ಬುರ್ಜ್ ಖಲೀಫಾ ಮೇಲೆ ಪವನ್ ಕಲ್ಯಾಣ್, ತೆಲುಗಿಗೆ ಇದೇ ಮೊದಲು
Pawan Kalyan: ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಶುರುವಾಗಿ ಐದು ವರ್ಷಗಳ ಬಳಿಕ ಕೊನೆಗೂ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರವನ್ನು ಅದ್ದೂರಿಯಾಗಿ ಮಾಡಲು ನಿರ್ಧರಿಸಲಾಗಿದ್ದು, ಸಿನಿಮಾದ ಟೀಸರ್ ಅನ್ನು ಬುರ್ಜ್ ಖಲೀಫಾ ಮೇಲೆ ಪ್ರದರ್ಶಿಸಲಾಗುತ್ತಿದೆ. ತೆಲುಗು ಸಿನಿಮಾದ ಟೀಸರ್ ಬುರ್ಜ್ ಖಲೀಫಾ ಮೇಲೆ ಪ್ರದರ್ಶನಗೊಳ್ಳುತ್ತಿರುವುದು ಇದೇ ಮೊದಲು.

ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ (Pawan Kalyan) ಚಿತ್ರರಂಗಕ್ಕೆ ಮರಳಿದ್ದು ಅವರ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಕೊನೆಗೂ ಬಿಡುಗಡೆ ಆಗುತ್ತಿದೆ. ಹಲವು ಅಡೆ-ತಡೆಗಳನ್ನು ಎದುರಿಸಿದ ಬಳಿಕ ‘ಹರಿ ಹರ ವೀರ ಮಲ್ಲು’ ಸಿನಿಮಾ ಜೂನ್ 12 ರಂದು ಬಿಡುಗಡೆ ಆಗುತ್ತಿದ್ದು, ಸಿನಿಮಾದ ಪ್ರಚಾರವನ್ನು ಬಲು ಜೋರಾಗಿ ಮಾಡಲು ಚಿತ್ರತಂಡ ನಿರ್ಧಾರ ಮಾಡಿದೆ. ಭಿನ್ನವಾಗಿ ಮತ್ತು ಅದ್ಧೂರಿಯಾಗಿ ಇರಲಿದೆ ‘ಹರಿ ಹರ ವೀರ ಮಲ್ಲು’ ಸಿನಿಮಾದ ಪ್ರಚಾರ.
‘ಹರಿ ಹರ ವೀರ ಮಲ್ಲು’ ಸಿನಿಮಾದ ಟ್ರೈಲರ್ ಅನ್ನು ದುಬೈನ ಬುರ್ಜ್ ಖಲೀಫಾ ಮೇಲೆ ಬಿಡುಗಡೆ ಮಾಡಲಾಗುತ್ತಿದೆ. ತೆಲುಗಿನ ಯಾವುದೇ ಸಿನಿಮಾದ ಟೀಸರ್ ಬುರ್ಜ್ ಖಲೀಫಾ ಮೇಲೆ ಪ್ರದರ್ಶಿತಗೊಂಡಿರಲಿಲ್ಲ. ‘ಹರಿ ಹರ ವೀರ ಮಲ್ಲು’ ಸಿನಿಮಾ ಮೊದಲು ಎನಿಸಿಕೊಳ್ಳಲಿದೆ. ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ಟೀಸರ್ ಅನ್ನು ಬುರ್ಜ್ ಖಲೀಫಾ ಮೇಲೆ ಪ್ರದರ್ಶಿಸಲಾಗಿತ್ತು. ಅದೇ ದಾರಿಯನ್ನು ಈಗ ಪವನ್ ಕಲ್ಯಾಣ್ ಸಹ ಹಿಡಿದಿದ್ದಾರೆ.
ಆಂಧ್ರ ಡಿಸಿಎಂ ಆದ ಬಳಿಕ ಪವನ್ ರಾಜಕೀಯದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿಬಿಟ್ಟಿದ್ದರು. ಹೀಗಾಗಿ ಸಿನಿಮಾಗಳಿಗೆ ಬ್ರೇಕ್ ಕೊಟ್ಟಿದ್ದರು. ಆದರೆ ‘ಹರಿ ಹರ ವೀರ ಮಲ್ಲು’ ಸಿನಿಮಾ ಚಿತ್ರೀಕರಣಕ್ಕೆ ತುಸು ಸಮಯ ನಿಗದಿಪಡಿಸಿ, ಸಿನಿಮಾ ಪೂರ್ತಿ ಮಾಡಿದ್ದಾರೆ. ಇದೀಗ ‘ಹರಿ ಹರ ವೀರ ಮಲ್ಲು’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಸಿನಿಪ್ರಿಯರಿಗೆ ಇಷ್ಟವಾಗಿವೆ. ಬಿಗ್ ಬಜೆಟ್ ತಯಾರಾಗಿರುವ ಹರಿ ಹರ ವೀರ ಮಲ್ಲು ಸಿನಿಮಾ ಜೂನ್ 12 ರಂದು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ:ಪವನ್ ಕಲ್ಯಾಣ್ ಸಿನಿಮಾದಲ್ಲಿ ಜಪಾನಿನ ಸೂಪರ್ ಸ್ಟಾರ್ ನಟ
17ನೇ ಶತಮಾನದಲ್ಲಿ ಮೊಘಲ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ನಾಯಕನ ಪಾತ್ರದಲ್ಲಿ ಪವನ್ ಕಲ್ಯಾಣ್ ಮಿಂಚಿದ್ದಾರೆ. ಜ್ಯೋತಿ ಕೃಷ್ಣ ಮತ್ತು ಕ್ರಿಶ್ ಜಗರ್ಲಮುಡಿ ನಿರ್ದೇಶನ ಮಾಡಿದ್ದಾರೆ. ಬಾಬಿ ಡಿಯೋಲ್ ವಿಲನ್, ನಿಧಿ ಅಗರ್ವಾಲ್, ನರ್ಗಿಸ್ ಫಕ್ರಿ ಮತ್ತು ನೋರಾ ಫತೇಹಿ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಮೆಗಾ ಸೂರ್ಯ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಎ. ದಯಾಕರ್ ರಾವ್ ಈ ಚಿತ್ರವನ್ನು ನಿರ್ಮಿಸಿದ್ದು, ಎ.ಎಂ. ರತ್ನಂ ಪ್ರಸ್ತುತಪಡಿಸುತ್ತಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನ, ಮನೋಜ್ ಪರಮಹಂಸ ಛಾಯಾಗ್ರಹಣ ಚಿತ್ರಕ್ಕಿದೆ.
ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಆಯೋಜನೆ ಮಾಡಲು ಚಿತ್ರತಂಡ ಮುಂದಾಗಿದ್ದು ಈ ಕಾರ್ಯಕ್ರಮಕ್ಕೆ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಸಹ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




