
ಮೋಹನ್‌ಲಾಲ್ (Mohanlal) ನಟನೆಯ ‘ದೃಶ್ಯಂ’ ಸಿನಿಮಾ ಸರಣಿಯ ಮೂರನೇ ಸಿನಿಮಾ ‘ದೃಶ್ಯಂ 3’ ಬಿಡುಗಡೆಗೆ ಬಹುತೇಕ ರೆಡಿಯಾಗಿದೆ. ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಸರಣಿ ಆಗಿರುವ ‘ದೃಶ್ಯಂ’ನ ಮೂರನೇ ಭಾಗವನ್ನು ಈ ಸರಣಿಯ ಕೊನೆಯ ಭಾಗ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಸಿನಿಮಾಕ್ಕೆ ಭಾರಿ ಬೇಡಿಕೆ ಇದೆ. ‘ದೃಶ್ಯಂ 2’ ಸಿನಿಮಾ ಕೋವಿಡ್ ಸಮಯದಲ್ಲಿ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗಿತ್ತು. ಈಗ ‘ದೃಶ್ಯಂ 3’ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಆದರೆ ಬಿಡುಗಡೆಗೆ ಮೊದಲೇ ಸಿನಿಮಾಕ್ಕೆ ಕೆಲವು ಕಾನೂನು ಸಂಕಷ್ಟಗಳು ಎದುರಾಗಿವೆ. ಆದರೂ ಸಹ ಹಲವು ಹೂಡಿಕೆದಾರರು ಸಿನಿಮಾದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ.
ಜಯಂತಿಲಾಲ್ ಗಡ ಅವರ ನೇತೃತ್ವದ ಪೆನ್ ಸ್ಟುಡಿಯೋಸ್ ನಿರ್ಮಾಣ ಸಂಸ್ಥೆಯು ಮೋಹನ್‌ಲಾಲ್ ಅವರ ‘ದೃಶ್ಯಂ 3’ ಚಿತ್ರದ ಮೇಲೆ 100 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ಮುಂದಾಗಿದೆ. ಈ ಹಿಂದೆ ‘ದೃಶ್ಯಂ 2’ ಚಿತ್ರವನ್ನು ನೇರವಾಗಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರಿಂದ ಚಿತ್ರಮಂದಿರಗಳ ಮಾಲೀಕರು ಅಸಮಾಧಾನಗೊಂಡಿದ್ದರು. ಈಗ ಮೂರನೇ ಭಾಗದ ಹಕ್ಕುಗಳ ವಿಚಾರವಾಗಿ ಅಮೆಜಾನ್ ಮತ್ತು ನಿರ್ಮಾಣ ಸಂಸ್ಥೆಯ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಅಥವಾ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ. ಇದರ ನಡುವೆಯೂ ಸಹ ಪೆನ್ ಸ್ಟುಡಿಯೋಸ್ ಧೈರ್ಯ ತೋರಿದೆ.
ಇದನ್ನೂ ಓದಿ;ಮೋಹನ್‌ಲಾಲ್ ಚಿತ್ರಕ್ಕೆ ಶಾಕ್; ಕೇವಲ 3.5 ಲಕ್ಷ ಗಳಿಸಿದ ಸಿನಿಮಾ
ಈ ಚಿತ್ರವನ್ನು ಮಲಯಾಳಂ ಮಾತ್ರವಲ್ಲದೆ, ಹಿಂದಿ ಸೇರಿದಂತೆ ಇತರ ಭಾಷೆಗಳಲ್ಲೂ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗಿದೆ. ಪೆನ್ ಸ್ಟುಡಿಯೋಸ್ ಈ ಹಿಂದೆ ‘RRR’ ನಂತಹ ದೊಡ್ಡ ಚಿತ್ರಗಳ ವಿತರಣೆಯಲ್ಲಿ ಭಾಗಿಯಾಗಿದ್ದರಿಂದ, ‘ದೃಶ್ಯಂ 3’ ಗೆ ದೊಡ್ಡ ಮಾರುಕಟ್ಟೆ ಸಿಗುವ ನಿರೀಕ್ಷೆಯಿದೆ. ‘ದೃಶ್ಯಂ 3’ ಸಿನಿಮಾದ ವಿಶ್ವದಾದ್ಯಂತ ವಿತರಣೆ ಹಕ್ಕಿಗಾಗಿಯೇ ಪೆನ್ ಸ್ಟುಡಿಯೋಸ್ 100 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ.
‘ದೃಶ್ಯಂ’ ಸರಣಿಯ ಮೊದಲೆರಡು ಸಿನಿಮಾ ನಿರ್ದೇಶಿಸಿದ್ದ ಜೀತು ಜೋಸೆಫ್ ಅವರೇ ಈ ಭಾಗವನ್ನೂ ನಿರ್ದೇಶಿಸುತ್ತಿದ್ದಾರೆ. ಆಶೀರ್ವಾದ್ ಸಿನಿಮಾಸ್ ಅಡಿಯಲ್ಲಿ ಆಂಟೋನಿ ಪೆರುಂಬವೂರ್ ಈ ಸಿನಿಮಾದ ನಿರ್ಮಾಪಕ. 2013 ರಲ್ಲಿ ಬಿಡುಗಡೆ ಆಗಿದ್ದ ಮೊದಲ ‘ದೃಶ್ಯಂ’ ಸಿನಿಮಾ ಹಲವು ದಾಖಲೆಗಳನ್ನು ಬರೆದಿತ್ತು. ಅತಿ ಹೆಚ್ಚು ಭಾಷೆಗೆ ಅಧಿಕೃತವಾಗಿ ರೀಮೇಕ್ ಆದ ಭಾರತೀಯ ಸಿನಿಮಾ ಎನಿಸಿಕೊಂಡಿತು. ‘ದೃಶ್ಯಂ 2’ ಸಿನಿಮಾ 2021 ರಲ್ಲಿ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗಿತ್ತು. ಈಗ ‘ದೃಶ್ಯಂ 3’ ಸಿನಿಮಾ ಮೇ 21 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ‘ದೃಶ್ಯಂ 3’ ಈ ‘ದೃಶ್ಯಂ’ ಸರಣಿಯ ಕೊನೆಯ ಸಿನಿಮಾ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ