ನಟ ಪ್ರಭಾಸ್ (Prabhas) ಅವರಿಗೆ ಇಂದು (ಅ.23) ಹುಟ್ಟುಹಬ್ಬದ ಸಡಗರ. ಆದರೆ ಅವರು ಈ ವರ್ಷ ಅದ್ದೂರಿಯಾಗಿ ಬರ್ತ್ಡೇ ಆಚರಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ಕೆಲವೇ ದಿನಗಳ ಹಿಂದೆ ಪ್ರಭಾಸ್ ದೊಡ್ಡಪ್ಪ ಕೃಷ್ಣಂ ರಾಜು ಅವರು ನಿಧನ ಹೊಂದಿದ್ದು ನೋವಿನ ಸಂಗತಿ. ಆ ಕಾರಣದಿಂದ ಪ್ರಭಾಸ್ ಈ ಬಾರಿ ಜನ್ಮದಿನವನ್ನು (Prabhas Birthday) ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಿಲ್ಲ. ಆದರೂ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರ ಹರಿದು ಬರುತ್ತಿವೆ. ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ಪ್ರಭಾಸ್ಗೆ ಹುಟ್ಟುಹಬ್ಬದ ಶುಭ ಕೋರುತ್ತಿದ್ದಾರೆ. ಅವರು ನಟಿಸುತ್ತಿರುವ ಸಿನಿಮಾ (Prabhas Movies) ತಂಡಗಳಿಂದ ವಿಶೇಷ ಪೋಸ್ಟರ್ಗಳು ಬಿಡುಗಡೆ ಆಗುತ್ತಿವೆ.
ಪ್ರಭಾಸ್ ಅವರು ಈಗ ‘ಆದಿಪುರುಷ್’ ಮತ್ತು ‘ಸಲಾರ್’ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಬರ್ತ್ಡೇ ಪ್ರಯುಕ್ತ ಈ ಸಿನಿಮಾ ತಂಡಗಳಿಂದ ಸರ್ಪ್ರೈಸ್ ಸಿಗುವ ನಿರೀಕ್ಷೆ ಇದೆ. ಇತ್ತೀಚೆಗೆ ‘ಆದಿಪುರುಷ್’ ಚಿತ್ರದಿಂದ ಟೀಸರ್ ಬಿಡುಗಡೆ ಆಗಿತ್ತು. ಈಗ ಹುಟ್ಟುಹಬ್ಬದ ಸಲುವಾಗಿ ಹೊಸ ಪೋಸ್ಟರ್ ರಿಲೀಸ್ ಆಗಲಿದೆ. ಅದೇ ರೀತಿ, ‘ಸಲಾರ್’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಹೆಚ್ಚು ನಿರೀಕ್ಷೆ ಇದೆ. ಈ ಟೀಮ್ನಿಂದಲೂ ವಿಶೇಷ ಗಿಫ್ಟ್ ಸಿಗುವ ಸಾಧ್ಯತೆ ದಟ್ಟವಾಗಿದೆ. ಅದಕ್ಕಾಗಿ ಅಭಿಮಾನಿಗಳು ಕಾದಿದ್ದಾರೆ.
ಪ್ರಭಾಸ್ ಅವರು ‘ಬಾಹುಬಲಿ’ ಸಿನಿಮಾದ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ. ಅವರು ಮಾಡುವ ಎಲ್ಲ ಸಿನಿಮಾಗಳು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುತ್ತವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರಿಗೆ ಹೇಳಿಕೊಳ್ಳುವಂತಹ ಗೆಲುವು ಸಿಕ್ಕಿಲ್ಲ. ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ‘ಸಾಹೋ’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚು ಸ್ಕೋರ್ ಮಾಡಲಿಲ್ಲ. ಪಕ್ಕಾ ಕ್ಲಾಸ್ ಮಾದರಿಯಲ್ಲಿ ಮೂಡಿಬಂದಿದ್ದ ‘ರಾಧೆ ಶ್ಯಾಮ್’ ಸಿನಿಮಾ ಕೂಡ ಫ್ಲಾಪ್ ಆಯಿತು. ಹಾಗಾಗಿ ಪ್ರಭಾಸ್ ಅವರಿಗೆ ತುರ್ತಾಗಿ ಒಂದು ಗೆಲುವು ಬೇಕಿದೆ.
ಪ್ರತಿ ಸಿನಿಮಾದಲ್ಲಿ ಪ್ರಭಾಸ್ ಅವರು ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡುತ್ತಿದ್ದಾರೆ. ‘ಆದಿ ಪುರುಷ್’ ಚಿತ್ರದಲ್ಲಿ ಅವರು ರಾಮನ ಪಾತ್ರಕ್ಕೆ ಬಣ್ಣ ಹಚ್ಚಿರುವುದು ವಿಶೇಷ. ಆ ಗೆಟಪ್ನಲ್ಲಿ ಅವರು ಹೇಗೆ ಕಾಣುತ್ತಾರೆ ಎಂಬುದು ಈಗಾಗಲೇ ಟೀಸರ್ನಲ್ಲಿ ಗೊತ್ತಾಗಿದೆ. ಕಳಪೆ ಗ್ರಾಫಿಕ್ಸ್ ಎಂಬ ಕಾರಣಕ್ಕೆ ನೆಟ್ಟಿಗರು ಈ ಚಿತ್ರದ ಟೀಸರ್ ಅನ್ನು ಟ್ರೋಲ್ ಮಾಡಿದ್ದಾರೆ ಎಂಬುದು ನಿಜ. ಆದರೆ ಚಿತ್ರದ ಮೇಲೆ ಅಭಿಮಾನಿಗಳು ಇಟ್ಟಿರುವ ಕ್ರೇಜ್ ಕಡಿಮೆ ಆಗಿಲ್ಲ. 2023ರ ಜನವರಿ 12ರಂದು ‘ಆದಿಪುರುಷ್’ ಸಿನಿಮಾ ರಿಲೀಸ್ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.