AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಉಸ್ತಾದ್ ಭಗತ್ ಸಿಂಗ್’ ಟೀಸರ್ ಬಿಡುಗಡೆ: ಮಾಸ್​ಗೆ ಮಾಸ್ ಪವನ್​ ಕಲ್ಯಾಣ್

Pawan Kalyan: ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ರಾಜಕೀಯವಾಗಿ ಸಹಾಯವಾಗಲು ಮಾಡಿದ ಸಿನಿಮಾ ಇದೆಂಬ ಅನುಮಾನ ಮೂಡುವುದು ಪಕ್ಕಾ.

‘ಉಸ್ತಾದ್ ಭಗತ್ ಸಿಂಗ್’ ಟೀಸರ್ ಬಿಡುಗಡೆ: ಮಾಸ್​ಗೆ ಮಾಸ್ ಪವನ್​ ಕಲ್ಯಾಣ್
ಮಂಜುನಾಥ ಸಿ.
|

Updated on: Mar 20, 2024 | 9:47 AM

Share

ಪವನ್ ಕಲ್ಯಾಣ್ (Pawan Kalyan) ಚುನಾವಣೆಗೆ ತಯಾರಾಗುತ್ತಿದ್ದಾರೆ. ಟಿಡಿಪಿ, ಬಿಜೆಪಿ ಜೊತೆ ಸೇರಿಕೊಂಡು ಭರ್ಜರಿ ಪ್ರಚಾರ ನಡೆಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಆಂಧ್ರದ ಹಾಲಿ ಸರ್ಕಾರವನ್ನು ಉರುಳಿಸಿಯೇ ಸಿದ್ಧ ಎಂದು ಅಬ್ಬರಿಸುತ್ತಿದ್ದಾರೆ. ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷವು 21 ವಿಧಾನಸಭೆ ಕ್ಷೇತ್ರಗಳಲ್ಲಿ ಹಾಗೂ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ. ಸ್ವತಃ ಪವನ್ ಕಲ್ಯಾಣ್ ಪೀತಾಪುರಂ ವಿಧಾನಸಭಾ ಕ್ಷೇತ್ರದಿಂದ ಆಂಧ್ರ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ. ಪವನ್ ಕಲ್ಯಾಣ್ ಅತ್ತ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವ ಸಮಯದಲ್ಲಿಯೇ ಅವರ ಹೊಸ ಸಿನಿಮಾ ‘ಉಸ್ತಾದ್ ಭಗತ್ ಸಿಂಗ್’ ಟೀಸರ್ ಬಿಡುಗಡೆ ಆಗಿದೆ.

ಈ ಹಿಂದೆ ಪವನ್ ಕಲ್ಯಾಣ್ ನಟನೆಯ ‘ಗಬ್ಬರ್ ಸಿಂಗ್’, ‘ಗಬ್ಬರ್ ಸಿಂಗ್ 2’ ಸಿನಿಮಾಗಳ ಯಶಸ್ಸು ಕಂಡಿದ್ದು, ಅದೇ ಸೂತ್ರವನ್ನಿಟ್ಟುಕೊಂಡು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಮಾಡಲಾಗಿದೆ. ಸಿನಿಮಾದಲ್ಲಿ ಪವನ್ ಕಲ್ಯಾಣ್ ರಫ್ ಆಂಡ್ ಟಫ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ನೋಡಿದರೆ, ಈ ಹಿಂದಿನ ‘ಗಬ್ಬರ್ ಸಿಂಗ್’ ಸಿನಿಮಾದ ಪೊಲೀಸ್ ಪಾತ್ರವನ್ನು ಪವನ್​ರ ರಾಜಕೀಯ ಇಮೇಜಿಗೆ ಸರಿಹೊಂದುವಂತೆ ತಿದ್ದಿ ಸಾಮಾಜಿಕ ನ್ಯಾಯ ದೊರಕಿಸಿ ಕೊಡುವ ಪೊಲೀಸ್ ಎಂಬಂತೆ ಪ್ರಸ್ತುತಪಡಿಸಲಾಗಿರುವುದು ತಿಳಿದು ಬರುತ್ತಿದೆ.

ಇದನ್ನೂ ಓದಿ:ಮತದಾನಕ್ಕೂ ಮುನ್ನ ಪವನ್ ಕಲ್ಯಾಣ್​ರ ಎರಡು ಸಿನಿಮಾ ಬಿಡುಗಡೆ

ಬ್ರಾಹ್ಮಣರ ಮೇಲೆ ಆಗುತ್ತಿರುವ ಹಲ್ಲೆಯನ್ನು ತಡೆದು ದೇವರ ಉತ್ಸವ ನಡೆಯಲು ಸಹಾಯ ಮಾಡುತ್ತಿರುವುದು, ದರ್ಗಾಕ್ಕೆ ಹೋಗಿ ಅಲ್ಲಿ ಮುಸ್ಲೀಮರನ್ನುದ್ದೇಶಿಸಿ ಭಾಷಣ (ಡೈಲಾಗ್) ಹೇಳುತ್ತಿರುವ ದೃಶ್ಯಗಳು ಈಗ ಬಿಡುಗಡೆ ಆಗಿರುವ ಟೀಸರ್​ನಲ್ಲಿದೆ. ಪವನ್ ಕಲ್ಯಾಣ್​ರ ರಾಜಕೀಯ ಪಯಣಕ್ಕೆ ಬೂಸ್ಟ್ ನೀಡುವ ಕಾರಣಕ್ಕೆ ಕೆಲವು ದೃಶ್ಯಗಳನ್ನು ಸಿನಿಮಾದಲ್ಲಿ ಪೋಣಿಸಿರುವುದು ಟೀಸರ್​ನಿಂದಲೇ ತಿಳಿದು ಬರುತ್ತಿದೆ. ಬಡವರಿಗೆ, ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿ ಕೊಡುವ ಧೀರೋದಾತ್ತನಂತೆ ಪವನ್​ರನ್ನು ಸಿನಿಮಾದಲ್ಲಿ ತೋರಿಸಲಾಗುತ್ತಿದೆ.

‘ಉಸ್ತಾದ್ ಭಗತ್ ಸಿಂಗ್’ ಸಿನಿಮಾವನ್ನು ಹರೀಶ್ ಶಂಕರ್ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ‘ಗಬ್ಬರ್ ಸಿಂಗ್’ ಸಿನಿಮಾವನ್ನು ಇವರೇ ನಿರ್ದೇಶಿಸಿದ್ದರು. ಸಿನಿಮಾಕ್ಕೆ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದು, ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದ್ದಾರೆ. ಸಿನಿಮಾದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದಾರೆ. ಆದರೆ ಇದೀಗ ಬಿಡುಗಡೆ ಆಗಿರುವ ಟೀಸರ್​ನಲ್ಲಿ ಶ್ರೀಲೀಲಾ ಕಾಣುತ್ತಿಲ್ಲ. ಚುನಾವಣೆಗೆ ಮುನ್ನವೇ ಈ ಸಿನಿಮಾವನ್ನು ಬಿಡುಗಡೆ ಮಾಡಲಿದೆ ನಿರ್ಮಾಣ ಸಂಸ್ಥೆ. ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಹಾಗೂ ‘ಓಜಿ’ ಸಿನಿಮಾಗಳು ಸಹ ಚಿತ್ರೀಕರಣ ಮುಗಿಸಿಕೊಂಡಿವೆ. ‘ಹರಿ ಹರ ವೀರ ಮಲ್ಲು’ ಸಿನಿಮಾ ಸಹ ಬಿಡುಗಡೆಗೆ ರೆಡಿಯಾಗಿದ್ದು, ಆದಷ್ಟು ಶೀಘ್ರವೇ ಈ ಸಿನಿಮಾ ತೆರೆಗೆ ಬರಲಿದೆ ಎನ್ನಲಾಗುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ