ಪವನ್ ಕಲ್ಯಾಣ್ ಸಿನಿಮಾಕ್ಕೆ ಮತ್ತೆ ಸಂಕಷ್ಟ, ಬಿಡುಗಡೆ ಮುಂದೂಡಿಕೆ ಸಾಧ್ಯತೆ

Tollywood movies: ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಐದು ವರ್ಷಗಳ ಬಳಿಕ ಕೊನೆಗೂ ಬಿಡುಗಡೆ ದಿನಾಂಕ ಘೋಷಿಸಿತ್ತು. ಆದರೆ ಈಗ ಹೊಸ ಸಮಸ್ಯೆ ಚಿತ್ರತಂಡಕ್ಕೆ ಬಂದೆರಗಿದೆ. ಅದು ಮಾತ್ರವೇ ಅಲ್ಲದೆ, ತೆಲುಗು ಚಿತ್ರರಂಗದ ಹಲವು ದೊಡ್ಡ ಸ್ಟಾರ್​ಗಳ ಸಿನಿಮಾಗಳಿಗೂ ಸಹ ಸಮಸ್ಯೆ ಎದುರಾಗಿದೆ.

ಪವನ್ ಕಲ್ಯಾಣ್ ಸಿನಿಮಾಕ್ಕೆ ಮತ್ತೆ ಸಂಕಷ್ಟ, ಬಿಡುಗಡೆ ಮುಂದೂಡಿಕೆ ಸಾಧ್ಯತೆ
Tollywood

Updated on: May 18, 2025 | 7:42 PM

ಪವನ್ ಕಲ್ಯಾಣ್ (Pawan Kalyan) ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾಕ್ಕೆ ಸಮಸ್ಯೆಯ ಮೇಲೆ ಸಮಸ್ಯೆಗಳು ಎದುರಾಗುತ್ತಲೇ ಇವೆ. ಅದೂ ಕಳೆದ ಐದು ವರ್ಷದಿಂದಲೂ. ‘ಹರಿ ಹರ ವೀರ ಮಲ್ಲು’ ಸಿನಿಮಾ ಘೋಷಣೆಯಾಗಿ ಐದು ವರ್ಷಗಳಾಯ್ತು. ಹಲವಾರು ಅಡೆ-ತಡೆಗಳ ಬಳಿಕ ಇತ್ತೀಚೆಗಷ್ಟೆ ಚಿತ್ರೀಕರಣ ಮುಗಿಸಲಾಗಿದ್ದು ಜೂನ್ 12 ರಂದು ಸಿನಿಮಾ ಬಿಡುಗಡೆ ಆಗಲಿದೆ ಎಂದು ಘೋಷಿಸಲಾಗಿತ್ತು. ಅಬ್ಬ ಕೊನೆಗೂ ಸಿನಿಮಾ ಬಿಡುಗಡೆ ಆಗುತ್ತಿದೆ ಎಂದುಕೊಳ್ಳುತ್ತಿರುವಾಗಲೇ ಮತ್ತೆ ಸಿನಿಮಾಕ್ಕೆ ಸಂಕಷ್ಟ ಎದುರಾಗಿದೆ.

ಜೂನ್ 1 ರಿಂದ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಚಿತ್ರಮಂದಿರಗಳು ಬಂದ್ ಆಗಲಿವೆ. ಸಿನಿಮಾ ಪ್ರದರ್ಶಕರು ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಿನಿಮಾ ಮಂದಿರಗಳನ್ನು ಬಂದ್ ಮಾಡುತ್ತಿದ್ದಾರೆ. ಬಂದ್ ಅನಿರ್ದಿಷ್ಟವಾಗಿದ್ದು ಬೇಡಿಕೆ ಈಡೇರುವವರೆಗೆ ಬಂದ್ ಮುಂದುವರೆಯಲಿದೆ ಎಂದಿದ್ದಾರೆ. ಜೂನ್ 12 ಕ್ಕೆ ಸಿನಿಮಾ ಬಿಡುಗಡೆ ಮಾಡಲು ಸಕಲ ತಯಾರಿ ನಡೆಸಿಕೊಂಡಿದ್ದ ‘ಹರಿ ಹರ ವೀರ ಮಲ್ಲು’ ಸಿನಿಮಾ ಈಗ ಮತ್ತೆ ಇಕ್ಕಟ್ಟಿಗೆ ಸಿಲುಕಿದೆ. ಸಿನಿಮಾ ಬಿಡುಗಡೆ ಮತ್ತೊಮ್ಮೆ ಮುಂದೆ ಹೋಗುವ ಸಾಧ್ಯತೆ ಇದೆ.

‘ಹರಿ ಹರ ವೀರ ಮಲ್ಲು’ ಮಾತ್ರವೇ ಅಲ್ಲದೆ ಕೆಲವು ದೊಡ್ಡ ಸ್ಟಾರ್ ನಟರ ಸಿನಿಮಾಗಳು ಮುಂದಿನ ತಿಂಗಳು ಬಿಡುಗಡೆ ಆಗಲಿದೆ. ಇದೇ ತಿಂಗಳ ಅಂತ್ಯಕ್ಕೆ ಅಂದರೆ ಮೇ 30ರಂದು ವಿಜಯ್ ದೇವರಕೊಂಡ ನಟನೆಯ ‘ಕಿಂಗ್​ಡಮ್’ ಸಿನಿಮಾ ತೆರೆಗೆ ಬರಲಿದೆ. ಅದರ ಬೆನ್ನಲ್ಲೆ ‘ಹರಿ ಹರ ವೀರ ಮಲ್ಲು’ ಅದಾದ ಬಳಿಕ ಜೂನ್ 20 ಕ್ಕೆ ಧನುಶ್, ನಾಗಾರ್ಜುನ, ರಶ್ಮಿಕಾ ನಟನೆಯ ‘ಕುಬೇರ’ ಸಿನಿಮಾ ಬಿಡುಗಡೆ ಆಗಲಿದೆ. ಅದರ ಬಳಿಕ ಜುಲೈ ಮೊದಲ ವಾರದಲ್ಲಿ ಚಿರಂಜೀವಿ ನಟನೆಯ ‘ವಿಶ್ವಂಭರ’ ಸಿನಿಮಾ ಬಿಡುಗಡೆ ಆಗಲಿದೆ. ‘ಕಣ್ಣಪ್ಪ’ ಸಿನಿಮಾ ಬಿಡುಗಡೆಯೂ ಹತ್ತಿರದಲ್ಲೇ ಇದೆ.

ಇದನ್ನೂ ಓದಿ:‘ಓಜಿ’ ಶೂಟಿಂಗ್ ಪ್ರಾರಂಭಿಸಿದ ಪವನ್ ಕಲ್ಯಾಣ್, ಸಾಕಷ್ಟು ಬದಲಾವಣೆ

ಇವುಗಳ ಜೊತೆಗೆ ಹಲವು ತೆಲುಗು ಸಿನಿಮಾಗಳು ಮುಂದಿನ ಎರಡು ತಿಂಗಳಲ್ಲಿ ಬಿಡುಗಡೆ ಆಗಲಿವೆ. ಆದರೆ ಈಗ ಹಠಾತ್ತನೆ ಸಿನಿಮಾ ಮಂದಿರಗಳನ್ನು ಬಂದ್ ಮಾಡುವ ಘೋಷಣೆ ಮಾಡಿದ್ದರಿಂದ ಸಿನಿಮಾಗಳಿಗೆಲ್ಲ ಆತಂಕ ಎದುರಾಗಿದೆ. ಐಪಿಎಲ್ ಮುಗಿದ ಮೇಲೆ ಸಿನಿಮಾ ಬಿಡುಗಡೆ ಮಾಡಲು ಕೆಲವು ಸಿನಿಮಾಗಳು ಕಾದು ಕುಳಿತಿದ್ದವು. ಆದರೆ ಈಗ ಚಿತ್ರಮಂದಿರ ಮಾಲೀಕರ ಘೋಷಣೆಯಿಂದ ಚಿತ್ರತಂಡಗಳು ಆಘಾತಕ್ಕೆ ಒಳಗಾಗಿವೆ.

ಆಂಧ್ರ ಮತ್ತು ತೆಲಂಗಾಣ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಬಾಡಿಗೆ ಆಧಾರದಲ್ಲಿ ನಡೆಯುತ್ತಿದ್ದು, ಇನ್ನು ಮುಂದೆ ಮಲ್ಟಿಪ್ಲೆಕ್ಸ್ ರೀತಿ ಲಾಭ ಹಂಚಿಕೆ ಆಧಾರದಲ್ಲಿ ಸಿನಿಮಾ ಪ್ರದರ್ಶಿಸುವ ಒತ್ತಾಯವನ್ನು ಚಿತ್ರಮಂದಿರಗಳ ಮಾಲೀಕರು ಮಾಡಿದ್ದಾರೆ. ಆದರೆ ಇದನ್ನು ಸಿನಿಮಾ ನಿರ್ಮಾಪಕರುಗಳು ಒಪ್ಪಿಲ್ಲ. ಹಾಗಾಗಿ ಪ್ರತಿಭಟನೆಗೆ ಕರೆ ನೀಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ