುಗಡೆ ತಡವಾಗಿದ್ದಕ್ಕೆ ಕಾರಣ ತಿಳಿಸಿದ ಪವನ್ ಕಲ್ಯಾಣ್, ‘ಈ ಸಿನಿಮಾ ಹಲವಾರು ಅಡೆ-ತಡೆಗಳನ್ನು ನೋಡಿದೆ. ಈ ಸಿನಿಮಾ ಎರಡು ಕೋವಿಡ್ ಅಲೆಯನ್ನು ಎದುರಿಸಿದೆ. ಆ ನಂತರ ತುಸು ಕ್ರಿಯೇಟಿವ್ ಭಿನ್ನಾಭಿಪ್ರಾಯಗಳನ್ನು ನೋಡಿದೆ. ಅದಾದ ಬಳಿಕ ನಾನು ರಾಜಕೀಯದಲ್ಲಿ ಬ್ಯುಸಿಯಾಗಿ ಈ ಸಿನಿಮಾಕ್ಕೆ ಸಮಯ ಕೊಡಲು ಸಾಧ್ಯವಾಗಲೇ ಇಲ್ಲ. ನನ್ನಿಂದಾಗಿಯೇ ಸಿನಿಮಾದ ಚಿತ್ರೀಕರಣ ಬಹಳ ತಡವಾಯ್ತು. ಏನೇ ಆದರೂ ಸಹ ಎಎಂ ರತ್ನಂ ಅವರು ಸಿನಿಮಾದ ಮೇಲೆ ನಂಬಿಕೆ ಇಟ್ಟಿದ್ದರು, ಸಿನಿಮಾದ ಜೊತೆಗೆ ಗಟ್ಟಿಯಾಗಿ ನಿಂತು ಈಗ ಬಿಡುಗಡೆ ಮಾಡುತ್ತಿದ್ದಾರೆ’ ಎಂದರು.

ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಅನ್ನು ಭಾರಿ ಅದ್ಧೂರಿಯಾಗಿ ಮಾಡಲು ಚಿತ್ರತಂಡ ಯೋಜಿಸಿತ್ತು ಆದರೆ ಅನಿವಾರ್ಯ ಕಾರಣಗಳಿಂದಾಗಿ ಅದ್ಧೂರಿ ಪ್ರೀ ರಿಲೀಸ್ ಇವೆಂಟ್ ಅನ್ನು ರದ್ದು ಮಾಡಿ ಸರಳವಾಗಿ ಪ್ರೀ ರಿಲೀಸ್ ಇವೆಂಟ್ ಅನ್ನು ಹೈದರಾಬಾದ್​​ನಲ್ಲಿ ಮಾಡಲಾಯ್ತು. ಭಾರಿ ಸಂಖ್ಯೆಯ ಜನ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಸಿನಿಮಾ ಜುಲೈ 24 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ