Pawan Kalyan: ಸಿನಿಮಾ ಸೆಟ್ಗೆ ಮರಳುತ್ತಿದ್ದಾರೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್
Pawan Kalyan: ಪವನ್ ಕಲ್ಯಾಣ್ ಈಗ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ, ಕೆಲವು ಪ್ರಮುಖ ಖಾತೆಗಳ ಸಚಿವ ಸಹ. ರಾಜಕೀಯದಲ್ಲಿ ಬಹಳ ಬ್ಯುಸಿಯಾಗಿರುವ ಪವನ್ ಕಲ್ಯಾಣ್ ತಮ್ಮ ನಿಂತಿರುವ ಸಿನಿಮಾಗಳ ಚಿತ್ರೀಕರಣವನ್ನು ಪ್ರಾರಂಭ ಮಾಡಲಿದ್ದಾರೆ.
ಪವನ್ ಕಲ್ಯಾಣ್ ಈಗ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ. ಕಳೆದ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ-ಬಿಜೆಪಿ ಜೊತೆ ಸೇರಿ ಸ್ಪರ್ಧಿಸಿ ಐತಿಹಾಸಿಕ ಜಯ ಪಡೆದಿದಿದ್ದಾರೆ ಪವನ್ ಕಲ್ಯಾಣ್ ಮತ್ತು ಅವರ ಜನಸೇನಾ ಪಕ್ಷ. ಇದೀಗ ಪವನ್ ಕಲ್ಯಾಣ್ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಯಾಗಿದ್ದು, ಕೆಲವು ಪ್ರಮುಖ ಖಾತೆಗಳ ಸಚಿವರೂ ಆಗಿದ್ದಾರೆ. ಅಧಿಕಾರ ವಹಿಸಿಕೊಂಡಾಗಿನಿಂದಲೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯವೆಲ್ಲ ಓಡಾಡುತ್ತಿರುವ ಪವನ್ ಕಲ್ಯಾಣ್ ಬಿಡುವಿಲ್ಲದೆ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೆಲ್ಲದರ ನಡುವೆ ಅವರ ಸಿನಿಮಾ ಕೆಲಸಗಳು ನೆನಗುದಿಗೆ ಬಿದ್ದಿದ್ದವು. ಈಗ ಕೊನೆಗೂ ಚಿತ್ರೀಕರಣ ಸೆಟ್ಗೆ ಮರಳಲು ಪವನ್ ಕಲ್ಯಾಣ್ ಸಿದ್ಧವಾಗಿದ್ದಾರೆ.
ಪವನ್ ಕಲ್ಯಾಣ್ ಚುನಾವಣೆ ಪ್ರಚಾರ ಪ್ರಾರಂಭ ಮಾಡುವ ಮುನ್ನ ಅವರ ಕೈಯಲ್ಲಿ ನಾಲ್ಕು ಸಿನಿಮಾಗಳಿದ್ದವು. ‘ಹರಿಹರ ವೀರ ಮಲ್ಲು’, ‘ಓಜಿ’, ‘ಉಸ್ತಾದ್ ಭಗತ್ ಸಿಂಗ್’ ಹೆಸರಿಡದ ಇನ್ನೊಂದು ಸಿನಿಮಾ. ಇವುಗಳಲ್ಲಿ ಮೊದಲ ಮೂರು ಸಿನಿಮಾಗಳ ಚಿತ್ರೀಕರಣ ಪ್ರಾರಂಭ ಮಾಡಿದ್ದರು. ಕೆಲ ಸಿನಿಮಾಗಳ ಚಿತ್ರೀಕರಣ ಬಹುತೇಕ ಅರ್ಧಕ್ಕಿಂತಲೂ ಹೆಚ್ಚಾಗಿದೆ. ‘ಹರಿಹರ ವೀರ ಮಲ್ಲು’ ಸಿನಿಮಾದ ಸೆಟ್ಗೆ ಬೆಂಕಿ ಬಿದ್ದ ಕಾರಣ ಸಿನಿಮಾದ ಚಿತ್ರೀಕರಣ ಅರ್ಧಕ್ಕೆ ನಿಂತಿತ್ತು. ಇನ್ನು ‘ಓಜಿ’ ಸಿನಿಮಾದ ಕೆಲ ಭಾಗಗಳ ಚಿತ್ರೀಕರಣವಷ್ಟೆ ಪ್ರಾರಂಭವಾಗಿತ್ತು, ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಚಿತ್ರೀಕರಣವೂ ಸಹ ಸುಮಾರು ಅರ್ಧದಷ್ಟು ಮುಗಿದಿತ್ತು.
ಸಿನಿಮಾಗಳ ಚಿತ್ರೀಕರಣ ಬಾಕಿ ಇರುವಾಗಲೇ ಚುನಾವಣಾ ಪ್ರಚಾರಕ್ಕೆ ಧುಮುಕಿದ ಪವನ್ ಕಲ್ಯಾಣ್ ಚುನಾವಣೆ ಗೆದ್ದು ಈಗ ಡಿಸಿಎಂ ಸಹ ಆಗಿದ್ದಾರೆ. ಆದರೆ ಸಿನಿಮಾ ಸೆಟ್ಗೆ ಮರಳಿಲ್ಲ. ಪವನ್ ಮೇಲೆ ಹಣ ಹಾಕಿರುವ ನಿರ್ಮಾಪಕರು ಆತಂಕಿತರಾಗಿದ್ದರು. ಕಳೆದ ತಿಂಗಳು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪವನ್ ಕಲ್ಯಾಣ್, ‘ನನ್ನ ಕೆಲಸ ಜನಸೇವೆ. ನನ್ನ ನಂಬಿ ಕೆಲವರು ಬಂಡವಾಳ ಹೂಡಿದ್ದಾರೆ. ಅವರಿಗೆ ಸಿನಿಮಾ ಮಾಡಿಕೊಡಲೇ ಬೇಕಿದೆ. ಹಾಗೆಂದು ಈಗಲೇ ನಾನು ಸಿನಿಮಾ ಶೂಟಿಂಗ್ಗೆ ಮರಳುವುದಿಲ್ಲ. ಮೊದಲು ಮಾಡಬೇಕಾದ ಕೆಲಸಗಳು ಸಾಕಷ್ಟಿವೆ’ ಎಂದಿದ್ದರು.
ಇದನ್ನೂ ಓದಿ:ಇಷ್ಟವಾದ್ರೆ ಬರ್ತೀನಿ, ಇಲ್ಲವಾದರೆ ಇಲ್ಲ: ಪವನ್ ಕಲ್ಯಾಣ್ಗೆ ಟಾಂಗ್ ಕೊಟ್ಟ ಅಲ್ಲು ಅರ್ಜುನ್
ಇದೀಗ ಪವನ್ ಕಲ್ಯಾಣ್ ಮತ್ತೆ ಸಿನಿಮಾ ಸೆಟ್ಗೆ ಮರಳಲಿದ್ದಾರೆ ಎನ್ನಲಾಗುತ್ತಿದೆ. ಮೊದಲಿಗೆ ‘ಓಜಿ’ ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭ ಮಾಡಲಿದ್ದಾರೆ ಪವನ್ ಕಲ್ಯಾಣ್. ಇದು ಬಾಂಬೆಗೆ ತೆರಳಿ ಅಲ್ಲಿ ಅಂಡರ್ವರ್ಲ್ಡ್ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ವ್ಯಕ್ತಿಯೊಬ್ಬನ ಕತೆಯನ್ನು ಹೊಂದಿದೆ. ಸಿನಿಮಾದ ಚಿತ್ರೀಕರಣವನ್ನು ಬಾಂಬೆಯಲ್ಲಿಯೇ ಮಾಡಬೇಕು ಎಂದು ಚಿತ್ರತಂಡ ಉದ್ದೇಶಿಸಿತ್ತು. ಆದರೆ ಪವನ್ ಕಲ್ಯಾಣ್ರ ಬ್ಯುಸಿ ಶೆಡ್ಯೂಲ್ನಿಂದಾಗಿ ಈ ಯೋಜನೆ ಕೈ ಬಿಟ್ಟಿದ್ದು, ವಿಶಾಖಪಟ್ಟಂನಲ್ಲಿ ಮುಂಬೈನ ಬೀದಿಗಳನ್ನೇ ಹೋಲುವ ದೊಡ್ಡ ಸೆಟ್ ಅನ್ನು ನಿರ್ಮಾಣ ಮಾಡಲಾಗುತ್ತಿದೆ. ಸೆಟ್ ನಿರ್ಮಾಣವಾದ ಬಳಿಕ ಪವನ್ ಕಲ್ಯಾಣ್ ಇಲ್ಲೇ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ.
ಇನ್ನು ‘ಹರಿಹರ ವೀರ ಮಲ್ಲು’ ಮತ್ತು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳ ಚಿತ್ರೀಕರಣವನ್ನು ತುಸು ತಡವಾಗಿ ಮುಗಿಸಿಕೊಡಲಿದ್ದಾರೆ ಪವನ್ ಕಲ್ಯಾಣ್. ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದಲ್ಲಿ ಪವನ್ ಎದುರು ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದಾರೆ. ಪವನ್ ಕಲ್ಯಾಣ್ಗೆ ‘ಓಜಿ’ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಇದ್ದು, ಚುನಾವಣೆ ಪ್ರಚಾರ ಸಮಯದಲ್ಲಿ ‘ಓಜಿ’ ಸಿನಿಮಾ ಚೆನ್ನಾಗಿ ಮೂಡಿಬರುತ್ತಿದೆ, ಆ ಸಿನಿಮಾ ನೋಡಿ ಎಂದು ಅಭಿಮಾನಿಗಳಿಗೆ ಹೇಳಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ