
ಪವನ್ ಕಲ್ಯಾಣ್ (Pawan Kalyan) ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಬರೋಬ್ಬರಿ ಐದು ವರ್ಷಗಳ ಬಳಿಕ ಹಲವು ಅಡೆ-ತಡೆಗಳನ್ನು ದಾಟಿ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ‘ಹರಿ ಹರ ವೀರ ಮಲ್ಲು’ ಸಿನಿಮಾ ಜೂನ್ 12 ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಪವನ್ ಕಲ್ಯಾಣ್, ಚುನಾವಣೆಗೆ ಹೋಗುವ ಮೊದಲು ಇನ್ನೂ ಎರಡು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅದರಲ್ಲಿ ‘ಓಜಿ’ ಸಿನಿಮಾ ಸಹ ಒಂದು. ಇದೀಗ ‘ಓಜಿ’ ಸಿನಿಮಾದ ಬಿಡುಗಡೆಗೂ ದಿನಾಂಕ ನಿಗದಿ ಮಾಡಲಾಗಿದೆ.
ಪವನ್ ಕಲ್ಯಾಣ್ ನಟನೆಯ ‘ಓಜಿ’ ಸಿನಿಮಾ ಸೆಪ್ಟೆಂಬರ್ 25ಕ್ಕೆ ಬಿಡುಗಡೆ ಆಗಲಿದೆ. ಈ ಸಿನಿಮಾ ಸಹ ಪ್ರಾರಂಭವಾಗಿ ಎರಡು ವರ್ಷಗಳಿಗೂ ಹೆಚ್ಚು ಸಮಯವಾಗಿದೆ. ಪವನ್ ಕಲ್ಯಾಣ್, ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮುಂಚೆ ಈ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ್ದರು. ಆದರೆ ಸಿನಿಮಾದ ಕೆಲವು ಭಾಗಗಳ ಚಿತ್ರೀಕರಣವನ್ನಷ್ಟೆ ಪವನ್ ಮುಗಿಸಿದ್ದರು.
ಇದೀಗ ‘ಹರಿ ಹರ ವೀರ ಮಲ್ಲು’ ಸಿನಿಮಾದ ಚಿತ್ರೀಕರಣ ಮುಗಿಸಿರುವ ಪವನ್ ಕಲ್ಯಾಣ್, ಇನ್ನೆರಡು ತಿಂಗಳು ಬ್ರೇಕ್ ತೆಗೆದುಕೊಂಡು ಸುಮಾರು ಒಂದು ತಿಂಗಳ ಡೇಟ್ಸ್ ಅನ್ನು ‘ಓಜಿ’ ಸಿನಿಮಾಕ್ಕೆ ನೀಡಲಿದ್ದಾರಂತೆ. ಒಂದೇ ತಿಂಗಳಲ್ಲಿ ಸಿನಿಮಾದ ಚಿತ್ರೀಕರಣ ಮುಗಿಸಿಕೊಳ್ಳಲಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಸೆಪ್ಟೆಂಬರ್ ತಿಂಗಳಲ್ಲಿ ವಿಶ್ವದಾದ್ಯಂತ ಬಿಡುಗಡೆ ಮಾಡಲಿದೆ.
ಇದನ್ನೂ ಓದಿ:ಪವನ್ ಕಲ್ಯಾಣ್ ಎಚ್ಚರಿಕೆಗೆ ಬೆದರಿದ ಅಲ್ಲು ಅರವಿಂದ್, ತುರ್ತು ಸುದ್ದಿಗೋಷ್ಠಿ
‘ಓಜಿ’ ಸಿನಿಮಾವು ಅಂಡವರ್ಡ್ ಕತೆಯನ್ನು ಒಳಗೊಂಡಿದೆ. ಸಿನಿಮಾದ ಚಿತ್ರೀಕರಣ ಹೈದರಾಬಾದ್, ಬೆಂಗಳೂರು, ಕಲ್ಕತ್ತಗಳಲ್ಲಿ ಮಾಡಲು ಚಿತ್ರತಂಡ ಯೋಜಿಸಿತ್ತು, ಆದರೆ ಈಗ ಯೋಜನೆಗಳು ಬದಲಾಗಿದ್ದು ಸಂಪೂರ್ಣ ಚಿತ್ರೀಕರಣವನ್ನು ಸೆಟ್ಗಳಲ್ಲಿಯೇ ಮಾಡಲು ನಿರ್ಧರಿಸಿದೆ. ಪವನ್ ಕಲ್ಯಾಣ್ ಇಲ್ಲದ ದೃಶ್ಯಗಳನ್ನಷ್ಟೆ ಹೊರಾಂಗಣಗಳಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ.
‘ಓಜಿ’ ಸಿನಿಮಾ ಮೂಲಕ ಪವನ್ ಕಲ್ಯಾಣ್ರ ಪುತ್ರ ಅಕಿರ ನಂದ ಸಹ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ‘ಓಜಿ’ ಸಿನಿಮಾನಲ್ಲಿ ಪವನ್ ಅವರ ಯೌವ್ವನದ ಪಾತ್ರವನ್ನು ಅಕಿರಾ ನಂದ ನಿರ್ವಹಿಸುತ್ತಿದ್ದಾರೆ. ಆಂಧ್ರ ವಿಧಾನಸಭೆ ಪ್ರಚಾರದ ಸಂದರ್ಭದಲ್ಲಿಯೂ ‘ಓಜಿ’ ಸಿನಿಮಾ ಬಗ್ಗೆ ಮಾತನಾಡಿದ್ದ ಪವನ್ ಕಲ್ಯಾಣ್, ‘ಆ ಸಿನಿಮಾ ಬಹಳ ಚೆನ್ನಾಗಿದೆ, ಎಲ್ಲರೂ ನೋಡಿ’ ಎಂದಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ