ವಿಜಯ್ ದೇವರಕೊಂಡ ಸಿನಿಮಾ ಜೊತೆ ರಶ್ಮಿಕಾ ಸಿನಿಮಾ ಹೋಲಿಸುತ್ತಿರುವುದು ಏಕೆ?

Rashmika Mandanna: ರಶ್ಮಿಕಾ ಮಂದಣ್ಣ ನಟನೆಯ ‘ದಿ ಗರ್ಲ್​​ಫ್ರೆಂಡ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಟ್ರೈಲರ್, ಟೀಸರ್, ಹಾಡುಗಳನ್ನು ನೋಡಿದ ಜನ ‘ದಿ ಗರ್ಲ್​​ಫ್ರೆಂಡ್’ ಸಿನಿಮಾವನ್ನು ವಿಜಯ್ ದೇವಕರೊಂಡ ನಟನೆಯ ‘ಅರ್ಜುನ್ ರೆಡ್ಡಿ’ ಸಿನಿಮಾದೊಂದಿಗೆ ಹೋಲಿಕೆ ಮಾಡುತ್ತಿದ್ದಾರೆ. ಅಷ್ಟಕ್ಕೂ ಎರಡೂ ಸಿನಿಮಾಗಳ ನಡುವಿನ ಸಾಮ್ಯತೆ ಏನು?

ವಿಜಯ್ ದೇವರಕೊಂಡ ಸಿನಿಮಾ ಜೊತೆ ರಶ್ಮಿಕಾ ಸಿನಿಮಾ ಹೋಲಿಸುತ್ತಿರುವುದು ಏಕೆ?
Rashmika Vijay

Updated on: Nov 05, 2025 | 5:32 PM

ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಹೊಸ ಸಿನಿಮಾ ‘ಗರ್ಲ್​ಫ್ರೆಂಡ್’ ಬಿಡುಗಡೆಗೆ ಇನ್ನೆರಡು ದಿನಗಳಷ್ಟೆ ಬಾಕಿ ಇದೆ. ಇದು ರಶ್ಮಿಕಾ ಮಂದಣ್ಣ ನಟಿಸುತ್ತಿರುವ ಮೊಟ್ಟ ಮೊದಲ ಮಹಿಳಾ ಪ್ರಧಾನ ಸಿನಿಮಾ ಆಗಿರಲಿದೆ. ಸಿನಿಮಾನಲ್ಲಿ ಕನ್ನಡಿಗ ದೀಕ್ಷಿತ್ ಶೆಟ್ಟಿ ನಾಯಕ. ರೊಮ್ಯಾಂಟಿಕ್ ಕತೆಯೇ ಆದರೂ ಸಹ ಪ್ರೀತಿಯನ್ನು ಯುವತಿಯ ದೃಷ್ಟಿಕೋನದಿಂದ ನೋಡುವ ಪ್ರಯತ್ನ ಈ ಸಿನಿಮಾನಲ್ಲಿದೆ. ಆದರೆ ಸಿನಿಮಾದ ಟ್ರೈಲರ್, ಹಾಡುಗಳನ್ನು ನೋಡಿದವರು ‘ಗರ್ಲ್​ಫ್ರೆಂಡ್’ ಸಿನಿಮಾವನ್ನು ವಿಜಯ್ ದೇವರಕೊಂಡ ನಟನೆಯ ‘ಅರ್ಜುನ್ ರೆಡ್ಡಿ’ ಸಿನಿಮಾದ ಜೊತೆಗೆ ಹೋಲಿಸುತ್ತಿದ್ದಾರೆ.

ವಿಜಯ್ ದೇವರಕೊಂಡ ನಟನೆಯ ‘ಅರ್ಜುನ್ ರೆಡ್ಡಿ’ ಸಿನಿಮಾ ಭಿನ್ನ ಪ್ರೇಮಕತೆಯನ್ನು ಹೊಂದಿತ್ತು. ಆ ಸಿನಿಮಾನಲ್ಲಿ ಪ್ರೀತಿ ಮತ್ತು ಬ್ರೇಕ್​ ಅಪ್​​ನ ಪರಾಕಾಷ್ಠೆಯನ್ನು ತೋರಿಸಲಾಗಿತ್ತು. ನಾಯಕನ ಅತಿಯಾದ ಪೊಸೆಸಿವ್​​ನೆಸ್, ನಾಯಕಿಯೆಡೆಗಿನ ದೈಹಿಕ ಸೆಳೆತ ಇನ್ನೂ ಹಲವು ವಿಷಯಗಳನ್ನು ಸಿನಿಮಾನಲ್ಲಿ ತೋರಿಸಲಾಗಿತ್ತು. ಆದರೆ ‘ಗರ್ಲ್​​ಫ್ರೆಂಡ್’ ಸಿನಿಮಾಕ್ಕೆ ಅದನ್ನು ಹೋಲಿಕೆ ಮಾಡಲಾಗುತ್ತಿದೆ. ಆದರೆ ಇದಕ್ಕೂ ಕಾರಣ ಇದೆ.

‘ಅರ್ಜುನ್ ರೆಡ್ಡಿ’ ಬ್ಲಾಕ್ ಬಸ್ಟರ್ ಸಿನಿಮಾ ಆಗಿದ್ದರೂ ಸಹ ಸಿನಿಮಾಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಪ್ರೀತಿಯ ಸೌಮ್ಯತೆಯ ಹೊರತಾಗಿ ವೈಯಲೆಂಟ್ ಆಗಿ, ನಾಯಕನ ದೃಷ್ಟಿಕೋನದಿಂದ ಏಕಪಕ್ಷೀಯವಾಗಿ ತೋರಿಸಲಾಗಿದೆ ಹಾಗೂ ‘ಅರ್ಜುನ್ ರೆಡ್ಡಿ’ ಸಿನಿಮಾ ಯುವಕರ ದಾರಿ ತಪ್ಪಿಸುವಂತಿದೆ ಎನ್ನಲಾಗಿತ್ತು. ಆದರೆ ‘ಗರ್ಲ್​​ಫ್ರೆಂಡ್’ ಸಿನಿಮಾ ಪ್ರೀತಿಯ ನಿಜ ಅರ್ಥವನ್ನು, ವಿಶೇಷವಾಗಿ ರಿಲೇಷನ್​​ಶಿಪ್​​​ನಲ್ಲಿ ಯುವಕನಷ್ಟೆ ಯುವತಿ ಪಾಲಿದೆ, ಸ್ವಾತಂತ್ರ್ಯವಿದೆ ಎಂಬುದನ್ನು ತೋರಿಸುವ ಪ್ರಯತ್ನ ಆಗಿದ್ದು, ಇದೇ ಕಾರಣಕ್ಕೆ ‘ಅರ್ಜುನ್ ರೆಡ್ಡಿ’ ಜೊತೆ ಹೋಲಿಕೆ ಮಾಡಲಾಗುತ್ತಿದೆ. ಕೆಲವರಂತೂ ‘ಗರ್ಲ್​​ಫ್ರೆಂಡ್’ ಸಿನಿಮಾ, ‘ಅರ್ಜುನ್ ರೆಡ್ಡಿ’ ಸಿನಿಮಾಕ್ಕೆ ಉತ್ತರ ಎನ್ನುತ್ತಿದ್ದಾರೆ.

ಇದನ್ನೂ ಓದಿ:ಕನ್ನಡಿಗರ ಬಗ್ಗೆ ರಶ್ಮಿಕಾ ಮಂದಣ್ಣ ಕಾಳಜಿ, ನೀಡಿದರು ಸಲಹೆ

ಇದೀಗ ಈ ಬಗ್ಗೆ ‘ಗರ್ಲ್​ಫ್ರೆಂಡ್’ ಸಿನಿಮಾದ ನಿರ್ದೇಶಕ ರಾಹುಲ್ ಸುಬ್ರಹ್ಮಣ್ಯಂ ಮಾತನಾಡಿದ್ದು, ‘ಅರ್ಜುನ್ ರೆಡ್ಡಿ’ ಸಿನಿಮಾದೊಂದಿಗೆ ನಮ್ಮ ಸಿನಿಮಾದ ಹೋಲಿಕೆ ಸರಿಯಿಲ್ಲ. ‘ಅರ್ಜುನ್ ರೆಡ್ಡಿ’ ಕಲ್ಟ್ ಸಿನಿಮಾ. ನಮ್ಮದು ಭಿನ್ನ ರೀತಿಯ ಸಿನಿಮಾ. ಎರಡೂ ಸಿನಿಮಾಗಳ ಕತೆಯಲ್ಲಿ ಎಲ್ಲಿಯೂ ಸಾಮ್ಯತೆ ಇಲ್ಲ. ಆ ಸಿನಿಮಾಕ್ಕೆ ನಮ್ಮ ಸಿನಿಮಾ ಉತ್ತರವೂ ಅಲ್ಲ. ಅಸಲಿಗೆ ‘ಅರ್ಜುನ್ ರೆಡ್ಡಿ’ ಸಿನಿಮಾ ಬಿಡುಗಡೆಗೆ ಮುಂಚೆಯೇ ನಾನು ಈ ಸಿನಿಮಾದ ಕತೆ ಬರೆದಿದ್ದೆ’ ಎಂದಿದ್ದಾರೆ.

ರಶ್ಮಿಕಾ ಮಂದಣ್ಣ ‘ಗರ್ಲ್​​ಫ್ರೆಂಡ್’ ಸಿನಿಮಾದ ನಾಯಕಿ ಆಗಿದ್ದು ದೀಕ್ಷಿತ್ ಶೆಟ್ಟಿ ನಾಯಕ. ಸಿನಿಮಾ ಅನ್ನು ಅಲ್ಲು ಅರವಿಂದ್ ನಿರ್ಮಾಣ ಮಾಡಿದ್ದಾರೆ. ಸಿನಿಮಾ ನವೆಂಬರ್ 07 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ