ತಮ್ಮದೇ ಸಿನಿಮಾ ಪ್ರಚಾರ ಮಾಡುವುದಿಲ್ಲ ಪವನ್ ಕಲ್ಯಾಣ್: ಕಾರಣ?
Pawan Kalyan: ನಟ ಪವನ್ ಕಲ್ಯಾಣ್ ಈಗ ಆಂಧ್ರ ಪ್ರದೇಶ ರಾಜ್ಯದ ಉಪ ಮುಖ್ಯಮಂತ್ರಿ ಸಹ ಆಗಿದ್ದಾರೆ. ಕೆಲವು ಪ್ರಮುಖ ಖಾತೆಗಳನ್ನು ಅವರು ನಿಭಾಯಿಸುತ್ತಿದ್ದಾರೆ. ಭಾರಿ ಜನವಾಬ್ದಾರಿಯ ಜೊತೆಗೆ ಅವರು ಈ ಹಿಂದೆ ಒಪ್ಪಿಕೊಂಡಿದ್ದ ಕೆಲ ಸಿನಿಮಾಗಳನ್ನು ಮುಗಿಸಿಕೊಡುತ್ತಿದ್ದಾರೆ. ಅವರ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಮುಂದಿನ ವಾರ ಬಿಡುಗಡೆ ಆಗಲಿದ್ದು, ಸಿನಿಮಾ ಪ್ರಚಾರವನ್ನು ಪವನ್ ಮಾಡುವುದಿಲ್ಲವಂತೆ.

ತೆಲುಗಿನ ಸ್ಟಾರ್ ನಟ ಪವನ್ ಕಲ್ಯಾಣ್ (Pawan Kalyan) ಈಗ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ. ಹಲವು ಪ್ರಮುಖ ಖಾತೆಗಳನ್ನು ಅವರು ಸಂಭಾಳಿಸುತ್ತಿದ್ದಾರೆ. ರಾಜಕೀಯದ ನಡುವೆಯೂ ಅವರು ಸಿನಿಮಾ ಕೆಲಸಗಳಲ್ಲಿಯೂ ತೊಡಗಿಕೊಂಡಿದ್ದಾರೆ. ಆಂಧ್ರ ವಿಧಾನಸಭೆ ಚುನಾವಣೆಗೆ ಮುಂಚೆ ಕೆಲ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದರು ಪವನ್ ಕಲ್ಯಾಣ್. ಅದರಲ್ಲಿ ಒಂದಾದ ‘ಹರಿ ಹರ ವೀರ ಮಲ್ಲು’ ಸಿನಿಮಾದ ಚಿತ್ರೀಕರಣವನ್ನು ಪವನ್ ಕಲ್ಯಾಣ್ ಮುಗಿಸಿದ್ದು, ಸಿನಿಮಾ ಮುಂದಿನ ವಾರ ಬಿಡುಗಡೆ ಆಗಲಿದೆ.
ಯಾವುದೇ ಸಿನಿಮಾ ಬಿಡುಗಡೆ ಆಗುತ್ತಿದೆಯಂತೆ ಆ ಸಿನಿಮಾದ ನಟ, ನಟಿ ನಿರ್ದೇಶಕರು ಇನ್ನಿತರೆ ಪ್ರಮುಖರು ನಗರದಿಂದ ನಗರಕ್ಕೆ ರಾಜ್ಯದಿಂದ ರಾಜ್ಯಕ್ಕೆ ಹೋಗಿ ಸಿನಿಮಾ ಬಗ್ಗೆ ಪ್ರಚಾರ ಮಾಡುತ್ತಾರೆ. ತಮಿಳಿನ ವಿಜಯ್, ರಜನೀಕಾಂತ್ ಅಂಥಹಾ ಇನ್ನಿತರೆ ಕೆಲವು ಸ್ಟಾರ್ ನಟರು ಒಂದು ದೊಡ್ಡ ಪ್ರೀ ರಿಲೀಸ್ ಅಥವಾ ಆಡಿಯೋ ರಿಲೀಸ್ ಕಾರ್ಯಕ್ರಮ ಆಯೋಜಿಸಿ ಆ ಕಾರ್ಯಕ್ರಮದ ಮೂಲಕ ಸಿನಿಮಾ ಪ್ರಚಾರ ಮಾಡುತ್ತಾರೆ. ಆದರೆ ಪವನ್ ಕಲ್ಯಾಣ್ ಇದ್ಯಾವುದನ್ನೂ ಮಾಡುವುದಿಲ್ಲವಂತೆ.
ಪವನ್ ಕಲ್ಯಾಣ್ ಅವರೇ ನಟಿಸಿರುವ ‘ಹರಿ ಹರ ವೀರ ಮಲ್ಲು’ ಸಿನಿಮಾದ ಪ್ರಚಾರ ಮಾಡುವುದಿಲ್ಲವಂತೆ. ಈ ಬಗ್ಗೆ ಸಿನಿಮಾದ ನಿರ್ಮಾಪಕರೇ ಹೇಳಿಕೊಂಡಿದ್ದಾರೆ. ಸಿನಿಮಾದ ಪ್ರಚಾರದ ಕಾರಣಕ್ಕೆ ಸಂದರ್ಶನಗಳಲ್ಲಿ ಭಾಗಿ ಆಗುತ್ತಿರುವ ಸಿನಿಮಾದ ಇಬ್ಬರು ನಿರ್ಮಾಪಕರಲ್ಲಿ ಒಬ್ಬರಾಗಿರುವ ಎಎಂ ರತ್ನಮ್, ಇತ್ತೀಚೆಗಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ‘ಪವನ್ ಕಲ್ಯಾಣ್, ‘ಹರಿ ಹರ ವೀರ ಮಲ್ಲು’ ಸಿನಿಮಾದ ಹಿಂದಿ ಆವೃತ್ತಿ ಅಥವಾ ಯಾವುದೇ ಭಾಷೆಯ ಆವೃತ್ತಿಯ ಪ್ರಚಾರ ಮಾಡುವುದಿಲ್ಲ’ ಎಂದು ಬಹಿರಂಗವಾಗಿ ಹೇಳಿದ್ದಾರೆ.
ಇದನ್ನೂ ಓದಿ:ಖ್ಯಾತ ಖಳ ನಟ ಫಿಶ್ ವೆಂಕಟ್ ನಿಧನ; ಸಹಾಯಕ್ಕೆ ಬರಲಿಲ್ಲ ಪವನ್ ಕಲ್ಯಾಣ್ ಆರ್ಥಿಕ ಬೆಂಬಲ
ಈ ಹಿಂದೆ ಹರಡಿದ್ದ ಸುದ್ದಿಯಂತೆ, ‘ಹರಿ ಹರ ವೀರ ಮಲ್ಲು’ ಸಿನಿಮಾದ ಹಿಂದಿ ಆವೃತ್ತಿಯ ಪ್ರಚಾರವನ್ನು ಪವನ್ ಕಲ್ಯಾಣ್, ಉತ್ತರ ಪ್ರದೇಶದಲ್ಲಿ ಮಾಡಲಿದ್ದಾರೆ ಎನ್ನಲಾಗಿತ್ತು. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಅತಿಥಿಯಾಗಿ ಆಹ್ವಾನಿಸಿ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಭಾರಿ ದೊಡ್ಡ ಪ್ರೀ ರಿಲೀಸ್ ಕಾರ್ಯಕ್ರಮ ಮಾಡಲಾಗುತ್ತದೆ ಎಂದು ಸುದ್ದಿಯಾಗಿತ್ತು. ಆದರೆ ಈಗ ರತ್ನಮ್ ಹೇಳಿರುವಂತೆ ಪವನ್ ಕಲ್ಯಾಣ್ ಕೇವಲ ಹಿಂದಿ ಮಾತ್ರವಲ್ಲ ಯಾವುದೇ ಭಾಷೆಯ ಸಿನಿಮಾ ಆವೃತ್ತಿಯ ಪ್ರಚಾರವನ್ನು ಸಹ ಮಾಡುವುದಿಲ್ಲವಂತೆ. ಅಲ್ಲಿಗೆ ತೆಲುಗು ಸಿನಿಮಾದ ಪ್ರಚಾರವನ್ನೂ ಸಹ ಪವನ್ ಕಲ್ಯಾಣ್ ಮಾಡುವುದಿಲ್ಲ.
ಪವನ್ ಕಲ್ಯಾಣ್ ಅವರು ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕಾರಣದಿಂದ ಅವರು ಸಿನಿಮಾ ಪ್ರಚಾರ ಮಾಡುತ್ತಿಲ್ಲ ಎಂದು ರತ್ನಮ್ ಹೇಳಿದ್ದಾರೆ. ಆದರೆ ಪವನ್ ಕಲ್ಯಾಣ್ ಅವರು ಕಳೆದ ವಾರವಷ್ಟೆ ‘ಉಸ್ತಾದ್ ಭಗತ್ಸಿಂಗ್’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ‘ಉಸ್ತಾದ್ ಭಗತ್ಸಿಂಗ್’ ಸಿನಿಮಾದ ಬಳಿಕ ಪವನ್ ಕಲ್ಯಾಣ್, ‘ಓಜಿ’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಆದರೆ ಈಗ ರತ್ನಮ್, ‘ಅವರು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದಿದ್ದಾರೆ. ಯಾವುದು ಸತ್ಯವೆಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




