ಹತ್ಯಾಯತ್ನ ಆರೋಪ, ನಟಿಯ ಬಂಧನ, ನಟರ ವಿರುದ್ಧವೂ ದೂರು
Nusraat Faria: ಕೊಲೆ ಯತ್ನದ ಆರೋಪದ ಮೇಲೆ ಖ್ಯಾತ ನಟಿ ನುಸ್ರತ್ ಫಾರಿಯಾ ಅವರನ್ನು ಢಾಕಾದ ಹಜ್ರತ್ ಶಾಜಲಾಲ್ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ನುಸ್ರತ್ ಫಾರಿಯಾ, ಥಾಯ್ಲೆಂಡ್ಗೆ ಹೋಗಲು ಯತ್ನಿಸುತ್ತಿದ್ದಾಗ ಈ ಬಂಧನ ಆಗಿದ್ದು, ನಟಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.

ಬಾಂಗ್ಲಾದೇಶದ ಖ್ಯಾತ ನಟಿ ನುಸ್ರತ್ ಫಾರಿಯಾ (Nusrath Faria) ಅವರನ್ನು ಪೊಲೀಸರು ಬಂಧಿಸಿದ್ದಾರೆ. ನಟಿಯ ವಿರುದ್ಧ ವಿದ್ಯಾರ್ಥಿಯೊಬ್ಬನ ಹತ್ಯೆಗೆ ಯತ್ನಿಸಿದ ಆರೋಪ ಎದುರಾಗಿದೆ. ನುಸ್ರತ್ ಫಾರಿಯಾ ಅವರನ್ನು ಢಾಕಾದ ಹಜ್ರತ್ ಶಾಜಲಾಲ್ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ನುಸ್ರತ್ ಫಾರಿಯಾ, ಥಾಯ್ಲೆಂಡ್ಗೆ ಹೋಗಲು ಯತ್ನಿಸುತ್ತಿದ್ದಾಗ ಈ ಬಂಧನ ಆಗಿದ್ದು, ನಟಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ನಟಿಯ ವಿರುದ್ಧ ಈ ಹಿಂದೆಯೇ ಬಂಧನದ ವಾರೆಂಟ್ ಹೊರಡಿಸಲಾಗಿತ್ತಂತೆ. ವಾರೆಂಟ್ ಇದ್ದಿದ್ದ ಕಾರಣಕ್ಕೆ ನಟಿ ದೇಶ ಬಿಟ್ಟು ಹೊರಡುವ ಯತ್ನದಲ್ಲಿದ್ದರು ಎನ್ನಲಾಗಿದೆ.
ಕಳೆದ ವರ್ಷ ಬಾಂಗ್ಲಾದೇಶದಲ್ಲಿ ಭಾರಿ ಜನಾಂದೋಲನ ನಡೆದಿತ್ತು. ಸರ್ಕಾರದ ವಿರುದ್ಧ ನಡೆದ ಈ ಹೋರಾಟದಲ್ಲಿ ವಿದ್ಯಾರ್ಥಿಗಳು ಮುನ್ನೆಲೆಯಲ್ಲಿದ್ದರು. ಈ ಹೋರಾಟದ ಸಂದರ್ಭದಲ್ಲಿ ನಟಿ ನುಸ್ರತ್ ಫಾರಿಯಾ ಮತ್ತು ಇನ್ನೂ ಕೆಲವು ನಟರುಗಳು ವಿದ್ಯಾರ್ಥಿಯೊಬ್ಬನನ್ನು ಹತ್ಯೆ ಮಾಡಲು ಯತ್ನಿಸಿದ್ದರು ಎನ್ನಲಾಗಿದೆ. ಇದೇ ಪ್ರಕರಣದಲ್ಲಿ ನಟಿ ನುಸ್ರತ್ ಅನ್ನು ಬಂಧಿಸಲಾಗಿದ್ದು, ಇನ್ನೂ 17 ಮಂದಿ ವಿವಿಧ ನಟರ ವಿರುದ್ಧ ಪ್ರಕರಣ ದಾಖಲಾಗಿದೆ.
ಕಳೆದ ವರ್ಷ ಜುಲೈ ತಿಂಗಳಲ್ಲಿ ಬಾಂಗ್ಲಾದೇಶದಾದ್ಯಂತ ಸರ್ಕಾರದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುವಾಗ ಢಾಕಾದ ವಾತ್ರಾ ಏರಿಯಾನಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆಯನ್ನು ಮಾಡಲಾಗಿದ್ದು, ಆತನ ಹತ್ಯೆಗೆ ಯತ್ನಿಸಲಾಗಿತ್ತು ಎಂದು ದೂರು ದಾಖಲಾಗಿತ್ತು. ಆ ಪ್ರಕರಣ ಕುರಿತು ಇತ್ತೀಚೆಗಷ್ಟೆ ಢಾಕಾ ನ್ಯಾಯಾಲಯವು ನಟಿ ಹಾಗೂ ಇತರೆ ಕೆಲವು ನಟರ ವಿರುದ್ಧ ತನಿಖೆಗೆ ಅನುಮತಿ ನೀಡಿತ್ತು, ಅದರ ಬೆನ್ನಲ್ಲೆ ನಟಿ ನುಸ್ರತ್ ದೇಶಬಿಟ್ಟು ಹೋಗುವ ಯತ್ನದಲ್ಲಿದ್ದಾಗ ಅವರ ಬಂಧನ ಆಗಿದೆ.
ಇದನ್ನೂ ಓದಿ:ಅಮಾನುಷ ‘ಗಲ್ವಾನ್ ಸಂಘರ್ಷ’ ಬಗ್ಗೆ ಸಿನಿಮಾ, ಸಲ್ಮಾನ್ ಖಾನ್ ನಾಯಕ
ನುಸ್ರತ್, ಬಾಂಗ್ಲಾದೇಶದ ಜನಪ್ರಿಯ ಸಿನಿಮಾ ನಟಿ. ರೇಡಿಯೋ ಜಾಕಿ ಆಗಿ ವೃತ್ತಿ ಆರಂಭಿಸಿದ ಸುನ್ರತ್ ಆ ನಂತರ ಟಿವಿ ಆ ಬಳಿಕ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ‘ಆಶಿಖಿ’, ‘ಹೀರೋ 420’, ‘ಬಾದ್ಶಾ: ದಿ ಡಾನ್’, ‘ಪ್ರೇಮಿ ಓ ಪ್ರೇಮಿ’, ‘ಬಾಸ್ 2’ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. 2023 ರಲ್ಲಿ ಬಿಡುಗಡೆ ಆದ ‘ಮುಜಿಬ್: ಮೇಕಿಂಗ್ ಆಫ್ ಎ ನೇಷನ್’ ಸಿನಿಮಾನಲ್ಲಿ ಬಾಂಗ್ಲಾದ ಮಾಜಿ ಪ್ರಧಾನಿ ಶೇಕ್ ಹಸೀನಾ ಅವರ ಪಾತ್ರದಲ್ಲಿ ನಟಿಸಿದ್ದರು. ಈ ಪಾತ್ರದಿಂದ ಅವರಿಗೆ ಹೆಚ್ಚಿನ ಜನಪ್ರಿಯತೆ ಸಿಕ್ಕಿತ್ತು. ‘ಮುಜಿಬ್: ಮೇಕಿಂಗ್ ಆಫ್ ಎ ನೇಷನ್’ ಸಿನಿಮಾ ಅನ್ನು ಭಾರತ ಮತ್ತು ಬಾಂಗ್ಲಾ ಜಂಟಿಯಾಗಿ ನಿರ್ಮಿಸಿತ್ತು, ಸಿನಿಮಾವನ್ನು ಭಾರತದ ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ನಿರ್ದೇಶನ ಮಾಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




