ಇಷ್ಟವಾದ್ರೆ ಬರ್ತೀನಿ, ಇಲ್ಲವಾದರೆ ಇಲ್ಲ: ಪವನ್ ಕಲ್ಯಾಣ್ಗೆ ಟಾಂಗ್ ಕೊಟ್ಟ ಅಲ್ಲು ಅರ್ಜುನ್
Allu Arjun: ಮೆಗಾ ಕುಟುಂಬ ಹಾಗೂ ಅಲ್ಲು ಅರ್ಜುನ್ ನಡುವೆ ಭಿನ್ನಾಭಿಪ್ರಾಯ ತಲೆದೂರಿದೆ. ಈಗಾಗಲೇ ಮೆಗಾ ಕುಟುಂಬದ ನಾಗಬಾಬು ಅಲ್ಲು ಅರ್ಜುನ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಈಗ ಅಲ್ಲು ಅರ್ಜುನ್ ಸಹ ಪರೋಕ್ಷವಾಗಿ ಮೆಗಾ ಕುಟುಂಬಕ್ಕೆ ಟಾಂಗ್ ಕೊಟ್ಟಿದ್ದಾರೆ.
ಮೆಗಾ ಸ್ಟಾರ್ ಚಿರಂಜೀವಿ ಕುಟುಂಬದಿಂದ ಅಲ್ಲು ಅರ್ಜುನ್ ದೂರಾದಂತೆ ಕಾಣುತ್ತಿದೆ. ಈಗಾಲಗೇ ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಅಲ್ಲು ಅರ್ಜುನ್ ಅನ್ನು ಗುರಿಯಾಗಿಸಿಕೊಂಡು ಮಾಡಿದ್ದ ಟ್ವೀಟ್ ಬಹಳ ವೈರಲ್ ಆಗಿದೆ. ‘ಶತ್ರುಗಳ ಜೊತೆ ನಿಲ್ಲುವವನು ನಮ್ಮವನಾದರೂ ಪರಕೀಯ’ ಎಂದು ನಾಗಬಾಬು ಟ್ವೀಟ್ ಮಾಡಿದ್ದರು. ನಂತರ ಪವನ್ ಕಲ್ಯಾಣ್ ಸಹ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದಾಗ ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾವನ್ನು ಟೀಕಿಸಿದ್ದರು. ಇಷ್ಟು ದಿನ ಮೌನವಾಗಿದ್ದ ಅಲ್ಲು ಅರ್ಜುನ್ ಈಗ ವಿವಾದದ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ.
ಅಲ್ಲು ಅರ್ಜುನ್, ಇತ್ತೀಚೆಗಷ್ಟೆ ರಾವ್ ರಮೇಶ್ ನಟಿಸಿರುವ ‘ಮಾರುತಿ ನಗರ ಸುಬ್ರಹ್ಮಣ್ಯಂ’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ವೇದಿಕೆ ಮೇಲೆ ಮಾತನಾಡುತ್ತಾ, ಪರೋಕ್ಷವಾಗಿ ಪವನ್ ಕಲ್ಯಾಣ್ ಮತ್ತು ಮೆಗಾಸ್ಟಾರ್ ಕುಟುಂಬಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಆದರೆ ಅಲ್ಲು ಅರ್ಜುನ್, ಮೆಗಾ ಕುಟುಂಬದ ವಿರುದ್ಧ ಆಡಿರುವ ಮಾತುಗಳಿಗೆ ತೀವ್ರ ವಿರೋಧ ಸಹ ವ್ಯಕ್ತವಾಗಿದೆ.
ಅಲ್ಲು ಅರ್ಜುನ್, ಏನು ಹೇಳಿದರು ಎಂದು ತಿಳಿಯುವ ಮುನ್ನ, ವಿವಾದ ಪ್ರಾರಂಭವಾಗಿದ್ದು ಹೇಗೆ ಎಂಬುದು ಮೊದಲು ನೋಡಬೇಕು. ಪವನ್ ಕಲ್ಯಾಣ್, ಜನಸೇನಾ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದಾಗ ನಟ ಅಲ್ಲು ಅರ್ಜುನ್ ಜನಸೇನಾದ ಎದುರಾಳಿ ಪಕ್ಷವಾದ ವೈಸಿಪಿ ಪಕ್ಷದ ಅಭ್ಯರ್ಥಿಯೊಬ್ಬರ ಪರವಾಗಿ ಪ್ರಚಾರ ಮಾಡಿದ್ದರು. ಪವನ್ ಕಲ್ಯಾಣ್, ಕಳೆದ ಕೆಲ ವರ್ಷಗಳಿಂದಲೂ ವೈಸಿಪಿ ವಿರುದ್ಧ ಹೋರಾಟ ಮಾಡುತ್ತಾ ಬರುತ್ತಿದ್ದರೆ ಅಲ್ಲು ಅರ್ಜುನ್ ಅವರ ಪರವಾಗಿಯೇ ಪ್ರಚಾರಕ್ಕೆ ತೆರಳಿದ್ದು ತೀವ್ರ ಟೀಕಿಗೆ ಗುರಿಯಾಯ್ತು.
ಇದೀಗ ‘ಮಾರುತಿ ನಗರ ಸುಬ್ರಹ್ಮಣ್ಯಂ’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಬಂದಿದ್ದ ಅಲ್ಲು ಅರ್ಜುನ್, ‘ನನಗೆ ಬೇಕಾದವರು, ಗೆಳೆಯರ ಪರವಾಗಿ ನಾನು ನಿಂತೇ ನಿಲ್ಲುತ್ತೀನಿ. ನನಗೆ ಇಷ್ಟವಾದರೆ ನಾನು ಹೋಗಿಯೇ ಹೋಗುತ್ತೀನಿ, ನನ್ನ ಮನಸ್ಸಿಗೆ ಇಷ್ಟವಾದರೆ ನಾನು ಬಂದೇ ಬರುತ್ತೀನಿ’ ಎಂದಿದ್ದಾರೆ. ಆ ಮೂಲಕ ತನಗೆ ಪವನ್ ಕಲ್ಯಾಣ್ ಪರವಾಗಿ ಪ್ರಚಾರಕ್ಕೆ ಹೋಗಲು ಇಷ್ಟವಾಗಲಿಲ್ಲ ಅದಕ್ಕೆ ಹೋಗಲಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಇದೀಗ ಅಲ್ಲು ಅರ್ಜುನ್ರ ಈ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿದೆ.
ಇದನ್ನೂ ಓದಿ:‘ಕಾಂತಾರ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬರಲಿ ಎಂಬುದು ನನ್ನ ಆಶಯವೂ ಆಗಿತ್ತು’; ಅಲ್ಲು ಅರ್ಜುನ್
ಅದೇ ಕಾರ್ಯಕ್ರಮದ ಆರಂಭದಲ್ಲಿ ಮಾತನಾಡುತ್ತಾ, ‘ಎಲ್ಲರೂ ಹೀರೋ ಆದ ಬಳಿಕ ಅಭಿಮಾನಿಗಳನ್ನು ಸಂಪಾದಿಸುತ್ತಾರೆ, ಆದರೆ ನಾನು ಅಭಿಮಾನಿಗಳನ್ನು ನೋಡಿ ಅವರಿಗಾಗಿಯೇ ಹೀರೋ ಆದವನು’ ಎಂದಿದ್ದಾರೆ. ಅಲ್ಲು ಅರ್ಜುನ್ರ ಈ ಹೇಳಿಕೆ ಬಗ್ಗೆಯೂ ಟೀಕೆ ವ್ಯಕ್ತವಾಗಿದೆ. ಈ ಹಿಂದೆಲ್ಲ ಚಿರಂಜೀವಿ ಇಂದಾಗಿ ತಾವು ಹೀರೋ ಆಗಿದ್ದಾಗಿ ಹೇಳಿಕೊಂಡಿದ್ದ ಅಲ್ಲು ಅರ್ಜುನ್ ಈಗ ಹತ್ತಿದ ಏಣಿಯನ್ನು ಒಡೆಯುವ ಮಾತನಾಡುತ್ತಿದ್ದಾರೆ ಎಂದಿದ್ದಾರೆ.
‘ಮಾರುತಿ ನಗರ ಸುಬ್ರಹ್ಮಣ್ಯಂ’ ಸಿನಿಮಾವನ್ನು ‘ಪುಷ್ಪ’ ಸಿನಿಮಾದ ನಿರ್ದೇಶಕ ಸುಕುಮಾರ್ ಅವರ ಪತ್ನಿ ನಿರ್ಮಾಣ ಮಾಡಿದ್ದಾರೆ. ಹಾಗಾಗಿ ಆ ಸಿನಿಮಾದ ಪ್ರಚಾರಕ್ಕೆ ಅಲ್ಲು ಅರ್ಜುನ್ ಹೋಗಿದ್ದರು. ಈ ಸಿನಿಮಾದಲ್ಲಿ ಹಿರಿಯ ನಟ ರಾವ್ ರಮೇಶ್ ನಾಯಕರಾಗಿ ನಟಿಸಿದ್ದಾರೆ. ಇನ್ನು ‘ಪುಷ್ಪ’ ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಸದ್ಯಕ್ಕೆ ಚಾಲ್ತಿಯಲ್ಲಿದೆ. ಅಲ್ಲು ಅರ್ಜುನ್ ಅವರೇ ಹೇಳಿಕೊಂಡಿರುವಂತೆ ‘ಪುಷ್ಪ 2’ ಸಿನಿಮಾದ ಕ್ಲೈಮ್ಯಾಕ್ಸ್ ಅವರ ಜೀವನದ ಅತ್ಯಂತ ಕಠಿಣವಾದ ಶೂಟಿಂಗ್ ಷೆಡ್ಯೂಲ್ ಆಗಿತ್ತಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ