
ಕೇರಳದಲ್ಲಿ ಜನಪ್ರಿಯವಾಗಿದ್ದ ಗಾಯಕ ಎಡವ ಬಶೀರ್ (Edava Basheer) ಅವರು ನಿಧನರಾಗಿದ್ದಾರೆ. ಮೇ 28ರ ಸಂಜೆ ವೇದಿಕೆ ಮೇಲೆ ಹಾಡು ಹೇಳುತ್ತಿರುವಾಗಲೇ ಅವರು ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅಷ್ಟರಲ್ಲಾಗಲೇ ಕೊನೆಯುಸಿರೆಳೆದು ಎಂಬುದು ತಿಳಿದು ಬಂದಿದೆ. ಎಡವ ಬಶೀರ್ ನಿಧನಕ್ಕೆ (Edava Basheer Death) ಅನೇಕರು ಕಂಬನಿ ಮಿಡಿದಿದ್ದಾರೆ. ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಕೂಡ ಸಂತಾಪ ಸೂಚಿಸಿದ್ದಾರೆ. ಸಾಕಷ್ಟು ಮಲಯಾಳಂ ಸಿನಿಮಾಗಳಲ್ಲಿ (Malayalam Cinema) ಅವರು ಗೀತೆಗಳನ್ನು ಹಾಡಿದ್ದರು. ಆದರೂ ಕೂಡ ಅವರು ಹೆಚ್ಚು ಫೇಮಸ್ ಆಗಿದ್ದು ಆರ್ಕೆಸ್ಟ್ರಾಗಳಲ್ಲಿ. ಕೇರಳದಲ್ಲಿ ಆರ್ಕೆಸ್ಟ್ರಾವನ್ನು (Orchestra) ಜನಪ್ರಿಯಗೊಳಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಅಂಥ ಗಾಯಕ ವೇದಿಕೆಯಲ್ಲಿ ಹಾಡುತ್ತಿರುವಾಗಲೇ ಕುಸಿದು ಬಿದ್ದು ನಿಧನರಾಗಿದ್ದು ವಿಪರ್ಯಾಸವೇ ಸರಿ.
ಬ್ಲೂ ಡೈಮಂಡ್ ಆರ್ಕೆಸ್ಟ್ರಾದ ಸುವರ್ಣ ಮಹೋತ್ಸವದ ಸಲುವಾಗಿ ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂಗೀತ ಸಮಾರಂಭದಲ್ಲಿ ಅವರು ಹಲವು ಗೀತೆಗಳನ್ನು ಹಾಡಿದರು. ಹಿಂದಿಯ ‘ಮಾನಾ ಹೋ ತುಮ್ ಬೇಹದ್ ಹಸೀ..’ ಹಾಡನ್ನು ಹಾಡುತ್ತ ಅವರು ಎಲ್ಲರನ್ನೂ ರಂಜಿಸುತ್ತಿದ್ದರು. ಈ ವೇಳೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತು. ವೇದಿಕೆಯಲ್ಲೇ ಅವರು ಕುಸಿದು ಬಿದ್ದರು.
ಎಡವ ಬಶೀರ್ ಅವರು ಕುಸಿದು ಬೀಳುತ್ತಿರುವ ದೃಶ್ಯ ಕೆಲವರ ಮೊಬೈಲ್ನಲ್ಲಿ ಸೆರೆಯಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಎಡವ ಬಶೀರ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಆರ್ಕೆಸ್ಟ್ರಾದಲ್ಲಿ ಹಲವು ವರ್ಷಗಳ ಕಾಲ ಗಾಯಕನಾಗಿ ಸೇವೆ ಸಲ್ಲಿಸಿದ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದರು. 78ನೇ ವಯಸ್ಸಿಗೆ ಎಡವ ಬಶೀರ್ ಅವರು ಇಹಲೋಕ ತ್ಯಹಿಸಿದ್ದಾರೆ.
ಬಾಲ್ಯದಿಂದಲೇ ಎಡವ ಬಶೀರ್ ಅವರಿಗೆ ಸಂಗೀತದ ಮೇಲೆ ಆಸಕ್ತಿ ಮೂಡಿತ್ತು. ಸ್ವಾತಿ ತಿರುನಾಲ್ ಸಂಗೀತ ಅಕಾಡೆಮಿಯಿಂದ ಅವರು ಸಂಗೀತದಲ್ಲಿ ಪದವಿ ಪಡೆದಿದ್ದರು. ‘ಕೊಲ್ಲಂ ಸಂಗೀತಾಲಯ ಗಾನಮೇಳ’ ತಂಡವನ್ನು ಅವರು ಕಟ್ಟಿದ್ದರು. ಕೇರಳದ ಬಹುತೇಕ ದೇವಾಲಯಗಳ ಉತ್ಸವದಲ್ಲಿ ಎಡವ ಬಶೀರ್ ಹಾಡು ಹೇಳುತ್ತಿದ್ದಾರೆ. ದುರ್ಗಾ ದೇವಿಯನ್ನು ಗುಣಗಾನ ಮಾಡುವ ಹಾಡನ್ನು ಹೇಳುವಂತೆ ಕೇಳುಗರು ಅವರಿಗೆ ಒತ್ತಾಯ ಮಾಡುತ್ತಿದ್ದರು. ದೇಶ-ವಿದೇಶಗಳಲ್ಲೂ ಅವರು ಸಂಗೀತ ಕಾರ್ಯಕ್ರಮಗಳನ್ನು ಮಾಡಿದ್ದರು. ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಹಲವು ದೇಶಗಳಲ್ಲಿ ಅವರು ಹಾಡಿ ಬಂದಿದ್ದರು.
ಕೇರಳ ಸಿಎಂ ಪಿಣರಾಯಿ ವಿಜಯನ್, ಪ್ರತಿಪಕ್ಷ ನಾಯಕ ವಿ.ಡಿ. ಸತೀಶನ್, ಖ್ಯಾತ ಗಾಯಕಿ ಕೆ.ಎಸ್. ಚಿತ್ರಾ ಸೇರಿದಂತೆ ಅನೇಕರು ಎಡವ ಬಶೀರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.